ಐಐಟಿಗಳಿಂದ 2400 ದಲಿತ ವಿದ್ಯಾರ್ಥಿಗಳು ಡ್ರಾಪ್ ಔಟ್: ಉನ್ನತ ಶಿಕ್ಷಣದಿಂದ ತಳಸಮುದಾಯಗಳನ್ನು ಹೊರಗಿಡುವ ಹುನ್ನಾರ ಕೆವಿಎಸ್ ಆರೋಪ

0
314

ಹಂಪಿ: ಐಐಟಿ (Indian institute of technology) ಗಳು ಆಧುನಿಕ ಭಾರತದ ಹೆಗ್ಗುರುತುಗಳು. ಇಂತಹ ಐಐಟಿಗಳಲ್ಲಿ ಭಾರತದ ಎಲ್ಲಾ ಜಾತಿ ಧರ್ಮ ವರ್ಗಗಳ ವಿದ್ಯಾರ್ಥಿಗಳು ಪ್ರವೇಶ ಪಡೆದು ಅವರ ವಿಭಿನ್ನ ಪ್ರತಿಭೆ ಬಳಸಿ ಸಾಕಷ್ಟು ಕಲಿತು ದೇಶದ ಅಭಿವೃದ್ಧಿಗೆ ಕೊಡುಗೆ ನೀಡಿದಾಗ ಮಾತ್ರ ಭಾರತ ನಿಜವಾದ ಅರ್ಥದಲ್ಲಿ ಅಭಿವೃದ್ಧಿ ಸಾಧಿಸಲು ಸಾಧ್ಯ,  ಆದರೆ ಸಾಮಾಜಿಕ ನ್ಯಾಯ ಮತ್ತು ಸಾಮಾಜಿಕ ಒಳಗೊಳ್ಳುವ ನೀತಿಯ ಭಾಗವಾಗಿ ದ ಯುಜಿಸಿ ಅನ್ನೇ ರದ್ಧು ಮಾಡುವ ಕೆಲಸಕ್ಕೆ ಕೇಂದ್ರ ಕೈ ಹಾಕಿದ್ದು ಖಂಡಿಸಿ ಕೆವಿಸ್ ಪ್ರತಿಭಟನೆ ನಡೆಸಿ ಆಕ್ರೋಶ್ ವ್ಯಕ್ತಪಡಿಸುತ್ತಿದೆ.

ಪ್ರತಿಭಟನೆಯಲ್ಲಿ ಕೆವಿಎಸ್ ನ ಮುತ್ತುರಾಜು ಮಾತನಾಡಿ  ಐಐಟಿಗಳಲ್ಲಿ ಮೀಸಲು ಸೀಟುಗಳನ್ನು ಪಡೆದಿದ್ದ 2,400 ವಿದ್ಯಾರ್ಥಿಗಳು (SC,ST,OBC) ಅರ್ಧದಲ್ಲೇ ಶಿಕ್ಷಣ ತೊರೆದು ಹೊರಬಂದಿದ್ದಾರೆ. ಐಐಟಿಯಲ್ಲಿ ಸೀಟು ಗಿಟ್ಟಿಸಿಕೊಳ್ಳುವುದು ಕಷ್ಟ ಮಾತ್ರವಲ್ಲ ಅದೊಂದು ಸಾಧನೆಯೆಂದು ವಿದ್ಯಾರ್ಥಿಗಳು ಪರಿಗಣಿಸುತ್ತಾರೆ. ಸೀಟು ಪಡೆಯಲು ವಿಫಲವಾದವರು ಪ್ರಯತ್ನಿಸುತ್ತಲೇ ಇರುತ್ತಾರೆ. ಇಂತಹ ಸಂದರ್ಭದಲ್ಲಿ ಕಷ್ಟಪಟ್ಟು ಸೀಟು ಪಡೆದರೂ ಸಹ ವಿದ್ಯಾಭ್ಯಾಸ ಪೂರೈಸದೇ ಇಷ್ಟೊಂದು ದೊಡ್ಡ ಮಟ್ಟದಲ್ಲಿ ವಿದ್ಯಾರ್ಥಿಗಳು ಡ್ರಾಪ್ ಔಟ್ ಆಗುತ್ತಿರುವುದು ಹಲವಾರು ಅನುಮಾನಗಳಿಗೆ ಕಾರಣವಾಗಿದೆ.

