ಹಾಲು, ಮೊಸರಿನ ಮೇಲೆ GST; ಹೆಚ್.ಡಿ.ಕುಮಾರಸ್ವಾಮಿ ಹೇಳಿದೇನು?

0
14
ಜಿಎಸ್‌ ಟಿ ನೀತಿ ಮರು ಪರಿಶೀಲನೆಗೆ ಆಗ್ರಹ
ಸಿದ್ದರಾಮಯ್ಯಗೆ ‌2008ರ ಆಪರೇಷನ್‌ ಕಮಲ ನೆನಪಿಸಿದ ಹೆಚ್‌ಡಿಕೆ

ಬೆಂಗಳೂರು: ಜಿಎಸ್ ಟಿ ಮೂಲಕ ಕೇಂದ್ರ ಸರಕಾರವು ಬಡವರನ್ನು ದೋಚುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

Contact Your\'s Advertisement; 9902492681

ಜಿಎಸ್ ಟಿ ಜನ ವಿರೋಧಿ ತೆರಿಗೆ ನೀತಿ. ಪೆಟ್ರೋಲ್ ಬೆಲೆ, ದಿನ ನಿತ್ಯದ ವಸ್ತು ಬೆಲೆ ಏರಿಕೆಯಿಂದ ಜನ ತತ್ತರಿಸಿ ಹೋಗಿದ್ದಾರೆ. ಈಗ ಆಹಾರ ಪದಾರ್ಥಗಳಿಗೆ ಜಿಎಸ್ ಟಿ ವಿಧಿಸಿ ಬಡವರ ಅನ್ನವನ್ನೂ ಕಸಿದುಕೊಳ್ಳಲಾಗುತ್ತಿದೆ. ಅಚ್ಛೇದಿನ್‌ ಎಂದರೆ ಇದೇನಾ? ಇವು ಜನ ವಿರೋಧಿ ಸರಕಾರಗಳು ಎಂದು ಅವರು ಕೇಂದ್ರ ಹಾಗೂ ರಾಜ್ಯ ಸರಕಾರಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ರಾಷ್ಟ್ರಪತಿ ಚುನಾವಣೆಯಲ್ಲಿ ಇಂದು ವಿಧಾನಸೌಧದಲ್ಲಿ ಮತ ಚಲಾಯಿಸುವ ಮುನ್ನ ಅವರು ಸುದ್ದಿಗಾರರ ಜತೆ ಮಾತನಾಡಿದರು.

ಹಾಲು, ಮೊಸರು, ಉಪ್ಪಿನಕಾಯಿ ಮೇಲೆ ತೆರಿಗೆ ಹೆಚ್ಚು ಮಾಡಿ ಬಡವರ ಹೊಟ್ಟೆ ಮೇಲೆ ಹೊಡೆಯುತ್ತಿದ್ದಾರೆ. ತೆರಿಗೆ ಹೆಸರಿನಲ್ಲಿ ಲೂಟಿ ಮಾಡುವುದಕ್ಕೂ ಒಂದು ಮಿತಿ ಬೇಡವೇ? ಇದು ಜನ ವಿರೋಧಿ ನಿರ್ಧಾರ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಕೋವಿಡ್ ನಿಂದಾಗಿ ಆನೇಕ ಕುಟುಂಬಗಳು ಬೀದಿಗೆ ಬಂದಿವೆ. ಇಂತಹ ಪರಿಸ್ಥಿತಿಯಲ್ಲಿ ಜನರ ಮೇಲೆ ಜಿಎಸ್ ಟಿ ಹೊರೆ ಹಾಕಲಾಗುತ್ತಿದೆ. ಜಿಎಸ್ ಟಿಯನ್ನು ನಾನು ಮೊದಲೇ ವಿರೋಧ ಮಾಡಿದ್ದೆ. ರಾಜ್ಯಗಳು ಕೇಂದ್ರಕ್ಕೆ ಹಗ್ಗ ಕೊಟ್ಟು ಕುತ್ತಿಗೆ ಕೊಟ್ಟಿವೆ ಅಂತ ಹೇಳಿದ್ದೆ. ಈ ನೀತಿಯನ್ನು ಮರು ಪರಿಶೀಲನೆ ಮಾಡಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.

