ಚಿಂಚೋಳಿ : ಕಲಬುರಗಿ ಜಿಲ್ಲೆಯಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಅಪಾರ ಪ್ರಮಾಣದಲ್ಲಿ ಬೆಳೆಗಳು ಹಾಳಾಗಿದ್ದು ಹೀಗಾಗಿ ರಾಜ್ಯ ಸರ್ಕಾರ ಕೂಡಲೆ ಪ್ರತಿ ಎಕರೆಗೆ 25ಸಾವಿರ ರೂ ಪರಿಹಾರ ಕಲ್ಪಿಸಬೇಕು ಬಾಲರಾಜ್ ಗುತ್ತೇದಾರ್ ಬ್ರೀಗೇಡ್ ಸುಲೇಪೇಟ ವಲಯದ ಅಧ್ಯಕ್ಷ ಮೋಹಿನ್ ಮೋಮಿನ್ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೋರಡಿಸಿರುವ ಅವರು ಕಲಬುರಗಿ ಜಿಲ್ಲೆಯಲ್ಲಿ ಮಳೆಯಿಂದಾಗಿ ಅತಿ ಹೆಚ್ಚು ಬೆಳೆಗಳು ನಾಶವಾಗಿವೆ. ಬೆಳೆ ಇದ್ದರೆ ಬೆಲೆ ಇಲ್ಲ, ಬೆಲೆ ಇದ್ದರೆ ಬೆಳೆ ಇಲ್ಲ ಇವರೆಡು ಇದ್ದರೆ ಪ್ರಕೃತಿ ವಿಕೋಪದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗದೇ ಜಿಲ್ಲಾದ್ಯಂತ ಮಳೆಯ ಆರ್ಭಟಕ್ಕೆ ಲಕ್ಷಾಂತರ ರೂ.ಬಂಡವಾಳ ಹಾಕಿ ಬೆಳೆದಿರುವ ಹತ್ತಿ, ತೊಗರಿ, ಸೇರಿದಂತೆ ಇತರೆ ಬೆಳೆ ನಾಶವಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.ಸತತವಾಗಿ 2 ವರ್ಷಗಳ ಕಾಲ ಸಾಂಕ್ರಾಮಿಕ ರೋಗಗಳ ಹಾವಳಿ ನಡುವೆ ರೈತರು ಸಾಕಷ್ಟು ತೊಂದರೆ ಅನುಭವಿಸಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಈಗ ಮತ್ತೆ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ರೈತರಿಗೆ ದಿಕ್ಕು ತೋಚದಂತಾಗಿದೆ. ಸಾಲ ಮಾಡಿ ಬೀಜ ಹಾಗೂ ರಸಗೊಬ್ಬರಗಳನ್ನ ಖರೀದಿ ಮಾಡಿ ಬಿತ್ತನೆ ಮಾಡಿದ ರೈತರು ಈಗ ಮಳೆರಾಯನ ಆರ್ಭಟದಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ.ಹೀಗಾಗಿ ಬಿಜೆಪಿ ಪಕ್ಷದವರು ರೈತರ ಹೆಸರಿನ ಮೇಲೆ ಹಸಿರು ಶಾಲು ಹಾಕಿಕೊಂಡು ಪ್ರಮಾಣವಚನ ಸ್ವೀಕರಿಸಿದ್ದಾರೆ ಹೀಗಾಗಿ ಕೇಂದ್ರ ಹಾಗೂ ರಾಜ್ಯದಲ್ಲಿ ಅವರದ್ದೇ ಸರ್ಕಾರ ಇರುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಈ ಭಾಗಕ್ಕೆ ಪರಿಹಾರ ಕಲ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ.
ಮಳೆಯಿಂದ ಹಾನಿಯಾಗಿರುವ ಬೆಳೆಗಳ ಬಗ್ಗೆ ಸರ್ಕಾರ ಸಮೀಕ್ಷೆ ನಡೆಸಿ ಪ್ರತಿ ಎಕರೆಗೆ 25 ಸಾವಿರ ಪರಿಹಾರವನ್ನು ವಿತರಣೆ ಮಾಡಬೇಕು. ಅಲ್ಲದೆ ಮಳೆಯಿಂದಾಗಿ ಸಾಕಷ್ಟು ಬಡಜನರ ಮನೆಗಳು ಹಾಳಾಗಿವೆ ಇದನ್ನು ಸಹ ಸಮೀಕ್ಷೆ ಮಾಡಿ ಯಾವುದೇ ಬಡಜನರಿಗೆ ಅನ್ಯಾಯ ಆಗಲಾರದಂತೆ ಪರಿಹಾರ ವಿತರಿಸಬೇಕು.ಮನೆ ಕಳೆದುಕೊಂಡವರಿಗೆ ಕೇವಲ ಹತ್ತು ಸಾವಿರ ರೂಪಾಯಿ ಸರ್ಕಾರ ಘೋಷಣೆ ಮಾಡಿರುವುದು ಅವೈಜ್ಞಾನಿಕವಾಗಿದೆ.ತಕ್ಷಣ ಅವರಿಗೆ 50 ಸಾವಿರ ರೂ.ಗಳನ್ನು ನೀಡಿ ಸರ್ಕಾರದಿಂದ ಮನೆ ನಿರ್ಮಾಣ ಮಾಡಿಕೊಡಬೇಕು ಜೊತೆಗೆ ರೈತರ ಸಾಲ ಮನ್ನ ಮಾಡಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.