ಸುರಪುರ: ಮುಖ್ಯಮಂತ್ರಿಗಳು ರಾಜ್ಯದಲ್ಲಿನ ಕೋಲಿ, ಟೋಕರಿ ಕೋಲಿ, ಕಬ್ಬಲಿಗ, ಗಂಗಾತಮ ಸಮುದಾಯಕ್ಕೆ ತಳವಾರ ಸಮುದಾಯವನ್ನು ಎಸ್‌ಟಿಗೆ ಸೇರ್ಪಡೆಗೊಳಿಸುತ್ತೇವೆ ಎಂಬುದಾಗಿ ಸಿಂಧಗಿ ಉಪ ಚುನಾವಣೆ ಸಂದರ್ಭದಲ್ಲಿ ವಚನ ನೀಡಿ ಗೆಲುವು ಪಡೆದ ಬಳಿಕ ಮಾತು ತಪ್ಪಿದ್ದಾರೆ ಹಾಗೂ ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ಅವರು ನಮ್ಮ ಸಮುದಾಯ ಎಸ್ಟಿಗೆ ಸೇರಿಸದಿದ್ದಲ್ಲಿ ರಾಜೀನಾಮೆ ನೀಡುತ್ತೇನೆ ಎಂದವರು ಯಾಕೆ ನೀಡಲಿಲ್ಲ. ಕೋಲಿ, ಟೋಕರಿ ಕೋಲಿ, ಕಬ್ಬಲಿಗ, ಗಂಗಾತಮ ಸಮುದಾಯವನ್ನು ತಮ್ಮ ರಾಜಕೀಯ ಲಾಭಕ್ಕೆ ಬಳಸಿಕೊಳ್ಳುವ ಮೂಲಕ ಅನ್ಯಾಯ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಹಿಂದುಳಿದ ವರ್ಗ ವಿಭಾಗದ ರಾಜ್ಯ ಕಾರ್ಯದರ್ಶಿ ಭಂಡಾರಪ್ಪ ಎಂ. ನಾಟೇಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಪರಿಶಿಷ್ಟ ಜಾತಿಗೆ ಸೇರಿಸುವ ಬಿಜೆಪಿ ಮಾತು ನಂಬಿ ಕೋಲಿ, ಟೋಕರಿ ಕೋಳಿ, ಗಂಗಾಮತ, ಕಬ್ಬಲಿಗ, ಅಂಬಿಗರ ಸೇರಿದಂತೆ ಹಲವಾರು ಪದಗಳನ್ನು ಹೊಂದಿರುವ ಸಮುದಾಯಕ್ಕೆ ಬಿಜೆಪಿ ವಂಚನೆ ಮಾಡಿದೆ. ಸಮುದಾಯದ ಹೆಸರಿನಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿರುವ ಬಾಬುರಾವ್ ಚಿಂಚನಸೂರ್ ಆತ್ಮಸಾಕ್ಷಿಯಿದ್ದರೆ ಕೂಡಲೇ ರಾಜೀನಾಮೆ ನೀಡಿ ತೋರಿಸಲಿ, ಸಮುದಾಯವನ್ನು ಎಸ್‌ಟಿ ಆಗುವವರೆಗೂ ಪ್ರತಿಭಟನೆಗೆ ಮುಂದಾಗುತ್ತಾರೆಯೇ ಎಂದು ಪ್ರಶ್ನಿಸಿದ್ದಾರೆ.
ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಸರಕಾರವಿದ್ದರೂ ಯಾಕೆ ಗಂಗಾಮತ, ಕಬ್ಬಲಿಗ ಸಮುದಾಯವನ್ನು ಎಸ್ಟಿಗೆ ಸೇರಿಸಲು ಚಿಂಚನಸೂರ್ ಅವರಿಗೆ ಸಾಧ್ಯವಾಗಿಲ್ಲ? ಏಕೆಂದರೆ ಬಿಜೆಪಿಯಿಂದ ಸಮುದಾಯದ ಹೆಸರಿನಲ್ಲಿ ವಿಧಾನ ಪರಿಷತ್ ಸದಸ್ಯರಾಗಿದ್ದಾರೆ. ಅವರಿಗೆ ಸಮುದಾಯ ಅಭಿವೃದ್ಧಿ ಹೊಂದುವುದು ಬೇಕಾಗಿಲ್ಲ. ತಮ್ಮ ಕುಟುಂಬಕ್ಕೆ ಸರಕಾರದ ಮೂರು ಅಧಿಕಾರಿಗಳನ್ನು ಪಡೆದು ಸಮಾಜದ ಜನರಿಗೆ ಮೋಸ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
೩೦ ವರ್ಷದಿಂದ ಸಮುದಾಯದ ಹೆಸರಿನಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಬಿಜೆಪಿಯಲ್ಲಿ ಪ್ರಸ್ತುತ ಚಿಂಚನಸೂರ್ ಅವರು ಅಂಬಿಗರ ಚೌಡಯ್ಯ ನಿಗಮ ಮಂಡಳಿ ಅಧ್ಯಕ್ಷರು, ವಿಧಾನ ಪರಿಷತ್ ಸದಸ್ಯ, ಬಿಜೆಪಿ ರಾಜ್ಯ ವಿಶೇಷ ಕಾರ್ಯಕಾರಣಿ ಸದಸ್ಯ, ಬಿಜೆಪಿ ಯಾದಗಿರಿ ಜಿಲ್ಲೆಯ ಕೋರ್ ಕಮಿಟಿ ಬಾಬುರಾವ್ ಪತ್ನಿ ಸದಸ್ಯೆ, ಅಣ್ಣನ ಮಗನಿಗೆ ಭಾರತ ಸರಕಾರ ಆಹಾರ ನಿಗಮ ಮಂಡಳಿಯ ನಿರ್ದೇಶಕ, ಬಿಜೆಪಿ ಯಾದಗಿರಿ ಜಿಲ್ಲೆಯ ಒಬಿಸಿ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಹುದ್ದೆಗಳು ಕುಟಂಬಕ್ಕೆ ಮತ್ತು ಅವರಿಗೆ ಮೀಸಲಾಗಿವೆ. ಸಮಾಜಕ್ಕಿಂತ ಕುಟುಂಬಕ್ಕೆ ಒತ್ತು ನೀಡಿರುವ ಅವರಿಗೆ ಕೋಲಿ ಮತ್ತು ಕಬ್ಬಲಿಗ, ಗಂಗಾಮತ ಸಮುದಾಯ ತಕ್ಕ ಪಾಠ ಕಲಿಸಲಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.