ಜಿಎಸ್ ಟಿ ಹೆಚ್ಚಳ ಬಡವರ ಮೇಲೆ ಮಾರಕ ಪ್ರಭಾವ ಬೀರುತ್ತದೆ. ನೇರವಾಗಿ ಬಡವರ ಮೇಲೆ ಹೊರೆ ಆಗುತ್ತದೆ. ಆದರೆ, ಬಿಜೆಪಿ ಜಿಎಸ್ ಟಿಯನ್ನು ಸಮರ್ಥನೆ ಮಾಡುತ್ತಿದೆ. ನೂರು ಸುಳ್ಳು ಹೇಳಿ ಅದನ್ನೇ ಸತ್ಯ ಮಾಡುವುದು ಅವರ ಹುಟ್ಟುಗುಣ. ಎಂಟು ವರ್ಷದಿಂದ ಎಲ್ಲಿ ಒಳ್ಳೆ ದಿನಗಳು ಬಂದಿವೆ? ಡಾಲರ್ ಎದುರು ರೂಪಾಯಿ ಕಥೆ ಏನಾಗಿದೆ? ವಿದೇಶಿ ವಿನಿಮಯ ಕೂಡ ಖಾಲಿ ಆಗುತ್ತಿದೆ. ಕೇಂದ್ರ ಸರ್ಕಾರದ ನೀತಿಯಿಂದ ವಿದೇಶಿ ಕಂಪನಿಗಳು ಬಂಡವಾಳ ವಾಪಸ್ ಪಡೆಯುತ್ತಿವೆ. ಇದರ ಬಗ್ಗೆ ಚರ್ಚೆ ಮಾಡಬೇಕು ಎಂದು ಅವರು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಉಚಿತ ಕಾರ್ಯಕ್ರಮ ಬೇಡ ಎನ್ನುತ್ತಿದ್ದಾರೆ. ಈ ದೇಶದಲ್ಲಿ 1.7 ಮಿಲಿಯನ್ ಜನರು ಆಹಾರದ ಕೊರತೆಯಿಂದ ಸಾಯುತ್ತಿದ್ದಾರೆ. ಶ್ರೀಲಂಕಾಗಿಂತ ನಮ್ಮ ಸ್ಥಿತಿ ಭಿನ್ನವೇನಿಲ್ಲ. ನಮ್ಮ ರಾಷ್ಟ್ರದಲ್ಲಿ ಬಡತನ ಹೆಚ್ಚುತ್ತಿದೆ. ಬಡತನ ರೇಖೆಗಿಂತ ಕೆಳಗೆ ಇರುವ ಜನರನ್ನು ಆರ್ಥಿಕವಾಗಿ ಬಲಗೊಳಿಸಲು ಸರ್ಕಾರ ಕೆಲಸ ಮಾಡಬೇಕು. ಎರಡು ಹೊತ್ತು ಊಟಕ್ಕೆ ಗತಿ ಇಲ್ಲದ ಪರಿಸ್ಥಿತಿ ಇದೆ ಎಂದು ಹೇಳಿದರು.

ರಾಷ್ಟ್ರಪತಿ ಚುನಾವಣೆ ಪಕ್ಷಾಧಾರಿತ ಚುನಾವಣೆ ಅಲ್ಲ. ರಾಷ್ಟ್ರಪತಿಗಳು ದೇಶದ ಪ್ರಥಮ ಪ್ರಜೆ. ರಾಷ್ಟ್ರಪತಿ ಅಭ್ಯರ್ಥಿ ಬಿಜೆಪಿಯವರೇ ಇರಬಹುದು. ಆದರೆ, ಅವರು ಗೆದ್ದ ಮೇಲೆ ಪಕ್ಷಾತೀತವಾಗಿ ಕೆಲಸ ಮಾಡಬೇಕು ಎಂದು ಕುಮಾರಸ್ವಾಮಿ ಅವರು ಅಭಿಪ್ರಾಯಪಟ್ಟರು.

ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಜಾತ್ಯಾತೀತ ಬಗ್ಗೆ ನನಗೆ ಗೊತ್ತಿದೆ. ಸಿದ್ದರಾಮಯ್ಯ ಅವರು, ಯಡಿಯೂರಪ್ಪ 2008ರಲ್ಲಿ ಆಪರೇಷನ್ ಕಮಲ ನಡೆಸಿದಾಗ ಯಡಿಯೂರಪ್ಪ ಜತೆ ಸೇರಿ ಏನು ಮಾಡಿದರೆಂಬುದು ನನಗೆ ಗೊತ್ತಿದೆ ಎಂದು ಚಾಟಿ ಬೀಸಿದರು ಮಾಜಿ ಮುಖ್ಯಮಂತ್ರಿಗಳು.

ನಾನು ತಾಜ್ ವೆಸ್ಟ್ ಆಂಡ್ ನಲ್ಲಿ ಇಲ್ಲದೆ ಹೋಗಿದ್ದರೆ ಸರ್ಕಾರ ಉಳಿಯುತ್ತಿತ್ತು ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಆಯಿತು, ಹಾಗೇ ಅಂದುಕೊಳ್ಳೋಣ. ಆದರೆ, ಮಹಾರಾಷ್ಟ್ರದಲ್ಲಿ ಇವರ ಸರಕಾರ ಯಾಕೆ ಹೋಯಿತು? ಅಷ್ಟೂ ಪ್ರಮಾಣದ ಶಾಸಕರು ಏಕೆ ಹೋದರು? ಈ ಬಗ್ಗೆ ಅವರು ಜನರಿಗೆ ಹೇಳಲಿ ಎಂದು ಸಿದ್ದರಾಮಯ್ಯ ವಿರುದ್ಧ ಹೆಚ್ ಡಿಕೆ ವಾಗ್ದಾಳಿ ನಡೆಸಿದರು.

