ಹಗರಿಬೊಮ್ಮನಹಳ್ಳಿ: – ವಿಜಯನಗರ ಜಿಲ್ಲೆಯ ಮಧ್ಯಭಾಗದಲ್ಲಿರುವ ಹಾಗೂ ಎಲ್ಲಾ ತಾಲ್ಲೂಕು ಕೇಂದ್ರಗಳಿಗೂ 30 ರಿಂದ 35 ಕಿ.ಮೀ ಮಧ್ಯವಿರುವ ಹಗರಿಬೊಮ್ಮನಹಳ್ಳಿಗೆ ಎಲ್ಲಾ ವಿಭಾಗೀಯ ಕಛೇರಿಗಳನ್ನು ಸ್ಥಳಾಂತರಿಸಬೇಕೆಂದು ಕಾಂಗ್ರೆಸ್ ವಕ್ತಾರ ಪತ್ರೇಶ್ ಹಿರೇಮಠ್ ಹಾಗೂ ಅಹಿಂದ ವೇದಿಕೆಯ ಬುಡ್ಡಿ ಬಸವರಾಜ ಜಂಟಿ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ಅವರು ಹಗರಿಬೊಮನಹಳ್ಳಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಈಗಾಗಲೇ ಹೂವಿನಹಡಗಲಿ ಇದ್ದ ಡಿವೈಎಸ್‍ಪಿ ಕಛೇರಿ, ಪಿಡಬ್ಲುಡಿ, ಜಿ.ಪಂ ಇಂಜನಿಯರಿಂಗ್ ವಿಭಾಗೀಯ ಕಛೇರಿಗಳು ಹೊಸಪೇಟೆಗೆ ಸ್ಥಳಾಂತರಗೊಳ್ಳುತ್ತಿರುವುದು ಖಂಡನೀಯ ಇದರಿಂದ ಅಧಿಕಾರ ವಿಕೇಂದ್ರೀಕರಣ ಪರಿಕಲ್ಪನೆಗೆ ಧಕ್ಕೆಯಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾ ಕೇಂದ್ರ ಹೊಸಪೇಟೆಯಲ್ಲಿ ಜಿಲ್ಲಾ ಕಛೇರಿಗಳನ್ನು ಹೊರತುಪಡಿಸಿ ಉಳಿದ ಎಸಿ ಕಛೇರಿ ಡಿವೈಎಸ್‍ಪಿ ಕಛೇರಿ, ಪಿಡಬ್ಲುಡಿ, ಜಿ.ಪಂ ಇಂಜನಿಯರಿಂಗ್, ಜಿಲ್ಲಾ ಆಸ್ಪತ್ರೆ, ಜೆಸ್ಕಾಂ ಉಗ್ರಾಣ, ಅರಣ್ಯ ಇಲಾಖೆ, ಕೆ.ಆರ್.ಐ.ಡಿ.ಎಲ್ ಸೇರಿದಂತೆ ಎಲ್ಲಾ ವಿಭಾಗೀಯ ಕಛೇರಿಗಳನ್ನು ಹಬೊಹಳ್ಳಿಯಲ್ಲಿ ಸ್ಥಾಪಿಸಬೇಕೆಂದು ಆಗ್ರಹಿಸಿದ ಅವರು ಇದರಿಂದ ಜನಸಾಮಾನ್ಯರಿಗೆ ತುಂಬಾ ಅನುಕೂಲವಾಗಲಿದೆ ಎಂದರು.
ಜಿಲ್ಲಾಧಿಕಾರಿಗಳು ಮತ್ತು ಉಸ್ತುವಾರಿ ಸಚಿವರಿಗೆ ಕಛೇರಿಗಳ ಸ್ಥಳಾಂತರಕ್ಕೆ ಮನವಿ ಪತ್ರ ಸಲ್ಲಿಸುತ್ತಿದ್ದು, ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ಸಂಘ- ಸಂಸ್ಥೆಗಳ ಮತ್ತು ಸಾರ್ವಜನಿಕರ ಸಹಯೋಗದಲ್ಲಿ ಪಕ್ಷಾತೀತವಾಗಿ ಹೊಸಪೇಟೆ ವರೆಗೂ ಪಾದಯಾತ್ರೆ ಹಮ್ಮಿಕೊಳ್ಳುವುದಾಗಿ ಪತ್ರೇಶ್ ಮತ್ತು ಬುಡ್ಡಿ ಬಸವರಾಜ ಎಚ್ಚರಿಸಿದರು.