ಸತ್ಯಂಪೇಟೆಯಲ್ಲಿ ತಂದೆ ತಾಯಿಯರ ಸ್ಮರಣೆಯಲ್ಲಿ ಬಸವ ತತ್ವ ಸಮಾವೇಶ

0
17
ಬಸವಕಲ್ಯಾಣದಲ್ಲಿ ಬಸವಣ್ಣರನ್ನು ರಕ್ಷಣೆ ಮಾಡುತ್ತೇವೆ ಎನ್ನುವವರ ಬಗ್ಗೆ ಎಚ್ಚರ ಬೇಕು-ಖಾಸಾ ಮಠದ ಶ್ರೀ

ಸುರಪುರ: ನಗರದ ಸತ್ಯಂಪೇಟೆಯ ಬಸವ ಪಕ್ಷಿಧಾಮದಲ್ಲಿ ಶರಣ ಗುರಪ್ಪ ಯಜಮಾನರ ೪೧ನೇ,ಶರಣೆ ಶಿವಮ್ಮ ತಾಯಿಯವರ ೧೪ನೇ ಹಾಗೂ ಶರಣ ಲಿಂಗಣ್ಣ ಸತ್ಯಂಪೇಟೆಯವರ ೧೦ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಬಸವ ತತ್ವ ಸಮಾವೇಶ ನಡೆಸಲಾಯಿತು.

ಕಾರ್ಯಕ್ರಮದ ಸಾನಿಧ್ಯವಹಿಸಿದ್ದ ಗುರುಮಠಕಲ್ ಖಾಸಾಮಠದ ಶಾಂತವೀರ ಮುರುಘರಾಜೇಂದ್ರ ಮಹಾಸ್ವಾಮೀಜಿ ಮಾತನಾಡಿ,ಒಂಬೈನೂರು ವರ್ಷಗಳಿಂದ ಬಸವಣ್ಣನವರನ್ನು ವಿರೋಧಿಸುತ್ತಾ ಬಂದವರು ಈಗ ಬಸವಕಲ್ಯಾಣದಲ್ಲಿ ಬಸವಣ್ಣನವರನ್ನು ರಕ್ಷಣೆ ಮಾಡುತ್ತೇವೆ ಎಂದು ಬರುವ ಮುಖಗೇಡಿಗಳ ಬಗ್ಗೆ ಇಂದು ಎಲ್ಲರು ಎಚ್ಚರ ದಿಂದ ಇರಬೇಕು ಎಂದರು.ಅಲ್ಲದೆ ಈ ಭಾಗದಲ್ಲಿಯೇ ಬಸವ ತತ್ವ ಪ್ರಸಾರ ಕಾಯಕದಲ್ಲಿ ಸತ್ಯಂಪೇಟೆ ಮನೆತನ ಸದಾಕಾಲ ಶ್ರಮಿಸುತ್ತಿದೆ.ಇಂದು ತಮ್ಮ ತಂದೆ ತಾಯಿಯರ ಸ್ಮರಣೆ ಅಂಗವಾಗಿ ಇಂತಹ ಒಂದು ಕಾರ್ಯಕ್ಕೆ ಮುಂದಾಗಿರುವ ಮಲ್ಲಿಕಾರ್ಜುನ ಸತ್ಯಂಪೇಟೆಯವರಾದಿಯಾಗಿ ಎಲ್ಲರ ಸೇವೆ ಅಮೋಘವಾಗಿದೆ ಎಂದರು.

Contact Your\'s Advertisement; 9902492681

ಕಾರ್ಯಕ್ರಮ ಉದ್ಘಾಟಿಸಿದ ಹೋರಾಟಗಾರ್ತಿ ಕಲ್ಪನಾ ಗುರಸುಣಗಿ ಮಾತನಾಡಿ,ಇಂದು ದೇಶದಲ್ಲಿ ಮಹಿಳೆಯರು ನಿತ್ಯ ಶೋಷಣೆಗೆ ಒಳಗಾಗುತ್ತಿದ್ದಾರೆ.ಒಂದು ಅಂಕಿಅಂಶಗಳ ಪ್ರಕಾರ ದಿನಕ್ಕೆ ೫೩ ಮಹಿಳೆಯರ ಮೇಲೆ ಅತ್ಯಾಚಾರದಂತಹ ಹೀನ ಕೃತ್ಯಗಳು ನಡೆಯುತ್ತವೆ ಎಂದು ತಿಳಿದು ಇದನ್ನು ನೋಡಿದಾಗ ಸಮಾಜ ಎತ್ತ ಸಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು ಅಲ್ಲದೆ ದೇಶದಲ್ಲಿನ ಆಳುವ ಸರಕಾರಗಳ ಕೆಟ್ಟ ನೀತಿಯಿಂದಾಗಿ ರೈತರ ಸ್ಥಿತಿ ಚಿಂತಾಜನಕವಾಗಿ ನಿತ್ಯವು ಆತ್ಮಹತ್ಯೆ ಮಾಡಿಕೊಳ್ಳುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕಲಬುರ್ಗಿ ಯಾದಗಿರಿ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಡಾ:ಸುರೇಶ ಸಜ್ಜನ್ ಮಾತನಾಡಿ,ನಮಗೆಲ್ಲ ಬಸವ ತತ್ವ ಬೋಧನೆಯಲ್ಲಿ ಲಿಂಗಣ್ಣ ಸತ್ಯಂಪೇಟೆಯವರ ಕೊಡುಗೆ ತುಂಬಾ ಇದೆ.ಇಂದು ನಮ್ಮಲ್ಲಿ ಅನೇಕ ವಚನಗಳು ಬದುಕಿನಲ್ಲಿ ಅಳವಡಿಸಿಕೊಳ್ಳಲು ಪ್ರೇರಣೆಯಾಗಿದ್ದಾರೆ ಎಂದರು.ಅಲ್ಲದೆ ನಗರದ ವೀರಶೈವ ಕಲ್ಯಾಣ ಮಂಟಪದ ಬಳಿಯಲ್ಲಿ ಇನ್ನೂ ಕೆಲವು ತಿಂಗಳುಗಳಲ್ಲಿ ಬಸವಣ್ಣನವರ ಮೂರ್ತಿ ಅನಾವರಣಗೊಳ್ಳಲಿದೆ ಎಂದರು.ಜಿಲ್ಲೆಯ ರೈತರಿಗಾಗಿ ಸಾವಿರಾರು ಕೋಟಿ ರೂಪಾಯಿಗಳ ಸಾಲ ವಿತರಣೆ ಮಾಡಲಾಗುತ್ತಿದೆ,ಜಿಲ್ಲೆಯ ರೈತರು ಇದರ ಸದುಪಯೋಗ ಮಾಡಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಅನುಭಾವಿಗಳಾಗಿ ವೇದಿಕೆ ಮೇಲಿದ್ದ ನಿವೃತ್ತ ಪ್ರಾಂಶುಪಾಲ ಬಸವರಾಜ ಬಾವಿ,ಡಾ: ಗಂಗಮ್ಮ ಸತ್ಯಂಪೇಟೆ ಕೃಷಿ,ಮಹಿಳೆ ಹಾಗೂ ಶರಣ ತತ್ವದ ಕುರಿತು ಅನುಭಾವ ನೀಡಿದರು ಹಾಗೂ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಸಾಹಿತಿ ವಿಶ್ವನಾಥರಡ್ಡಿ ಗೊಂದಡೆಗಿ,ಹೋರಾಟಗಾರ ಚನ್ನಪ್ಪ ಆನೆಗುಂದಿ,ಡಾ:ಶರಣಪ್ಪ ಯಾಳಗಿ,ಮುದ್ದಣ್ಣ ಅಮ್ಮಾಪುರ ,ಗುಂಡಣ್ಣ ಕಲಬುರ್ಗಿ ಹಾಗೂ ಕಾರ್ಯಕ್ರಮದ ಧ್ವಜಾರೋಹಣ ನೆರವೇರಿಸಿದ ಇಂದೂಧರ ಮಹಾಸ್ವಾಮಿ ಗಡಿಸೋಮನಾಳ ಹಾಗೂ ಅಧ್ಯಕ್ಷತೆವಹಿಸಿದ್ದ ಸಾಹಿತಿ ಶಿವಣ್ಣ ಇಜೇರಿ ಮಾತನಾಡಿದರು.

ಇದೇ ಸಂದರ್ಭದಲ್ಲಿ ಹಿರಿಯ ಮುಖಂಡರಾದ ವಕೀಲ ಜಿ.ಎಸ್.ಪಾಟೀಲ್,ಎಸ್.ಎಮ್ ಕನಕರಡ್ಡಿ,ನಿವೃತ್ತ ಪ್ರಾಂಶುಪಾಲ ಬಸವರಾಜಪ್ಪ ನಿಷ್ಠಿ ದೇಶಮುಖ,ಬಸವರಾಜ ಜಮದ್ರಖಾನಿ ರೈತರಾದ ಬನಶಂಕರಯ್ಯಸ್ವಾಮಿ ರುಮಾಲಮಠ,ಮಹಾದೇವಪ್ಪ ಗಾಳೆನೂರ,ಮಲ್ಲಪ್ಪ ನಾಯ್ಕೊಡಿ ಹಾಗೂ ಹಣಮಂತ ಕೊಂಗಂಡಿಯವರಿಗೆ ಸನ್ಮಾನಿಸಲಾಯಿತು.ಕಾರ್ಯಕ್ರಮದ ಆರಂಭದಲ್ಲಿ ವಿಶ್ವಗುರು ಬಸವಣ್ಣನವರ ಹಾಗೂ ಸ್ಮರಣೋತ್ಸವದ ಎಲ್ಲ ಮಹನಿಯರ ಭಾವಚಿತ್ರಗಳಿಗೆ ಮಾಲಾರ್ಪಣೆ ಮಾಡಿ ವಂದಿಸಿದರು.

ಹೋರಾಟಗಾರ ಮಲ್ಲಿಕಾರ್ಜುನ ಸತ್ಯಂಪೇಟೆ ಎಲ್ಲರನ್ನು ಸ್ವಾಗತಿಸಿ ಬಸವ ತತ್ವದ ಅವಶ್ಯಕತೆ ಕುರಿತು ಮಾತನಾಡಿದರು,ಪತ್ರಕರ್ತ ಶಿವರಂಜನ್ ಸತ್ಯಂಪೇಟೆ ಪ್ರಾಸ್ತಾವಿಕವಾಗಿ ಮಾತನಾಡಿದರು,ಕುಮಾರ ಪ್ರಣವ ಸತ್ಯಂಪೇಟೆಯ ಭಾಷಣ ಎಲ್ಲರ ಹುಬ್ಬೇರಿಸುವಂತಿತ್ತು ಹಾಗೂ ಸುವರ್ಣ ಹಿರೇಮಠ ಶಾಂತಾ ಮಂಡಗಳ್ಳಿ ವಚನ ಪ್ರಾರ್ಥನೆ ಮಾಡಿದರು.ಪತ್ರಕರ್ತ ರಾಜು ಕುಂಬಾರ ವಕೀಲ ಸಂಗಣ್ಣ ಗುಳಗಿ ನಿರೂಪಿಸಿದರು,ಶಿವರುದ್ರ ಉಳ್ಳಿ ವಂದಿಸಿದರು.ಕಾರ್ಯಕ್ರಮದಲ್ಲಿ ನೂರಾರು ಸಂಖ್ಯೆಯ ಬಸವಾಭಿಮಾನಿಗಳಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here