ನಾನು ಏನು ಅಪರಾಧ ಮಾಡಿದ್ದೆ. ಕಾಂಗ್ರೆಸ್ ಶಾಸಕರ ಕ್ಷೇತ್ರಕ್ಕೆ ನಾನು ಸಿಎಂ ಆಗಿದ್ದಾಗ 19 ಸಾವಿರ ಕೋಟಿ ರೂ. ಅನುದಾನ ಕೊಟ್ಟಿದ್ದೆ. ಈಗ ಅದರ ಸ್ಥಿತಿ ಏನಾಗಿದೆ? ಇದು ಕೊನೆ ಚುನಾವಣೆ ಅಂತಾರೆ ಅವರು. ಈ ಭ್ರಷ್ಟ ಸರಕಾರವನ್ನು ತೆಗೆಯಬೇಕು ಅಂತ ಚುನಾವಣೆ ನಿಲ್ಲುತ್ತೇನೆ ಅಂತ ಹೇಳುತ್ತಾರೆ. ಆದರೆ, ಇಂಥ ಸರಕಾರ ಬರಲು ಯಾರಯ್ಯ ಕಾರಣ? ಎಂದು ಅವರು ಟಾಂಗ್ ಕೊಟ್ಟರು.

ಈ ಭ್ರಷ್ಟಾಚಾರ ವ್ಯವಸ್ಥೆಗೆ ಯಾರು ಕಾರಣ. ಪೊಲೀಸ್ ಹಗರಣದ ಬಗ್ಗೆ ಮಾತಾಡ್ತೀರಾ. ಆದರೆ ಸಿದ್ದರಾಮಯ್ಯ ನಿಮ್ಮ ಕಾಲದಲ್ಲಿ ಭ್ರಷ್ಟಾಚಾರ ಮರೆತು ಹೋಗಿದ್ದೀರಾ?. ಬಿಜೆಪಿ ಮತ್ತು ಕಾಂಗ್ರೆಸ್ ನೀನು ಹೊಡೆದ ಹಾಗೆ ಮಾಡು, ನಾನು ಅತ್ತ ಹಾಗೆ ಮಾಡ್ತೀನಿ ಅನ್ನೋ ಹಾಗೆ ಆಡುತ್ತಿದ್ದಾರೆ ಎಂದು ಕಿಡಿಕಾರಿದರು.

ಸಿದ್ದರಾಮಯ್ಯ ಅವಧಿಯಲ್ಲಿ ಲಾಟರಿ ಹಗರಣದಲ್ಲಿ ಏನು ಮಾಡಿದ್ರಿ. ಯಾರ ಮೇಲೆ ಕ್ರಮ ಆಯಿತು.

ಐಎಎಸ್ ಅಧಿಕಾರಿ ಮನೆಯಲ್ಲಿ 5 ಕೋಟಿ ರೂ. ಸಿಕ್ಕಿತು. ಆ ಅಧಿಕಾರಿಯ ಮೇಲೆ ಏನು ಕ್ರಮ ಜರುಗಿಸಿದಿರಿ, ನಿಮ್ಮ ಕಾಲದಲ್ಲಿ ಬೇಕಾದಷ್ಟು ಭ್ರಷ್ಟಾಚಾರ ನಡೆದಿದೆ. ಬ್ರಹ್ಮಾಂಡದ ಭ್ರಷ್ಟಾಚಾರ ಸಿದ್ದರಾಮಯ್ಯ ಅವರ ಅವಧಿಯಲ್ಲಿ ನಡೆದಿದೆ. ಬೇಕಾದರೆ ಅ ಬಗ್ಗೆ ಚರ್ಚೆ ಮಾಡಬಹುದು ಎಂದು ವಾಗ್ದಾಳಿ ನಡೆಸಿದರು.

ಈ ಸಂದರ್ಭದಲ್ಲಿ ಜೆಡಿಎಸ್‌ ಶಾಸಕಾಂಗ ಪಕ್ಷದ ಉಪ ನಾಯಕರಾದ ಬಂಡೆಪ್ಪ ಕಾಶೆಂಪೂರ್‌, ಮುಖ್ಯ ಸಚೇತಕ ವೆಂಕಟರಾವ್‌ ನಾಡಗೌಡ ಸೇರಿದಂತೆ ಪಕ್ಷದ ಎಲ್ಲ ಶಾಸಕರು ಹಾಜರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here