Contact Your\'s Advertisement; 9902492681

ಕೇಂದ್ರದ ಎಂ.ಹೆಚ್.ಆರ್.ಡಿ ಇದಕ್ಕೆ ಕಾಲೇಜುಗಳ ಬದಲಾವಣೆ ಹಾಗೂ ಆರೋಗ್ಯದ ಸಮಸ್ಯೆ ಕಾರಣವೆಂಬ ಬಾಲಿಶವಾದ ಹೇಳಿಕೆ ನೀಡುತ್ತಿದೆ. ನಿಜಕ್ಕೂ ಉನ್ನತ ಶಿಕ್ಷಣ ಸಂಸ್ಥೆಗಳು ಇಂದು ಎಲ್ಲರನ್ನೂ ಒಳಗೊಳ್ಳುವ, ಮುಕ್ತ ಶಿಕ್ಷಣ ನೀಡುತ್ತಿವೆಯೇ ಎಂಬ ಪ್ರಶ್ನೆ ಎದುರಾಗುತ್ತಿದೆ. ರೋಹಿತ್ ವೇಮುಲಾ ಸಾಂಸ್ಥಿಕ ಹತ್ಯೆಯಿಂದ ಹಿಡಿದು ಮೊನ್ನೆ ಮೊನ್ನೆ ಡಾ.ಪಾಯಲ್ ತಾಡ್ವಿವರೆಗೂ ನೂರಾರು ದಲಿತ ಹಿನ್ನೆಲೆಯ ಕಾರಣಕ್ಕಾಗಿ ಉಸಿರುಗಟ್ಟಿಸುವ ಶೈಕ್ಷಣಿಕ ವಾತಾವರಣದಲ್ಲಿ ಬದುಕಲಾಗದೇ ಪ್ರಾಣಬಿಟ್ಟಿದ್ದಾರೆ. ಇನ್ನೂ ನೂರಾರು ಪ್ರಕರಣಗಳು ಬೆಳಕಿಗೆ ಬಂದಿಲ್ಲ ಅಷ್ಟೇ  ಎಂದರು.

ಇಂತಹ ವಿಷಮ ಪರಿಸ್ಥಿತಿಯಲ್ಲಿ ಐಐಟಿ ಗಳಿಂದ ಇಷ್ಟೊಂದು ವಿದ್ಯಾರ್ಥಿಗಳು ಡ್ರಾಪ್ ಔಟ್ ಆಗಿರುವುದಕ್ಕೆ ಪ್ರಬಲ ಕಾರಣ ಇದ್ದೇ ಇರುತ್ತದೆ. ಜಾತಿ ಅಸಹನೆ ಇದಕ್ಕೆ ಮುಖ್ಯ ಕಾರಣವಾಗಿರುತ್ತದೆ ಎಂಬುದಕ್ಕೆ ಹೊಸ ಪುರಾವೆಗಳು ಬೇಕಿಲ್ಲ. ದೂರದ ಮಾತಿರಲಿ ನಮ್ಮದೇ ರಾಜ್ಯದ ಹಂಪಿ ವಿಶ್ವವಿದ್ಯಾಲಯದಲ್ಲಿ ದಲಿತ ವಿದ್ಯಾರ್ಥಿಗಳಿಗೆ ಎರಡು ವರ್ಷದಿಂದ ಫೆಲೋಶಿಪ್ ಬಂದಿಲ್ಲ. ಎಷ್ಟೆಲ್ಲಾ ಪ್ರತಿಭಟನೆ ಮಾಡಿದರೂ ಪ್ರಯೋಜನವಾಗಿಲ್ಲ ಬದಲಿಗೆ ನಿಮ್ಮ ಮೇಲೆ ಪೊಲೀಸ್ ಕೇಸ್ ಹಾಕಿಸಬೇಕಾಗುತ್ತದೆ ಎಂದು ಕುಲಪತಿಗಳೇ ಹೆದರಿಸುತ್ತಾರೆ ಎಂದು ಆರೋಪಿಸಿದರು.

