ಸುರಪುರ:ನಗರದ ರಂಗಂಪೇಟೆಯ ವೀರಶೈವ ಕಲ್ಯಾಣ ಮಂಟಪದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಸಾಹಿತಿ ಎಮ್.ಎಸ್ ಸಜ್ಜನ್ ಅವರ ನಾಲ್ಕು ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮ ನಡೆಸಲಾಯಿತು.ಸುರಪುರ ರಿಕ್ರಿಯೇಷನ್ ಕ್ಲಬ್ ಅಧ್ಯಕ್ಷ ರಾಜಾ ಮುಕುಂದ ನಾಯಕ ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿದರು.
ಇದೇ ಸಂದರ್ಭದಲ್ಲಿ ಎಮ್.ಎಸ್ ಸಜ್ಜನ್ ಅವರ ಪ್ರಾರ್ಥನ ಯೋಗ,ಸಿರಿಗನ್ನಡ,ಜೀವನ ಜೋಕಾಲಿ ಹಾಗೂ ಅರಿವಿನ ಅರಮನೆ ಕೃತಿಗಳನ್ನು ಬಿಡುಗಡೆಗೊಳಿಸಿದ ಕಲಬುರ್ಗಿ ಯಾದಗಿರಿ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಡಾ:ಸುರೇಶ ಸಜ್ಜನ್ ಮಾತನಾಡಿ,ಇಂದು ಸರಕಾರಗಳು ಸಾಹಿತ್ಯ ವಲಯಕ್ಕೆ ನೀಡುತ್ತಿರುವ ಸಹಕಾರ ಕಡಿಮೆಯಾಗಿದೆ,ಸರಕಾರ ಸಾಹಿತ್ಯದ ಬೆಳವಣಿಗೆಗೆ ಯುವ ಸಾಹಿತಿಗಳಿಗೆ ಹೆಚ್ಚು ಪ್ರೋತ್ಸಾಹ ನೀಡಬೇಕು,ಅದರಂತೆ ಇಂದು ಬಿಡುಗಡೆಗೊಂಡ ನಾಲ್ಕು ಕೃತಿಗಳ ರಚನೆಕಾರರಾಗಿರುವ ಎಮ್.ಎಸ್ ಸಜ್ಜನ್ ಅವರು ಇದುವರೆಗೂ 31 ಕೃತಿಗಳನ್ನು ಬರೆದು ಸಾಧನೆ ಮಾಡಿದ್ದಾರೆ.ಇಂದಿನ ಸಾಹಿತಿಗಳಿಗೆ ಮಾದರಿಯಾಗಿದ್ದಾರೆ.ಮುಂದಿನ ಅವರ ಕೃತಿಯನ್ನು ಜಿಲ್ಲಾ ಮಟ್ಟದಲ್ಲಿ ಸರಕಾರ ಬಿಡುಗಡೆಗೊಳಿಸಲು ಮುಂದಾಗಬೇಕು ಮತ್ತು ಇವರಿಗೆ ಸರಕಾರ ರಾಜ್ಯಮಟ್ಟದ ಪ್ರಶಸ್ತಿ ನೀಡಿ ಗೌರವಿಸಬೇಕು ಎಂದರು.ಅಲ್ಲದೆ ರಾಜಾ ಮುಕುಂದ ನಾಯಕರು ಹಾಗೂ ನಾನು ತಾಲೂಕಿನ ಸಾಹಿತ್ಯ ಪರಿಷತ್ ಬೆಳವಣಿಗೆಗೆ ಸದಾಕಾಲ ನೆರವಾಗುವುದಾಗಿ ಭರವಸೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಲೂಕು ಕಸಾಪ ಅಧ್ಯಕ್ಷ ಶರಣಬಸವ ಯಾಳವಾರ ಮಾತನಾಡಿ,ತಾಲೂಕಿನಲ್ಲಿ ಸಾಹಿತ್ಯ ಪರಿಷತ್ ವತಿಯಿಂದ ಇನ್ನೂ ಅನೇಕ ಕಾರ್ಯಕ್ರಮಗಳ ನಡೆಸುವ ಯೋಜನೆ ಇದ್ದು ಎಲ್ಲರು ಸಹಕಾರ ನೀಡುವಂತೆ ತಿಳಿಸಿದರು.ಅಲ್ಲದೆ ಹಿಂದೆ ಅರಸರಿದ್ದರು ಅದರಂತೆ ಈಗ ಸರಕಾರವಿದೆ ಹಿಂದೆಯೂ ಸಾಹಿತ್ಯಕ್ಕೆ ನೆರವು ನೀಡಿದ್ದರಿಂದ ಸಾಹಿತ್ಯ ಇಷ್ಟೊಂದು ಬೆಳೆಯಲು ಸಾಧ್ಯವಾಗಿದೆ.ಆದ್ದರಿಂದ ಸರಕಾರ ಪಠ್ಯದಲ್ಲಿ ನಮ್ಮ ಸುರಪುರ ಅರಸರ ಪಾಠ ಮುಂದುವರೆಸಬೇಕು ಎಂದು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಸಾಹಿತಿ ಹಾಗೂ ಶಿಕ್ಷಕರಾದ ಶರಣಗೌಡ ಪಾಟೀಲ್ ಜೈನಾಪುರ ಪ್ರಾರ್ಥನ ಯೋಗ ಕೃತಿಯಬಗ್ಗೆ,ಕನಕಪ್ಪ ವಾಗಣಗೇರಾ ಸಿರಿಗನ್ನಡ ಕೃತಿಯ ಬಗ್ಗೆ,ಮಹಾಂತೇಶ ಗೋನಾಲ ಜೀವನ ಜೋಕಾಲಿ ಕೃತಿಯ ಕುರಿತು ಮತ್ತು ಸಿದ್ದಯ್ಯ ಮಠ ಅವರು ಅರಿವಿನ ಅರಮನೆ ಕೃತಿಯ ಕುರಿತು ಮಾತನಾಡಿದರು.
ಇದನ್ನೂ ಓದಿ: ಎಟಿಎಂ ಕೇಂದ್ರ ಆರಂಭಿಸಲು ಕರವೇ ಮನವಿ
ನಂತರ ತಾಲೂಕು ಘಟಕದ ನೂತನ ಪದಾಧಿಕಾರಿಗಳಾದ ಗೌರವಾಧ್ಯಕ್ಷರಾಗಿ ರಾಜಾ ಮುಕುಂದ ನಾಯಕ,ಗೌರವ ಕಾರ್ಯದರ್ಶಿಗಳಾಗಿರುವ ಹೆಚ್.ವಾಯ್ ರಾಠೋಡ,ದೊಡ್ಡಮಲ್ಲಿಕಾರ್ಜುನ ಹುದ್ದಾರ,ಗೌರವ ಕೋಶಾಧ್ಯಕ್ಷರಾಗಿ ವೆಂಕಟೇಶ ಎಮ್.ಪಾಟೀಲ್,ಪರಿಶಿಷ್ಟ ಜಾತಿ ಪ್ರತಿನಿಧಿ ಪ್ರಕಾಶ ಅಲಬನೂರ,ಯಲ್ಲಪ್ಪ ಹುಲಿಕಲ್,ಪರಿಶಿಷ್ಟ ಪಂಗಡ ಪ್ರತಿನಿಧಿ ಮಹೇಶ ಜಾಗೀರದಾರ,ಮಹಿಳಾ ಪ್ರತಿನಿಧಿ ಶಾಂತಾ ಅಪ್ಪಗೋಳ,ಸಂಘ ಸಂಸ್ಥೆಗಳ ಪ್ರತಿನಿಧಿ ಮಲ್ಲಣ್ಣ ಜಾಲಹಳ್ಳಿ,ನಿಕಟಪೂರ್ವ ಅಧ್ಯಕ್ಷ ಶ್ರೀನಿವಾಸ ಜಾಲವಾದಿ, ಸಹಕಾರ್ಯದರ್ಶಿ ಸಿದ್ದಲಿಂಗಯ್ಯಸ್ವಾಮಿ ಕಡ್ಲೆಪ್ಪನವರಮಠ,ವೆಂಕನಗೌಡ ಪಾಟೀಲ್,ಹೊನ್ನಪ್ಪ ಹಾದಿಮನಿ,ಚನ್ನಪ್ಪ ಹೂಗಾರ,ಸಂಘಟನಾ ಕಾರ್ಯದರ್ಶಿಸಾಹೇಬರಡ್ಡಿ ಇಟಗಿ,ಮಹಾದೇವಿ ಆವಟಿ,ಮಾನಪ್ಪ ಚಳ್ಳಗಿ,ರಾಘವೇಂದ್ರ ಮುದನೂರ ಹಾಗೂ ಮಾಧ್ಯಮ ವಕ್ತಾರರಾಗಿ ಹಳ್ಳೇರಾವ ಕುನಕರ್ಣಿ,ಅನ್ವರ ಜಮಾದಾರ,ಜಾವೀದ ಹುಸೇನ,ಮಹಾಂತೇಶ ಹೊಗರಿ ಹಾಗೂ ರಾಘವೇಂದ್ರ ಭಕ್ರಿ ಹಾಗೂ 6 ಜನ ಸದಸ್ಯರು ಇವರುಗಳಿಗೆ ಪದಗ್ರಹಣಗೊಳಿಸಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕ್ಷೇತ್ರ ಸಮನ್ವಯಾಧಿಕಾರಿ ಪಂಡಿತ್ ನಿಂಬೂರ,ಕೃತಿ ರಚನೆಕಾರ ಎಮ್.ಎಸ್ ಸಜ್ಜನ್,ಶ್ರೀನಿವಾಸ ಜಾಲವಾದಿ ಉಪಸ್ಥಿತರಿದ್ದರು.ದೇವು ಹೆಬ್ಬಾಳ ನಿರೂಪಿಸಿದರು,ವೆಂಕಟೇಶಗೌಡ ಸ್ವಾಗತಿಸಿದರು,ಹೆಚ್.ವಾಯ್ ರಾಠೋಡ ವಂದಿಸಿದರು.