ಕಲಬುರಗಿ: ಹೈದರಾಬಾದ್ ರಜಾಕಾರರ ವಿರುದ್ಧ ಸೈನ್ಯ ಕಟ್ಟಿ ಹೋರಾಡಿ ಈಗಲೂ ಬದುಕಿರುವ ಎಲ್ಲ ಹಿರಿಯರು ಬಹುತೇಕ ಇಂದು ಶತಮಾನದಂಚಿನ ವಯಸ್ಸಿನಲ್ಲಿದ್ದಾರೆ. ರಜಾಕಾರರ ವಿರುದ್ಧ ವೀರಾವೇಶದಿಂದ ಹೋರಾಡಿದ ಸ್ವಾತಂತ್ರ್ಯ ಹೋರಾಟಗಾರರನ್ನು ಎಂದಿಗೂ ನಾವು ಸ್ಮರಿಸಲೇ ಬೇಕು ಎಂದು ವಿಧಾನ ಪರಿಷತ್ ಸದಸ್ಯ ಶಶೀಲ್ ನಮೋಶಿ ಹೇಳಿದರು.
ನಗರದ ಸರದಾರ ಪಟೇಲ್ ವೃತ್ತದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ ಶೆಟ್ಟಿ ಬಣ) ಆಯೋಜಿಸಿದ್ದ ಕಲ್ಯಾಣ ಕರ್ನಾಟಕದಲ್ಲಿ ೭೪ನೇ ಹೈ.ಕ. ವಿಮೋಚನಾ ಸಂಭ್ರಮ ಮತ್ತು ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ನಿಜಾಮ್‌ನ ಸೈನ್ಯದ ಕುದುರೆಗಳ ಹೆಜ್ಜೆ ಸಪ್ಪಳ ಕೇಳಿಸುತ್ತಲೇ ಎಲ್ಲ ಜನರು ತಕ್ಷಣ ರಹಸ್ಯ ಸ್ಥಳಗಳಲ್ಲಿ ಅಡಗಿಕೊಳ್ಳುವ ಪರಿಸ್ಥಿತಿ ಇತ್ತು. ಹಿಂಸಾಚಾರ ನಡೆಸುತ್ತ ಜನರಲ್ಲಿ ಭಯ ಹುಟ್ಟಿಸುತ್ತಿದ್ದ ಕ್ರೂರ ರಜಾಕಾರರ ವಿರುದ್ಧ ಸಶಸ್ತ್ರ ಹೋರಾಟಕ್ಕೆ ಅವರು ಸದಾ ಸಿದ್ಧರಾಗಿರುತ್ತಿದ್ದರು. ಕಷ್ಟ, ಚಿತ್ರಹಿಂಸೆಗಳ ದ್ಯೋತಕವಾದ ದೇಶಮುಖ ಮತ್ತು ಪಟೇಲರ ಸಂಕೋಲೆಗಳಿಂದ ಜನರನ್ನು ವಿಮೋಚನೆಗೊಳಿಸಲು ಅವರು ಮಾಡಿದ ಸಾಹಸ ಸ್ಮರಣೀಯ. ಅವರು ಕಾಡುಗಳಲ್ಲಿ ಅಡಗಿಕೊಳ್ಳುತ್ತಿದ್ದರು. ಎಲೆ ಮತ್ತು ಕೊಂಬೆಗಳನ್ನು ತಿನ್ನುತ್ತಿದ್ದರು ಮತ್ತು ಜನರ ರಕ್ಷಣೆಗಾಗಿ ತಮ್ಮ ಪ್ರಾಣ ಉಳಿಸಿಕೊಳ್ಳಬೇಕಾಗಿತ್ತು ಎಂದು ಪುಸ್ತಕಗಳಲ್ಲಿ ಓದಿದ್ದೇವೆ ಎಂದರು.
ಭಾರತಕ್ಕೆ ಸ್ವಾತಂತ್ರ್ಯವು ಆಗಸ್ಟ್ ೧೫, ೧೯೪೭ರಂದು ದೊರಕಿದರೆ ಭಾರತದೊಳಗಿನ, ಕರ್ನಾಟಕದ ಹೈದರಾಬಾದ್ ಕರ್ನಾಟಕಕ್ಕೆ ಅಂದು ಸ್ವಾತಂತ್ರ್ಯ ದೊರಕಿರಲಿಲ್ಲ ಎನ್ನುವುದು ಅಚ್ಚರಿಯಾದರೂ ಸತ್ಯ. ಈಗಿನ ಕಲ್ಯಾಣ ಕರ್ನಾಟಕವು ನಿಜಾಮನ ಕಪಿಮುಷ್ಠಿಯಿಂದ ಬಿಡುಗಡೆಗೊಂಡಿರುವುದು ಡಾ. ಅಂಬೇಡ್ಕರ್ ಅವರ ಚಾಣಾಕ್ಷತೆ ಮತ್ತು ಪಟೇಲರ ದಿಟ್ಟ ನಿರ್ಧಾರದಿಂದ ಸೆಪ್ಟೆಂಬರ್ ೧೭, ೧೯೪೮ ರಂದು ವಿಮೋಚನೆ ಗೊಂಡಿತು ಎಂದರು.
ಮುಖ್ಯ ಅತಿಥಿಗಳಾಗಿದ್ದ ಕಾಂಗ್ರೆಸ್ ಮುಖಂಡ ನೀಲಕಂಠರಾವ್ ಮೂಲಗೆ, ಡಾ. ಸುಧಾ ಹಾಲಕಾಯಿ, ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ, ಲಿಂಗರಾಜ ತಾರಫೈಲ್ ಮಾತನಾಡಿದರು.
ನೇತೃತ್ವ ವಹಿಸಿದ್ದ ಡಾ. ಶರಣು ಗದ್ದುಗೆ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಗೀತ ಸಾದರಪಡಿಸಿದರು. ವಿಭಾಗೀಯ ಪ್ರ. ಕಾರ್ಯದರ್ಶಿ ಗೊಪಾಲ ನಾಟಿಕಾರ ಸ್ವಾಗತಿಸಿದರು.
ಗುಲಬರ್ಗಾ ಬೀಯಿಂಗ್ ಹ್ಯುಮನ್ ಅಧ್ಯಕ್ಷ ಸಾದಿಕ್ ಅಲಿ ದೇಶಮುಖ್ ಸೇರಿಸಂತೆ ವೇದಿಕೆಯ ಮೇಲೆ ವಿವಿಧ ಕನ್ನಡಪರ ಸಂಘಟನೆಯ ಮುಖಂಡರು ಇದ್ದರು. ಈ ಸಂದರ್ಭದಲ್ಲಿ ಅಭಿಷೇಕ ಕಾಂಬಳೆ, ಮಂಜುನಾಥ ಕುಸೂನೂರು, ಸಂತೋಷ ಚೌದರಿ, ಮನೋಹರ ಬೀರನೂರ್, ನಿಜಲಿಂಗಮೂರ್ತಿ, ಪ್ರದೀಪ ಬಾಚನಳ್ಳಿಕರ್, ವಿಜಯಕುಮಾರ ಅಂಕಲಗಿ,ಶರಣು ದ್ಯಾಮಾ, ಅನೀಲ್ ಗಾಯಕವಾಡ, ಇದ್ದರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನಿಸಲಾಯಿತು.