ಶಿವ-೧೪೩ ಚಿತ್ರದ ಪ್ರಚಾರಕ್ಕೆಂದು ಕಲಬುರಗಿ ನಗರಕ್ಕೆ ಆಗಮಿಸಿದ್ದ ನಾಯಕ ಧೀರೆನ್ ರಾಮಕುಮಾರ್ ಅವರು ತಮ್ಮ ಅಚ್ಚುಮೆಚ್ಚಿನ ಮಾವ ಡಾ. ಪುನೀತ್ ರಾಜಕುಮಾರ ಅವರ ಅಭಿ ಸಿನಿಮಾದಿಂದ ಹಿಡಿದು ಅವರ ಕೊನೆಯ ಜೇಮ್ಸ್ ಚಿತ್ರದವರೆಗಿನ ೨೯ ಸಿನಿಮಾಗಳ ಭಾವಚಿತ್ರವುಳ್ಳ ಅಂಗಿ ಧರಿಸಿ ಪ್ರಚಾರಕ್ಕೆ ಆಗಮಿಸಿದ್ದು ವಿಶೇಷವಾಗಿತ್ತು.
ಕಲಬುರಗಿ: ನಗರದ ಶರಣಬಸವೇಶ್ವರ ದೇವಸ್ಥಾನದಲ್ಲಿ ಶ್ರಾವಣ ಮೂರನೇ ಸೋಮವಾರ ಹಿನ್ನೆಲೆ ಹಬ್ಬದ ವಾತಾವರಣ ಉಂಟಾಗಿತ್ತು. ಮಂಗಳವಾರವು ಸಹ ಆ ಸಂಭ್ರಮ ಇನ್ನಷ್ಟು ಇಮ್ಮಡಿಗೊಂಡಿತ್ತು. ಕನ್ನಡ ಚಿಂತ್ರರಂಗದ ದೊಡ್ಮನೆಯ ಮೂರನೇ ಕುಡಿ ಡಾ. ರಾಜಕುಮಾರ ಅವರ ಮೊಮ್ಮಗ ಧೀರೆನ್ ರಾಮಕುಮಾರ್ ಶಿವ-೧೪೩ ಚಿತ್ರದ ಮೂಲಕ ನಾಯಕನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಡ್ತಿರುವ ಅಂಗವಾಗಿ ಕಲಬುರಗಿಗೆ ಆಗಮಿಸಿದರು.
ಶಿವ-೧೪೩ ಚಿತ್ರ ಇದೆ ಆಗಸ್ಟ್ ೨೬ರಂದು ತೆರೆಗೆ ಅಪ್ಪಳಿಸಲಿದೆ. ಅದರ ಪ್ರಯುಕ್ತ ಚಿತ್ರ ಪ್ರಮೋಷನ್ ಕಲಬುರಗಿಯ ಶರಣಬಸವೇಶ್ವರ ದೇವಸ್ಥಾನಕ್ಕೆ ಆಗಮಿಸಿ ದರ್ಶನ ಪಡೆದು ಚಿತ್ರದ ಪ್ರಚಾರ ಕೈಗೊಂಡರು. ಈ ಹಿಂದೆ ಧೀರೆನ್ ಅವರ ಮಾವ ಕರ್ನಾಟಕ ರತ್ನ ದಿ. ಡಾ. ಪುನೀತ್ ರಾಜಕುಮಾರ ಅವರು ಸಹ ಯುವರತ್ನ ಚಿತ್ರದ ಪ್ರಚರಕ್ಕೆ ಕಲಬುರಗಿಗೆ ಆಗಮಿಸಿದ್ದಾಗ ಇದೆ ಶರಣಬಸವೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದರು. ಇದೀಗ ಧೀರನ್ ಸಹ ಆ ಸಂಪ್ರದಾಯ ಮುಂದುವರೆಸುವ ಮೂಲಕ ತಮ್ಮ ನೆಚ್ಚಿನ ಮಾಮನ ಹಾದಿಯಲ್ಲಿಯೇ ಸಾಗಿದ್ದಾರೆ.
ಬಳಿಕ ಮಾತನಾಡಿದ ನಾಯಕ ಧೀರೆನ್ ರಾಮಕುಮಾರ್ ಅವರು, ಕಲಬುರಗಿ ಮತ್ತು ನಮ್ಮ ಕುಟುಂಬದ ಸಂಬಂಧ ಇಂದು ನಿನ್ನೆಯದಲ್ಲ, ಈ ಹಿಂದೆ ನಮ್ಮ ತಾತ ಡಾ. ರಾಜಕುಮಾರ್ ಹಾಗೂ ಮಾವಂದಿರಾದ ಡಾ. ಶಿವರಾಜ್ ಕುಮಾರ್ ಮತ್ತು ಡಾ. ಪುನೀತ್ ರಾಜಕುಮಾರ್ ಅವರು ಹಲವು ಬಾರಿ ಭೇಟಿ ಕೊಟ್ಟಿದ್ದಾರೆ. ಅವರಿಗೆ ನೀಡಿದ ಪ್ರೀತಿ ವಿಶ್ವಾಸ ನನಗೂ ನೀಡಿ ಹಾರೈಸಿ ಎಂದು ಅಭಿಮಾನಿಗಳಿಗೆ ಕೇಳಿಕೊಂಡರು.
