ಕಲಬುರಗಿ: ದೇಶದ ಅಭಿವೃದ್ಧಿಯಲ್ಲಿ ಸರ್ ಎಂ.ವಿಶ್ವೇಶ್ವರಯ್ಯ ನವರ ಕೊಡುಗೆ ಅನನ್ಯವಾಗಿದೆ ಎಂದು ಕಾಂಗ್ರೇಸ್ ಮುಖಂಡ ನೀಲಕಂಠರಾವ ಮೂಲಗೆ ಅಭಿಮತ ವ್ಯಕ್ತಪಡಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ನಗರದ ಎ.ಕೆ.ಆರ್. ದೇವಿ ವಿಜ್ಞಾನ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ಆಯೋಜಿಸಿದ ಕಸಾಪ ದ ಸಂಸ್ಥಾಪಕರಲ್ಲೊಬ್ಬರಾದ ಭಾರತ ರತ್ನ ಸರ್ ಎಂ.ವಿಶ್ವೇಶ್ವರಯ್ಯ ನವರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸರ್ ಎಂ.ವಿಶ್ವೇಶ್ವರಯ್ಯ ನವರು ಕೇವಲ ವಿಜ್ಞಾನಿಗಳಾಗಿರಲಿಲ್ಲ. ಅವರು ಶ್ರೇಷ್ಠ ಸಾಹಿತಿಗಳೂ ಕೂಡ ಆಗಿದ್ದರು. ತಂತ್ರಜ್ಞಾನ ಕ್ಷೇತ್ರದ ಜತೆಯಲ್ಲಿ ಸಾಹಿತ್ಯ ಲೋಕಕ್ಕೂ ಅಪಾರವಾದ ಕೊಡುಗೆ ನೀಡಿದ್ದಾರೆ. ಅವರ ತತ್ವಾದರ್ಶ ನಾವೆಲ್ಲರೂ ಜೀವನದಲ್ಲಿ ಅಳವಡಿಸಿಕೊಂಡಿದ್ದೇ ಆದರೆ ನಮ್ಮ ದೇಶವು ಭ್ರಷ್ಟಾಚಾರ ಮುಕ್ತವಾಗುವುದರಲ್ಲಿ ಸಂದೇಹವಿಲ್ಲ ಎಂದರು.
ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ಸರ್ ಎಂ.ವಿಶ್ವೇಶ್ವರಯ್ಯ ನವರು ಕನ್ನಡ ಸಾಹಿತ್ಯ ಪರಿಷತ್‌ನ ಸಂಸ್ಥಾಪಕರಲ್ಲಿ ಒಬ್ಬರಾಗಿದ್ದಾರೆ. ಕನ್ನಡ ಸಾಹಿತ್ಯಕ್ಕೆ ಅವರು ನೀಡಿದ ಕೊಡುಗೆಯನ್ನು ಸ್ಮರಿಸುವ ಉದ್ದೇಶದಿಂದ ಪರಿಷತ್ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಅವರ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸುತ್ತಿದೆ ಎಂದರು.
ಪಿಡಿಎ ತಾಂತ್ರಿಕ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ. ಬಾಬುರಾವ ಶೇರಿಕಾರ ಉಪನ್ಯಾಸ ನೀಡಿ, ಭಾರತ ರತ್ನ ಸರ ಎಂ.ವಿಶ್ವೇಶ್ವರಯ್ಯ ನವರು ದೇಶಕ್ಕೆ ಕೊಟ್ಟ ಕೊಡುಗೆಯನ್ನು ತಿಳಿಸಿಕೊಟ್ಟರು.
ಎಕೆಆರ್ ದೇವಿ ಪಿಯು ಕಾಲೇಜಿನ ಆಡಳಿತಾಧಿಕಾರಿ ವಿದ್ಯಾಸಾಗರ ದೇಶಮುಖ, ಖ್ಯಾತ ವಿಜ್ಞಾನಿ ಡಾ.ಬಸವರಾಜ ಪಾಟೀಲ ಮಹಾಗಾಂವ, ಜಿಲ್ಲಾ ಸರಕಾರಿ ನೌಕರರ ಸಂಘದ ಕಾರ್ಯಾಧ್ಯಕ್ಷ ಚಂದ್ರಕಾಮತ ಏರಿ, ಪಾಲಿಕೆ ಸದಸ್ಯೆ ಲತಾ ರವಿ ರಾಠೋಡ, ಎಂ.ವಿ.ಎಸ್. ಸುಬ್ರಹ್ಮಣ್ಯಂ, ಮಡಿವಾಳಪ್ಪ ನಾಗರಳ್ಳಿ, ಶಿವರಾಜ ಅಂಡಗಿ, ರವೀಂದ್ರಕುಮಾರ ಭಂಟನಳ್ಳಿ, ರಾಜೇಂದ್ರ ಮಾಡಬೂಳ, ಶರಣಬಸಪ್ಪ ನರೂಣಿ, ಶರಣಬಸವ ಜಂಗಿನಮಠ, ಭಗವಂತಪ್ಪ ಹೊನ್ನಕೀರಣಗಿ, ಕಸಾಪ ದಕ್ಷಿಣ ವಲಯ ಅಧ್ಯಕ್ಷ ಶಾಂಸುಮದರ ಕುಲಕರ್ಣಿ, ಕಿರಣ ಗೋಡಬಾಲೆ, ರಾಜಶೇಖರ ಕೋರೆ, ಡಾ.ಶಿವರಾಜ ಪಾಟೀಲ, ಹೆಚ್.ಎಸ್.ಬರಗಾಲಿ, ಜಗದೀಶ ಮರಪಳ್ಳಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.