ಮತ್ತೆ ಕಲ್ಯಾಣ ಹಾಗೆಂದರೇನು?

0
526

ಕಳೆದ ಎರಡು ತಿಂಗಳಿನಿಂದ ವಾಟ್ಸ್‌ಪ್, ಫೇಸ್‌ಬುಕ್, ಮೆಸೆಂಜರ್, ಟ್ವಿಟರ್ ಮುಂತಾದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ಬಸವಣ್ಣನವರ ಫೋಟೊ ಜೊತೆಗೆ “ಮತ್ತೆ ಕಲ್ಯಾಣ” ಸಂದೇಶ ನೋಡುತ್ತಿದ್ದೆ. ಈ ನಾಡಿನ ಅತ್ಯಂತ ಪ್ರಗತಿಪರ ಸ್ವಾಮೀಜಿಗಳು, ಜೀವಪರ, ಜನಪರವಾಗಿರುವ ಸಾಹಿತಿಗಳು, ಲೇಖಕರು ತಮ್ಮ ಲಘು ಬರಹದೊಂದಿಗೆ ಈ ಕಾರ್ಯಕ್ರಮಕ್ಕೆ ತಮ್ಮ ಸಹಮತ ವ್ಯಕ್ತಪಡಿಸುವುದು, ಬನ್ನಿ, ಕೈ ಜೋಡಿಸಿ! ಎಂದು ಭಿನ್ನವಿಸುವುದನ್ನು ಕಂಡು, “ಮತ್ತೆ ಕಲ್ಯಾಣ” ಹಾಗೆಂದರೇನು? ಎಂದು ಯೋಚಿಸತೊಡಗಿದೆ. ಅಷ್ಟೊತ್ತಿಗಾಗಲೇ ಇದು ಸಾಣೆಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರ ಕನಸು-ಮನಸು ಎಂಬುದು ಗೊತ್ತಾಯಿತು. ಈ ಬಗ್ಗೆ ಅವರನ್ನು ಆ ಮೇಲೆ ಕೇಳಿದರಾಯ್ತು ಎಂದು ಸುಮ್ಮನಾಗಿದ್ದೆ.

Contact Your\'s Advertisement; 9902492681

ಆದರೆ ಇದೇ ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಇದೇನಿದು? ಎಲ್ಲರೂ ತಮ್ಮ ತಮ್ಮ ಫೋಟೊ ಹಾಕಿಕೊಂಡು ಫೋಜು ಕೊಡುತ್ತಿದ್ದಾರೆ. ಇದನ್ನು ಬಸವಕಲ್ಯಾಣ ಎಂದು ಕರೆದಿದ್ದರೆ ಒಳ್ಳೆಯದಿತ್ತು. ಇವರೇನು ಕಲ್ಯಾಣವನ್ನು ಮತ್ತೆ ಸೃಷ್ಟಿ ಮಾಡಲಿಕ್ಕೆ ಆಗುತ್ತದೆಯೇ? ಎಂಬಂತಹ ಅಪಸ್ವರದ ಕೆಲ ಬರಹಗಳು ಸಹ ಕಣ್ಣಿಗೆ ಗೋಚರಿಸಿದವು. ಹೀಗಾಗಿ ಈ ಬಗ್ಗೆ ಸಾಣೆಹಳ್ಳಿ ಪಂಡಿತಾರಾಧ್ಯ ಸ್ವಾಮೀಜಿಯವರನ್ನೇ ಕೇಳೋಣ ಎಂದು ಅವರಿಗೆ ಫೋನಾಯಿಸಿದೆ. ನಾನು ಕೇಳಿದ ಎಲ್ಲ ಪ್ರಶ್ನೆ ಹಾಗೂ ಕೆಲವರ ಸಂಶಯಗಳಿಗೆ ಇಲ್ಲಿ ಅವರು ಉತ್ತಸಿದ್ದಾರೆ ಮಾತ್ರವಲ್ಲ “ಮತ್ತೆ ಕಲ್ಯಾಣ”ಕ್ಕೆ ಆಹ್ವಾನಿಸಿದ್ದಾರೆ.

ಶರಣ ಮಾರ್ಗ: ಮತ್ತೆ ಕಲ್ಯಾಣ ಏನಿದು?