ಯುವರತ್ನ ಚಿತ್ರದ ಸಂದರ್ಭದಲ್ಲಿ ನಮ್ಮ ನೆಚ್ಚಿನ ಅಪ್ಪು ಅವರು ಇದೆ ಪವಿತ್ರ ಸ್ಥಳದಿಂದ ಪ್ರಚಾರ ಆರಂಭಿಸಿದರು. ಅವರ ಹಾದಿಯಲ್ಲಿ ಸಾಗುತ್ತಿರುವ ನನಗೂ ನಿಮ್ಮೆಲರ ಪ್ರೋತ್ಸಾಹಬೇಕು. ಹೀಗಾಗಿ ಇದೇ ೨೬ ರಂದು ಬಿಡುಗಡೆಗೆ ಸಿದ್ದವಾಗಿರುವ ಶಿವ-೧೪೩ ಚಿತ್ರವನ್ನು ಎಲ್ಲರೂ ಚಿತ್ರಮಂದಿರಕ್ಕೆ ಹೋಗಿ ವೀಕ್ಷಿಸಿ ಎಂದು ಹೇಳಿದ ಅವರು, ಕಲಬುರಗಿಯ ಅಭಿಮಾನಿ ದೇವರುಗಳ ಈ ಪ್ರೀತಿ ಯಾವತ್ತೂ ಮರೆಯೋದಿಲ್ಲ ಎಂದರು.
ಇದಕ್ಕೂ ಮುನ್ನ ನಗರದ ಜಗತ್ ವೃತ್ತದಿಂದ ಗೋವಾ ಹೋಟೆಲ್ ವರೆಗೂ ಬೈಕ್ ರ‍್ಯಾಲಿ ಮೂಲಕ ಆಗಮಿಸಿ, ಬಳಿಕ ರಥದಲ್ಲಿ ಮೆರವಣಿಗೆ ನಡೆಸಲಾಯಿತು. ಶರಣನ ಸನ್ನಿದಾನಕ್ಕೆ ಆಗಮಿಸುತ್ತಿದ್ದಂತೆ ಅಭಿಮಾನಿಗಳು ಜೆಸಿಬಿ ವಾಹನ ಮೇಲಿಂದ ಹೂಮಳೆಗೈದು, ಬೃಹದಾಕರಾದ ಹೂಮಾಲೆ ಹಾಕಿ ಅದ್ದೂರಿಯಾಗಿ ಸ್ವಾಗತಿಸಿದ್ದರು. ಮೆರವಣಿಗೆಯುದ್ಧಕ್ಕೂ ಅಪ್ಪುವಿನ ಹಾಡುಗಳ ಅಬ್ಬರವೇ ಇತ್ತು. ಅಪ್ಪು, ಅಪ್ಪು, ಅಪ್ಪು ಎಂಬ ಕೂಗು ಕೇಳುತ್ತಿದಂತೆ ಧೀರೆನ್ ಅಪ್ಪುನಿನ ಹೆಸರು ಕೂಗುವಂತೆ ಅಭಿಮಾನಿಗಳಿಗೆ ಸನ್ನೆ ಮಾಡಿ ಹುರಿದುಂಬಿಸಿ ಸಂಭ್ರಮಿಸಿದರು.
ಮತ್ತೆ ಮೊಳಗಿದ ಬೋಂಬೆ ಹಾಡು: ಅಭಿಮಾನಿಗಳು ಜೋರಾಗಿ ಅಪ್ಪು ಅಪ್ಪು ಎಂದು ಕೂಗಿತ್ತಿದ್ದಾಗ, ಧೀರೆನ್ ಅವರು ಪುನೀತ್ ಅಭಿನಯದ ರಾಜಕುಮಾರ ಚಿತ್ರ ಪ್ರಸಿದ್ಧ ಹಾಡು “ಬೋಂಬೆ ಹೇಳುತೈತೆ ಮತ್ತೆ ಹೇಳುತೈತೆ ನೀನೇ ರಾಜಕುಮಾರ” ಗೀತೆ ಹಾಡುವಾಗ ನೇರೆದಿದ್ದ ಅಭಿಮಾನಿಗಳು ಸಹ ಧ್ವನಿಗೂಡಿಸಿ ಅಪ್ಪುವಿನ ಸ್ಮರಣೆ ಮಾಡಿದರು. ಈ ಸಂದರ್ಭದಲ್ಲಿ ಕ್ರೇಡೆಲ್ ಅಧ್ಯಕ್ಷ ಚಂದು ಪಾಟೀಲ್, ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ನಿತೀನ್ ಗುತ್ತೇದಾರ, ಹಾಗೂ ಸಂದೇಶ್ ಕಮಕನೂರು ಸೇರಿ ಅನೇಕರು ಇದ್ದರು.