ಸೊಲ್ಲಾಪುರ: ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಸಿ.ಸೋಮಶೇಖರ ಅವರಿಗೆ ರಾಜ್ಯ ಸಚಿವರ ದರ್ಜೆ ಸ್ಥಾನಮಾನ ದೊರೆತ್ತಿರುವುದರಿಂದ ಗಡಿಭಾಗದ ಕನ್ನಡಿಗರಿಗೆ ತುಂಬಾ ಸಂತಸ ತಂದಿದೆ ಎಂದು ಕಸಾಪ ಮಹಾರಾಷ್ಟ್ರ ಘಟಕದ ಅಧ್ಯಕ್ಷ ಸೋಮಶೇಖರ್ ಜಮಶೆಟ್ಟಿ ಹೇಳಿದರು.
ಇತ್ತಿಚೆಗೆ ಕನ್ನಡ ಸಾಹಿತ್ಯ ಪರಿಷತ್ತು ಮಹಾರಾಷ್ಟ್ರ ಘಟಕ ಹಾಗೂ ಆದರ್ಶ ಕನ್ನಡ ಬಳಗದ ಪದಾಧಿಕಾರಿಗಳು ಬೆಂಗಳೂರಿಗೆ ತೆರಳಿ, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಿಗೆ ರಾಜ್ಯ ಸಚಿವರ ದರ್ಜೆ ಸ್ಥಾನಮಾನ ದೊರೆತ್ತಿರುವುದರಿಂದ ಅವರನ್ನು ಸನ್ಮಾನಿಸಲಾಯಿತು.
ಗಡಿ ಪ್ರದೇಶದ ವ್ಯಾಪ್ತಿಯಲ್ಲಿ ಗುರುತಿಸಿರುವ ತಾಲ್ಲೂಕುಗಳಲ್ಲಿ ಕನ್ನಡ ಭಾಷೆ, ಸಂಸ್ಕೃತಿ ಮತ್ತು ಶಿಕ್ಷಣ ಸೇರಿದಂತೆ ವಿವಿಧ ಕನ್ನಡಪರ ಎಲ್ಲ ಕ್ಷೇತ್ರಗಳಲ್ಲೂ ಅಭಿವೃದ್ಧಿಗೊಳಿಸುತ್ತಿದ್ದಾರೆ. ಕನ್ನಡ ಜನರು, ನೆರೆಯ ರಾಜ್ಯದ ಭಾಷೆ ಸಂಸ್ಕೃತಿ ಪ್ರಭಾವಕ್ಕೆ ಸಿಲುಕಿ ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ, ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಕನ್ನಡ ಪರಿಸರದಿಂದ ದೂರ ಸರಿಯದಂತೆ ಗಡಿ ಕನ್ನಡಿಗರ ರಕ್ಷಣೆಗಾಗಿ ಪ್ರಾಧಿಕಾರದ ಅಧ್ಯಕ್ಷರು ಅತ್ಯಂತ ಕ್ರಿಯಾಶೀಲತೆಯಿಂದ ಕನ್ನಡಪರ ಕಾರ್ಯ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ.
ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು, ನಾಡು-ನುಡಿಗೆ ಪ್ರಾಧಿಕಾರ ಸಲ್ಲಿಸುತ್ತಿರುವ ಅನನ್ಯ ಸೇವೆಯನ್ನು ಪರಿಗಣಿಸಿ ಹಾಗೂ ಪ್ರಾಧಿಕಾರದ ಕಾರ್ಯಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುತ್ತಿರುವ ಗಡಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಸಿ.ಸೋಮಶೇಖರ್ ಅವರ ಕಾರ್ಯವೈಖರಿಯನ್ನು ದೃಷ್ಟಿಯಲ್ಲಿಟ್ಟುಕೊಂಡು, ರಾಜ್ಯ ಸಚಿವರ ದರ್ಜೆಗೆ ಸಮನಾದ ಸ್ಥಾನಮಾನವನ್ನು ನೀಡಿ ಗೌರವಿಸಿರುವುದು ಅತ್ಯಂತ ಸಂತಸದಾಯಕ ವಿಷಯವಾಗಿದೆ ಎಂದು ಕಸಾಪ ಮಹಾರಾಷ್ಟ್ರ ಘಟಕದ ಅಧ್ಯಕ್ಷ ಸೋಮಶೇಖರ್ ಜಮಶೆಟ್ಟಿ ಹೇಳಿದರು.