ಸ್ವಾಮೀಜಿ: ೧೨ನೇ ಶತಮಾನದಲ್ಲಿ ಬಸವಣ್ಣನವರ ನೇತೃತ್ವದಲ್ಲಿ ನಡೆದ ಸಾಮೂಹಿಕ ಶರಣ ಚಳವಳಿ ಸಮಾಜದಲ್ಲಿನ ಅನಿಷ್ಟ ಪದ್ಧತಿ, ಮೂಡನಂಬಿಕೆ, ಕಂದಾಚಾರಗಳನ್ನು ನಿವಾರಿಸುವ ಮೂಲಕ ಬದುಕಿನ ಸಾರ್ಥಕತೆಯ ಮಾರ್ಗ ತೋರಿದೆ. ಲಿಂಗ ಸಮಾನತೆಯ ಜೊತೆಗೆ ಜಾತ್ಯತೀತ ಸಮಾಜ ಕಟ್ಟಿದ, ಅರಿವಿನ ಮಾರ್ಗ ತೋರಿದ ವಿನೂತನ-ವಿಶಿಷ್ಟ ಚಳವಳಿ ಅದು. ಆ ಅರಿವಿನ ಮಾರ್ಗವನ್ನು ಮತ್ತೆ ಕಂಡು ಕೊಳ್ಳುವ ಪ್ರಯತ್ನವೇ “ಮತ್ತೆ ಕಲ್ಯಾಣ” ಎಂಬ ಆಂದೋಲನ. ವಿದ್ಯಾರ್ಥಿಗಳನ್ನೇ ಪ್ರಧಾನವಾಗಿಟ್ಟುಕೊಂಡು ರೂಪಿಸಿರುವ ಪ್ರಯೋಗಾತ್ಮಕ ಹೆಜ್ಜೆ ಇದು. ಕನ್ನಡದ ಅಸ್ಮಿತೆಯೊಂದಿಗೆ ಹೆಣೆದುಕೊಂಡಿರುವ “ಮತ್ತೆ ಕಲ್ಯಾಣ” ವೆಂಬ ಹೆಸರು ಒಂದು ಸಂಕೇತವಷ್ಟೇ.

ಶರಣ ಮಾರ್ಗ: ಮತ್ತೆ ಕಲ್ಯಾಣ ಈ ಹೊಸ ಚಿಂತನೆಗೆ ಪ್ರೇರಣೆ ಏನು?

ಸ್ವಾಮೀಜಿ: ಕಳೆದ ನಾಲ್ಕಾರು ವರ್ಷಗಳಿಂದ ಶ್ರಾವಣ ಮಾಸದಲ್ಲಿ ನಮ್ಮ ಭಾಗದಲ್ಲಿ ೩೦ ಹಳ್ಳಿಗಳನ್ನು ಆಯ್ಕೆ ಮಾಡಿಕೊಂಡು ಆ ಗ್ರಾಮಗಳಲ್ಲಿ ಶ್ರಾವಣ ಸಂಜೆ ಕಾರ್ಯಕ್ರಮ ಮಾಡುತ್ತಿದ್ದೇವು. ಕಾರ್ಯಕ್ರಮವಿರುವ ಊರಲ್ಲಿ ಗ್ರಾಮಸ್ಥರೆಲ್ಲರೂ ತಮ್ಮ ಶ್ರಮದಾನದ ಮೂಲಕ ತಮ್ಮೂರಿನ ಸ್ವಚ್ಛತಾ ಕಾರ್ಯ ಮಾಡುತ್ತಿದ್ದರು. ನಂತರ ಸಂಜೆ ಆ ಊರಲ್ಲಿ ಕಾರ್ಯಕ್ರಮ ಏರ್ಪಡಿಸಿ ಶರಣರ ವಿಚಾರಗಳನ್ನು ಹೇಳುತ್ತಿದ್ದೇವು. ಇದು ಬಹಳ ಪರಿಣಾಮಕಾರಿ ಅನಿಸಿತು. ಇದನ್ನು ಎಲ್ಲ ಕಡೆ ಯಾಕೆ ವಿಸ್ತರಿಸಬಾರದು? ಅಂತರಂಗ-ಬಹಿರಂಗ ಶುದ್ಧಗೊಳಿಸುವ ಈ ಪ್ರಕ್ರಿಯೆ ಎಲ್ಲ ಕಡೆ ನಡೆದರೆ ತಪ್ಪೇನು? ಎಂದು ಯೋಚಿಸಿ ಈ ನಿರ್ಧಾರಕ್ಕೆ ಬಂದೆವು.

ಶರಣ ಮಾರ್ಗ: ಇದಕ್ಕೆ ಕಲ್ಯಾಣ ಹೆಸರೇ ಏಕೆ ಬೇಕಿತ್ತು?

