ಸುರಪುರ : ನಗರದ ವೇಣುಗೋಪಾಲಸ್ವಾಮಿ ದೇವಸ್ಥಾನದ ಹತ್ತಿರ ಪ್ರಾದೇಶಿಕ ಎಣ್ಣೆ ಬೀಜ ಬೆಳಗಾರರ ಸರಕಾರಿ ಸಂಘಗಳ ಒಕ್ಕೂಟ, ರಾಯಚೂರ ವತಿಯಿಂದ ಸಫಲ್ ಮಾರಾಟ ಮಳಿಗೆಯನ್ನು ಆರಂಭಿಸಲಾಗಿದೆ.
ಮಾರಾಟ ಮಳಿಗೆಯನ್ನು ಉದ್ಘಾಟಿಸಿದ ಕರ್ನಾಟಕ ರಾಜ್ಯ ಎಣ್ಣೆ ಬೀಜ ಮಹಾ ಒಕ್ಕೂಟದ ಉಪಾಧ್ಯಕ್ಷ ಶಂಕ್ರಪ್ಪಗೌಡ ಪೊಲೀಸ್ ಪಾಟೀಲ್ ಮಾತನಾಡಿ, ಖಾದ್ಯ ತೈಲ ಉತ್ಪನ್ನಗಳಿಗೆ ಹೆಸರುವಾಸಿಯಾದ ಕೆಓಎಫ್‌ನಿಂದ ಆರೋಗ್ಯಕರ, ರುಚಿಕರ, ಪರಿಶುದ್ಧ ಆಹಾರ ಉತ್ಪನ್ನಗಳು ಸಿಗುತ್ತವೆ. ಇವು ಪ್ರತಿ ಗೃಹಣಿಯರ ಅಚ್ಚುಮೆಚ್ಚಿನ ಆಯ್ಕೆಯಾಗಿವೆ, ನವೀನ ತಂತ್ರಗಾರಿಕೆಯಿಂದ ಉತ್ತಮ ದರ್ಜೆಯ ಎಣ್ಣೆಗಳ ಮತ್ತು ಇತರೆ ಆಹಾರ ಪದಾರ್ಥಗಳ ತಯಾರಿಕೆಯಲ್ಲಿ ಕೆಓಎಫ್‌ನ ಪಾತ್ರ ಪ್ರಮುಖವಾಗಿದೆ. ಇವು ಸಾಂಪ್ರದಾಯಿಕ ಬಳಕೆಯಲ್ಲಿ ವಿಟಮಿನ್‌ಗಳನ್ನು ಹೊಂದಿರುತ್ತವೆ. ಸದೃಢ ಆರೋಗ್ಯಕ್ಕೆ ಕೆಓಎಫ್‌ನ ಆಹಾರ ಪದಾರ್ಥ ಬಳಸಬೇಕು ಎಂದರು.
ನಮ್ಮ ನಿಯಮಿತದಿಂದ ಈಗಾಗಲೇ ಯಾದಗಿರಿ, ಶಹಾಪುರ ಹಾಗೂ ೧೨ ಗ್ರಾಮೀಣ ಪ್ರದೇಶಗಳ ಸಂಘಗಳಲ್ಲಿ ಮಾರಾಟ ಕೇಂದ್ರಗಳಿವೆ. ನಮ್ಮ ಅಂಗಡಿಗಳಲ್ಲಿ ಕಲಬರಕೆ ಇಲ್ಲದ, ಗುಣಮಟ್ಟದ ಪೌಷ್ಟಿಕಾಂಶ ಆಹಾರ ಪದಾರ್ಥಗಳು, ಖಾದ್ಯ ತೈಲಗಳು, ಸಿರಿಧಾನ್ಯಗಳು ಯೋಗ್ಯ ದರದಲ್ಲಿ ಸಿಗುತ್ತವೆ ಎಂದು ಹೇಳಿದರು.
ಕರ್ನಾಟಕದ ಉದ್ದಗಲಕ್ಕೂ ರೈತರ ಶ್ರಮಕ್ಕೆ ಹಾಗೂ ಗ್ರಾಹಕರ ನಿರೀಕ್ಷೆಗೆ ತಕ್ಕ ಪ್ರತಿಫಲ ನೀಡುವ ಸಂಸ್ಥೆ ಕೆಓಎಫ್ ಆಗಿದೆ. ಯಾದಗಿರಿ ಜಿಲ್ಲೆಯಲ್ಲಿ ಜನರ ಬೇಡಿಕೆಯಂತೆ ಹೊಸ ಶಾಖೆಗಳನ್ನು ತೆರೆಯುವ ಮೂಲಕ ಜನರಿಗೆ ಸಹಕಾರಿಯಾಗಿ ಕೆಲಸ ಮಾಡಲಾಗುವುದು. ಕೆಓಎಫ್ ಅಧಿಕಾರಿ ಮತ್ತು ಸಿಬ್ಬಂದಿಗಳು ಜನರಿಗೆ ಖಾದ್ಯ ತೈಲಗಳ ಮತ್ತು ಆಹಾರ ಪದಾರ್ಥಗಳ ಉಪಯೋಗ, ಮಹತ್ವ ತಿಳಿಸಿ ಜಾಗೃತಿ ಮೂಡಬೇಕು ಎಂದು ಸಲಹೆ ನೀಡಿದರು.
ರಾಯಚೂರು ಕೆಓಎಫ್ ನಿರ್ದೇಶಕ ಬಸವರಾಜ ರ‍್ಯಾಖಾ, ಶರಣಪ್ಪಗೌಡ ಪಾಟೀಲ್ ಕೋಳೂರು, ಶಾಂತರೆಡ್ಡಿ ದೇಸಾಯಿ ನಾಯಕ, ಸಹಾಯಕ ಪ್ರಧಾನ ವ್ಯವಸ್ಥಾಪಕ ಈಶ್ವರ ಕುಲಕರ್ಣಿ, ಮಾರಾಟಗಾರರಾದ ಮಲ್ಲಿಕಾರ್ಜುನ ಪಲ್ಲೇದ್, ಶ್ರೀರಾಮುಲು, ಹುಸೇನ್ ಬಾಷಾ, ಮಾನಪ್ಪ ನಾಲವಾg ಸೇರಿ ಇತರರಿದ್ದರು.