ಸುರಪುರ: ತಾಲ್ಲೂಕಿನ ಅನೇಕ ಗ್ರಾಮಗಳಲ್ಲಿನ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡಿದ ಕೂಲಿ ಕಾರ್ಮಿಕರಿಗೆ ಹಣ ನೀಡದೆ ಸತಾಯಿಸಲಾಗುತ್ತಿದೆ ಎಂದು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದಿಂದ ನಗರದಲ್ಲಿ ಪ್ರತಿಭಟನೆ ನಡೆಸಿದರು.
ಸೋಮವಾರ ಬೆಳಿಗ್ಗೆ ಡಾ: ಬಾಬಾ ಸಾಹೇಬ ಅಂಬೇಡ್ಕರ ವೃತ್ತದಲ್ಲಿ ಸೇರಿದ ನೂರಾರು ಸಂಖ್ಯೆಯ ಕೂಲಿ ಕಾರ್ಮಿಕರು ಸರಕಾರದ ವಿರುಧ್ಧ ಘೋಷಣೆಗಳನ್ನು ಕೂಗುತ್ತಾ ತಾಲ್ಲೂಕು ಪಂಚಾಯತಿ ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ,ನಂತರ ಕಚೇರಿ ಮುಂದೆ ಎರಡು ಗಂಟೆಗು ಹೆಚ್ಚುಕಾಲ ಧರಣಿ ನಡೆಸಿದರು.
ಈ ಸದಂರ್ಭದಲ್ಲಿ ಮಾತನಾಡಿದ ಮುಖಂಡರು,ತಾಲ್ಲೂಕಿನ ನಾಗರಾಳ,ಕಾಮನಟಿಗಿ,ಆಲ್ದಾಳ,ಬೋನಾಳ ಸೇರಿದಂತೆ ಅನೇಕ ಗ್ರಾಮ ಪಂಚಾಯತಿ ವ್ಯಾಪ್ತಿಗಳಲ್ಲಿನ ಗ್ರಾಮಗಳಲ್ಲಿ ಉದ್ಯೋಗ ಖಾತ್ರಿಯಡಿ ಕೆಲಸ ಮಾಡಿದ ಕಾರ್ಮಿಕರಿಗೆ ಕೂಲಿ ಹಣ ನೀಡದೆ ತೊಂದರೆ ಮಾಡುತ್ತಿದ್ದಾರೆ.ಇದರಿಂದ ಬಡ ಕೂಲಿಕಾರರಿಗೆ ತೀವ್ರ ದರೆಯಾಗಿದ್ದು,ಕಾರ್ಮಿಕರು ಜೀವನ ನಡೆಸಲು ಸಾಧ್ಯವಾಗದಂತಾಗಿದೆ.ಆದ್ದರಿಂದ ಕೂಡಲೆ ಕೂಲಿ ಹಣ ಬಿಡುಗಡೆಗೊಳಿಸಬೇಕು.ಉದ್ಯೋಗ ಖಾತ್ರಿ ಕೆಲಸ ಮಾಡುವ ಸ್ಥಳಗಳಲ್ಲಿ ಕುಡಿಯುವ ನೀರು ಸೇರಿದಂತೆ ಮೂಲ ಸೌಕರ್ಯ ಕಲ್ಪಿಸಬೇಕು.ಅನೇಕ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಜನರು ಉದ್ಯೋಗ ಖಾತ್ರಿ ಜಾಬ್ ಕಾರ್ಡಗಾಗಿ ಅರ್ಜಿ ಸಲ್ಲಿಸಿದ್ದು,ಎಲ್ಲರಿಗು ಜಾಬ್ ಕಾರ್ಡ ನೀಡಬೇಕು.ಕೆಲಸಕ್ಕಾಗಿ ಪಡೆದ ಸಲಕರಣೆಗಳ ಬಾಡಿಗೆ ಹಣವನ್ನು ಕೂಡಲೆ ಬಿಡುಗಡೆಗೊಳಿಸಬೇಕೆಂದು ಒತ್ತಾಯಿಸಿದರು.
ಧರಣಿ ನಿರತರ ಬಳಿಗೆ ತಾಲ್ಲೂಕು ಪಂಚಾಯತಿಯ ಉದ್ಯೋಗ ಖಾತ್ರಿ ಯೋಜನೆಯ ಉಪ ನಿರ್ದೇಶಕ ವಿಶ್ವನಾಥ ಆಗಮಿಸಿ ಪ್ರತಿಭಟನಾಕಾರರ ಮನವಿ ಸ್ವೀಕರಿಸಿ ಮಾತನಾಡಿ,ತಮ್ಮ ಬೇಡಿಕೆಯಂತೆ ಎಲ್ಲಾ ಗ್ರಾಮಗಳಲ್ಲಿನ ಕೂಲಿಕಾರರ ಹಣ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು.ಅಲ್ಲದೆ ಈಗಾಗಲೆ ನಾಗರಾಳ ಮತ್ತು ಕಾಮನಟಿಗಿ ಗ್ರಾಮ ಪಂಚಾಯತಿಗಳಲ್ಲಿನ ಕೂಲಿ ಕಾರ್ಮಿಕರ ಹಣ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿ,ನಂತರ ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಬರೆದ ಮನವಿಯನ್ನು ಸ್ವೀಕರಿಸಿದರು.ಈ ಸಂದರ್ಭದಲ್ಲಿ ಆರಕ್ಷಕ ಉಪ ನಿರೀಕ್ಷಕ ಸೋಮಲಿಂಗ ಒಡೆಯರ್ ಇದ್ದರು.
ಪ್ರತಿಭಟನೆಯಲ್ಲಿ ಸಂಘಟನೆ ಜಿಲ್ಲಾಧ್ಯಕ್ಷ ಖಾಸಿಂ ಸಾಬ ನದಾಫ್,ರಾಜ್ಯ ಜಂಟಿ ಕಾರ್ಯದರ್ಶಿ ಮಲ್ಲಮ್ಮ ಕೊಡ್ಲಿ,ಅಹ್ಮದ ಪಠಾಣ,ಶರಣು ಅನಕಸುಗೂರ,ಮಹಾದೇವಿ,ಮಲ್ಲಮ್ಮ ಗಡದ್,ಇಮಾಂಬಿ ನಬಿಸಾಬ,ಸಯ್ಯದ್ ಖಾಸಿಂ,ಮಾಳಪ್ಪ ಮಾಳೆರ್,ಖಾಜಾಹುಸೇನ್ ಬೊನ್ಹಾಳ,ಲಕ್ಷ್ಮೀ ಅಮಾತೆಪ್ಪ,ದುರಪ್ಪ,ಬಸವರಾಜ ಕಟ್ಟಿಮನಿ,ಶರಣಬಸವ ಜಂಬಲದಿನ್ನಿ,ಪರಶುರಾಮ ಸೇರಿದಂತೆ ಅನೇಕ ಜನ ಮಹಿಳೆಯರು ಹಾಗು ಕಾರ್ಮಿಕರಿದ್ದರು.