ಸ್ವಾಮೀಜಿ: ಕಲ್ಯಾಣ ಎನ್ನುವುದು ಸ್ಥಾಪಿತ ಪದ ಅಲ್ಲ. ಕಲ್ಯಾಣವೆಂದರೆ ಮಂಗಳ, ಒಳಿತು, ಲೇಸು ಇತ್ಯಾದಿ ಅರ್ಥಗಳಿವೆ. ನಮ್ಮೆದುರು ಸದ್ಯ ಮಂಗಳಕರವಾದ ವಾತಾವರಣ ಇಲ್ಲ. ಸಾಮಾಜಿಕ ಅನಿಷ್ಟಗಳಿಂದಾಗಿ ಬದಕು ನರಕವಾಗುತ್ತಿದೆ. ಈ ನರಕದಿಂದ ಹೊರ ಬರುವ ಪ್ರಯತ್ನವೇ “ಮತ್ತೆ ಕಲ್ಯಾಣ” ಪದ ಪ್ರಯೋಗದ ಉದ್ದೇಶ. ಇಂದಿನ ನಮ್ಮ ಸಮಾಜದಲ್ಲಿ ಅಂದಿನ ಶರಣರ ವಿಚಾರಕ್ರಾಂತಿಯ ಬೀಜಗಳನ್ನು ಬಿತ್ತುವುದು ಇದರ ಪ್ರಮುಖ ಆಶಯ. ಇಡೀ ಜಗತ್ತನ್ನೇ ಬದಲಾಯಿಸುತ್ತೇವೆ ಎಂಬ ಭ್ರಮೆ ನಮ್ಮದಲ್ಲ. ಕಿಂಚತ್ತಾದರೂ ಬದಲಾಗಬಹುದು ಎಂಬುದು “ಮತ್ತೆ ಕಲ್ಯಾಣ”ದ ಸದಾಶಯ.

ಶರಣ ಮಾರ್ಗ: ಹಾಗಾದರೆ ಈ ಆಂದೋಲನದ ಸ್ವರೂಪ?

ಸ್ವಾಮೀಜಿ: ಇದು ಕೇವಲ ಒಂದು ಸಮಾರಂಭ, ವಿಚಾರ ಸಂಕಿರಣ ಅಲ್ಲ. ಇಂದಿನ ತಲ್ಲಣದ ಬದುಕಿಗೆ ಇದೇ ನೆಲದಲ್ಲಿ ಜನ್ಮ ತಳೆದ ಶರಣ ಚಳವಳಿಯ ತಾತ್ವಿಕ ಭಿತ್ತಿಯೊಳಗಿನಿಂದ ಪರಿಹಾರಗಳನ್ನು ಹುಡುಕಿಕೊಳ್ಳುವ ಅನ್ವೇಷಣೆ. ಜಾತಿ, ಧರ್ಮ, ಕುಲ, ಭಾಷೆ ಹೆಸರಿನಲ್ಲಿ ಮನುಷ್ಯ ಕುಲ ತನ್ನದೇ ಸಹಜೀವಿಗಳಿಂದ ದೂರ ಸರಿದು, ಪರಸ್ಪರ ಹರಿದು ಹಂಚಿ ಹೋಗುತ್ತಿರುವ ಎಲ್ಲ ಮನಸ್ಸುಗಳು ಜೊತೆಯಾಗಿಯೇ ಮುನ್ನಡೆಯಲು ತೊಡಗುತ್ತಿರುವ ಹೊಸದೊಂದು ಪ್ರಕ್ರಿಯೆ ಇದು. ಆಗಸ್ಟ್ ೧ರಿಂದ ೩೦ರವರೆಗೆ ರಾಜ್ಯದ ಪ್ರತಿಯೊಂದು ಜಿಲ್ಲೆಗೂ ಇಬ್ಬರು ಚಿಂತಕರು ಮತ್ತು ನಾವು ಭೇಟಿ ನೀಡಲಿದ್ದೇವೆ. ಬೆಳಿಗ್ಗೆ ೧೧ ಗಂಟೆಗೆ ಕಾಲೇಜು ವಿದ್ಯಾರ್ಥಿಗಳೊಂದಿಗೆ ಸಂವಾದ, ಸಂಜೆ ೫ ಗಂಟೆಗೆ ಸಾಮರಸ್ಯದ ನಡಿಗೆ, ಸಂಜೆ ೬ ಗಂಟೆಗೆ ಸಾರ್ವಜನಿಕ ಸಮಾವೇಶ ಇರುತ್ತದೆ. ರಾತ್ರಿ ೮.೩೦ಕ್ಕೆ ಸಾಣೆಹಳ್ಳಿ ಶಿವಸಂಚಾರ ಕಲಾ ತಂಡದಿಂದ ನಾಟಕ ಪ್ರದರ್ಶನ, ರಾತ್ರಿ ೧೦ ಗಂಟೆಗೆ ಸಾಮೂಹಿಕ ಪ್ರಸಾದ ಸೇವನೆ ಇರುತ್ತದೆ.

ಶರಣ ಮಾರ್ಗ: “ಮತ್ತೆ ಕಲ್ಯಾಣ”ದ ವೆಚ್ಚ ಭರಿಸುವವರು ಯಾರು?

ಸ್ವಾಮೀಜಿ: ಪ್ರಚಾರಕ್ಕೆ ಅಗತ್ಯವಾಗಿರುವ ಕರಪತ್ರ, ಸಣ್ಣ,ಪುಟ್ಟ ಖರ್ಚಿನ ಹೊಣೆಯನ್ನು ಸಾಣೆಹಳ್ಳಿಯ ಶ್ರೀಮಠದಿಂದ ಮಾಡಲಾಗುತ್ತಿದೆ. ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಈಗಾಗಲೇ ಒಬ್ಬರು ಪ್ರಧಾನ ಸಂಚಾಲಕರನ್ನು ನೇಮಿಸಲಾಗಿದೆ. ಎಲ್ಲ ಸಮುದಾಯಗಳನ್ನು ಒಳಗೊಂಡ ಜಿಲ್ಲಾ ಸಮಿತಿಯನ್ನು ಅವರೇ ರಚಿಸಿಕೊಳ್ಳಬೇಕು. ಇದು ವೀರಶೈವ ಸಮಾವೇಶ ಇಲ್ಲವೇ ಲಿಂಗಾಯತ ಸಮಾವೇಶ ಅಲ್ಲ. ಶುದ್ಧ ಬಸವತತ್ವ, ಶರಣತತ್ವ ಹೇಳುವ ಸಮಾವೇಶವಾಗಿದೆ. ಸ್ಥಳೀಯ ಸಂಪನ್ಮೂಲ ಕ್ರೋಢಿಕರಿಸಿಕೊಂಡು ಮಾಡುವ ಒಂದು ಸರಳ ಸಮಾವೇಶ.

ಶರಣ ಮಾರ್ಗ: “ಮತ್ತೆ ಕಲ್ಯಾಣ”ಕ್ಕೆ ಕೈಜೋಡಿಸುತ್ತಿರುವವರು ಯಾರು?

ಸ್ವಾಮೀಜಿ: ಕನ್ನಡ ನಾಡಿನ ಬಸವತತ್ವದ ಅನುಯಾಯಿಗಳು, ಎಲ್ಲ ಜಾತಿ-ಧರ್ಮಗಳಿಗೆ ಸೇರಿದ ಚಿಂತಕರು, ನಾಡಿನ ಪ್ರಮುಖ ಸ್ವಾಮೀಜಿಗಳು, ಪ್ರಗತಿಪರರು, ಸಾಹಿತಿಗಳು, ಕಲಾವಿದರು, ಸಂಘಟಕರು ಧ್ವನಿಗೂಡಿಸಿದ್ದಾರೆ. ನೀವೂ ಜೊತೆಯಾದರೆ ಇದರ ಶಕ್ತಿ ಮತ್ತಷ್ಟು ಹೆಚ್ಚುತ್ತದೆ.

ಶರಣ ಮಾರ್ಗ: “ಮತ್ತೆ ಕಲ್ಯಾಣ”ದ ಮೂಲ ಆಶಯ?

ಸ್ವಾಮೀಜಿ: ಜಗತ್ತನ್ನು ಬಾಧಿಸುತ್ತಿರುವ ಬಹುತೇಕ ಸಮಸ್ಯೆಗಳಿಗೆ ಅರಿವು, ಅನ್ನ ದಾಸೋಹ ಮತ್ತು ಕಾಯಕ ಇವು ಪರಿಹಾರವಾಗಬಲ್ಲವು. ಇವುಗಳನ್ನು ಬಸವಾದಿ ಶರಣರು ನಡೆ-ನುಡಿಯಲ್ಲಿ ತಂದರು. ಹಾಗಿದ್ದ ಮೇಲೆ ನಾವೇಕೆ “ಮತ್ತೆ ಕಲ್ಯಾಣ”ದೆಡೆಗೆ ನೋಡಬಾರದು ಎಂಬ ಚಿಂತನೆಯಿಂದ ಹುಟ್ಟಿದ್ದೇ “ಸಹಮತ ವೇದಿಕೆ”. ಎಲ್ಲರೊಡಗೂಡಿದ ನಡಿಗೆಯೇ “ಮತ್ತೆ ಕಲ್ಯಾಣ” ಇದೊಂದು ಸಾಮೂಹಿಕ ಪ್ರಯತ್ನ. ಈ ನಡಿಗೆಯಲ್ಲಿ ಸಿಕ್ಕ ಯೋಗ್ಯ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಂಡು ಸಾಣೆಹಳ್ಳಿಯಲ್ಲಿ ೮-೧೦ ದಿನಗಳ ತರಬೇತಿ ಕಾರ್ಯಾಗಾರ ನಡೆಸಿ ಅವರಿಂದ ಶರಣ ತತ್ವದ ಜಾಗೃತಿ ಮೂಡಿಸುವುದೇ ಇದರ ಮೂಲ ಆಶಯ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here