ಕನ್ನಡ ನಾಡಿನ ಗಡಿಗಳಲ್ಲಿ ಕನ್ನಡವನ್ನು ಬೆಳೆಸಿ, ಕನ್ನಡಿಗರ ಹಿತರಕ್ಷಣೆ ಮಾಡುವ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಿಗೆ ಸಚಿವ ದರ್ಜೆಯ ಸ್ಥಾನಮಾನ ದೊರಕ್ಕಿದ್ದು, ಗಡಿ ಕನ್ನಡಿಗರಿಗೆ ತುಂಬಾ ಸಂತೋಷ ತಂದಿದೆ. ಡಾ.ಸಿ ಸೋಮಶೇಖರ್ ಅವರು ಅಧ್ಯಕ್ಷರಾದ ನಂತರ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಅತ್ಯಂತ ಕ್ರಿಯಾಶೀಲತೆಯಿಂದ ಕಾರ್ಯ ಮಾಡುತ್ತಿದೆ. ಗಡಿನಾಡಿನಲ್ಲಿ ಕನ್ನಡದ ಬೇರು ಇನ್ನಷ್ಟು ಗಟ್ಟಿಗೊಳಿಸಲಿ ಎಂದು ಶುಭ ಹಾರೈಸುವೆ.-ಮಲಿಕಜಾನ ಶೇಖ, ಅಧ್ಯಕ್ಷರು, ಆದರ್ಶ ಕನ್ನಡ ಬಳಗ ಮಹಾರಾಷ್ಟ್ರ.
ಸರ್ಕಾರ ರಾಜ್ಯ ಸಚಿವರ ದರ್ಜೆ ಸ್ಥಾನಮಾನದ ಗೌರವ ನೀಡಿರುವುದು ಕನ್ನಡಿಗರಿಗೆ ಸಲ್ಲಿಸಿರುವ ಸನ್ಮಾನವಾಗಿದೆ. ಗಡಿ ಪ್ರಾಧಿಕಾರದ ಮೇಲೆ ಸರ್ಕಾರ ಇಟ್ಟಿರುವ ಭರವಸೆ, ವಿಶ್ವಾಸವನ್ನು ಕಾಪಾಡಿಕೊಂಡು ಹೋಗುವ ಹಾಗೂ ಇನ್ನೂ ಹೆಚ್ಚಿನ ಜವಾಬ್ದಾರಿಯನ್ನು ಹೊತ್ತುಕೊಂಡು ಗಡಿ ಪ್ರದೇಶದ ವ್ಯಾಪ್ತಿಯಲ್ಲಿ ಗುರುತಿಸಿರುವ ತಾಲ್ಲೂಕುಗಳಲ್ಲಿ ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ ಜಾಗೃತಿ ಮತ್ತು ವಿಕಾಸ ನಮ್ಮ ಬದ್ದತೆ. ಕನ್ನಡ ಭಾಷೆ, ಸಂಸ್ಕೃತಿ ಮತ್ತು ಶಿಕ್ಷಣ ಇವುಗಳ ಹಿತರಕ್ಷಣೆ ಮತ್ತು ಅಭಿವೃದ್ಧಿಗೆ ಕಟಿಬದ್ಧನಾಗಿರುತ್ತೇನೆ.- ಡಾ. ಸಿ. ಸೋಮಶೇಖರ್ ಅಧ್ಯಕ್ಷರು, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ.
ಈ ಸಂಧರ್ಭದಲ್ಲಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪಾಧಿಕಾರದ ಕಾರ್ಯದರ್ಶಿ ಪ್ರಕಾಶ ಮತ್ತಿಹಳ್ಳಿ, ಕನ್ನಡ ಸಾಹಿತ್ಯ ಪರಿಷತ್ತು ಮಹಾರಾಷ್ಟ್ರ ಘಟಕದ ಅಧ್ಯಕ್ಷ ಸೋಮಶೇಖರ ಜಮಶೆಟ್ಟಿ, ಆದರ್ಶ ಕನ್ನಡ ಬಳಗದ ಅಧ್ಯಕ್ಷ ಮಲಿಕಜಾನ ಶೇಖ, ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಘಟಕದ ಅಧ್ಯಕ್ಷ ಎಸ್.ವಿ. ಭಟ್, ದುರ್ಗಾ ಪ್ರಸಾದ್ ರೈ, ಡಾ.ಪ್ರಸನ್ನ ರೈ, ಸುಬ್ಬಯ್ಯ ಕಟ್ಟೆ, ಮುರಳಿ ಬಳ್ಳೂಕರಾಯ, ಆಪ್ತ ಕಾರ್ಯದರ್ಶಿ ಸೋಮಶೇಖರ ಗಾಂಜಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.