ವಾಡಿ: ಚುನಾಯಿಸಿದ ಮತದಾರರ ಜೀವನಮಟ್ಟ ಸುಧಾರಣೆಯಾಗಬೇಕು ಎಂಬುದರ ಜತೆಗೆ ಡಾ.ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮ ಮತಕ್ಷೇತ್ರದ ಅಭಿವೃದ್ಧಿ ಹಾಗೂ ಶಿಕ್ಷಣ ಕ್ಷೇತ್ರದ ಪ್ರಗತಿಯನ್ನು ಪ್ರೀತಿಸುವ ಪ್ರಭುದ್ಧ ರಾಜಕಾರಣಿಯಾಗಿದ್ದಾರೆ ಎಂದು ಕೋಲಿ ಸಮಾಜದ ಅಧ್ಯಕ್ಷ ನಾಗೇಂದ್ರ ಜೈಗಂಗಾ ಹೇಳಿದರು.
ಮಾಜಿ ಕೇಂದ್ರ ಮಂತ್ರಿ, ರಾಜ್ಯಸಭೆ ಸದಸ್ಯ ಡಾ.ಮಲ್ಲಿಕಾರ್ಜುನ ಖರ್ಗೆ ಅವರ ೮೦ನೇ ಜನ್ಮದಿನ ಪ್ರಯುಕ್ತ ಪುರಸಭೆ ಸದಸ್ಯೆ ಸುಗಂಧಾ ಜೈಗಂಗಾ ಅವರು ಪಟ್ಟಣದ ಸೇವಾಲಾಲ ನಗರ ತಾಂಡಾದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಲಾಗಿದ್ದ ವಿದ್ಯಾರ್ಥಿಗಳಿಗೆ ನೋಟ್‌ಬುಕ್ ಹಾಗೂ ಪೆನ್ನು ವಿತರಣಾ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು. ವಕೀಲ ವೃತ್ತಿಯಿಂದ ಹಿಡಿದು ಕಾರ್ಮಿಕ ನಾಯಕರಾಗಿ ಬೆಳೆದ ಖರ್ಗೆಯವರು ರಾಜ್ಯದ ಓರ್ವ ಪ್ರಭುದ್ಧ ರಾಜಕೀಯ ನಾಯಕರಾಗಿ ಹೊರಹೊಮ್ಮುವ ಮೂಲಕ ರಾಷ್ಟ್ರ ರಾಜಕಾರಣದಲ್ಲಿ ಗಮನ ಸೆಳೆದಿದ್ದಾರೆ. ಜನಪರ ಕಾಳಜಿಯುಳ್ಳ ಅಭಿವೃದ್ಧಿ ಚಿಂತಕ ಖರ್ಗೆಯವರು ಪ್ರಜಾಪ್ರಭುತ್ವ ವ್ಯವಸ್ಥೆ ಉಳಿಸುವ ಹೋರಾಟಗಾರರಾಗಿದ್ದಾರೆ ಎಂದರು.
ಪುರಸಭೆ ಸದಸ್ಯೆ ಸುಗಂಧಾ ನಾಗೇಂದ್ರ ಜೈಗಂಗಾ ಹಾಗೂ ಕಾಂಗ್ರೆಸ್ ಹಿರಿಯ ಮುಖಂಡ ಟೋಪಣ್ಣ ಕೋಮಟೆ ಕೇಕ್ ಕತ್ತರಿಸಿ ಮಕ್ಕಳಿಗೆ ಸಿಹಿ ಹಂಚಿದರು. ಮುಖಂಡರಾದ ಬಾಬುಮಿಯ್ಯಾ, ಬಾಳು ಚವ್ಹಾಣ, ಅಶ್ರಫ್ ಖಾನ್, ವಿಜಯಕುಮಾರ ಸಿಂಗೆ, ತುಕಾರಾಮ ರಾಠೋಡ, ರಾಹುಲ ಮೇನಗಾರ, ಗೌತಮ ಮೈನಾಳಕರ, ವಿಶಾಲ ನಾಯಕ, ಸುಭಾಷ ರಾಠೋಡ, ಮಲ್ಲಣ್ಣ ರೇವಣ್ಣಗೊಳ, ಮಹಾದೇವ ದೇವಕರ ಸೇರಿದಂತೆ ಸಿಆರ್‌ಪಿ ಸೂರ್ಯಕಾಂತ ದಿಗ್ಗಾಂವ, ಮಾಜಿ ಸಿಆರ್‌ಪಿ ಚಂದ್ರಕಾಂತ, ಮುಖ್ಯಶಿಕ್ಷಕಿ ರೇಣುಕಾ ಬೇವಿನಮರ, ಸಹಶಿಕ್ಷಕರಾದ ಶಾಂತಾ, ರಾಧಾ ರಾಠೋಡ, ಸೀತಾಬಾಯಿ ಹೇರೂರ, ಸುಧಾ ಗುತ್ತೇದಾರ ಪಾಲ್ಗೊಂಡಿದ್ದರು.