ನಂತರ ವಿದ್ಯಾರ್ಥಿ ಕರ್ನಾಟಕ ವಿದ್ಯಾರ್ಥಿ ಸಂಘಟನೆಯ ರಾಜ್ಯ ಸಂಚಾಲಕ ಸರೋವರ್ ಬೆಂಕಿಕೆರೆ ಮಾತನಾಡಿ, ಭಾರತದ ಸಂವಿಧಾನದ ಮೂಲ ಆಶಯಗಳನ್ನು ಜಾರಿಗೆ ತರಬೇಕಾದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲೇ ಈ ಪರಿಯ ಜಾತಿ ತಾರತಮ್ಯ ಮೆರೆಯುತ್ತಿರುವುದು ದುರಂತ. ಪ್ರಪಂಚಕ್ಕೆ ವಿಶ್ವಗುರುವಾಗಬೇಕೆಂದು ಹೊರಟಿರುವ ಭಾರತ ತನ್ನ ಕೊಳಕು ಅಂಟುಜಾಢ್ಯಗಳನ್ನು ಕಳಚುವ ಬದಲು ಪೋಷಿಸುತ್ತಿದೆ. ಆಳುವವರ ನೇರ ರಕ್ಷಣೆ ಇದಕ್ಕಿದೆ ಎಂದು ತಿಳಿಸಿದರು.

ಇಂದು ಉನ್ನತ ಶಿಕ್ಷಣಕ್ಕೆ ಸೇರುವ ವಿದ್ಯಾರ್ಥಿಗಳ ಸಂಖ್ಯೆ ಹಿಂದಿಗಿಂತಲೂ ಹೆಚ್ಚುತ್ತಿದೆ. ಒಟ್ಟು ದಾಖಲಾತಿ 25.1% ಗೆ ಏರಿದೆ. ಇದರಲ್ಲಿ ಬಹುಪಾಲು ದಲಿತ, ಶೂದ್ರ ಹಿನ್ನಲೆಯ ವಿದ್ಯಾರ್ಥಿಗಳೇ ಹೆಚ್ಚಿದ್ದಾರೆ. ಇವರು ತಮ್ಮ ಮೇಲಿನ ತಾರತಮ್ಯವನ್ನು ಪ್ರತಿರೋಧಿಸುತ್ತಿದ್ದಾರೆ. ಆದರೆ ಶಿಕ್ಷಣ ಸಂಸ್ಥೆಯ ಆಯಕಟ್ಟಿನ ಜಾಗದಲ್ಲಿ ಕುಳಿತಿರುವ ಮನುವಾದಿ ಮನಸ್ಥಿತಿಗಳು ಇದನ್ನು ಸಹಿಸುತ್ತಿಲಿಲ್ಲ. ಹಾಗಾಗಿ ತಳಸಮುಯದವರಿಗೆ ನಿತ್ಯ ಕಿರುಕುಳ ನೀಡಲಾಗುತ್ತಿದೆ. ಮೊನ್ನೆ ಸಂಶೋಧನಾ ವಿದ್ಯಾರ್ಥಿಯೊಬ್ಬ ದಲಿತ ಜಾತಿಯವನೆಂಬ ಕಾರಣಕ್ಕೆ ಅವರ ಗೈಡ್ ಪಿ.ಎಚ್.ಡಿ ಥೀಸೀಸ್ ಸ್ವೀಕರಿಸಿಲ್ಲ. ಇದರಿಂದ ನೊಂದ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಿದರು.

ಹಾಗಾಗಿ ಕೇಂದ್ರ ಸರ್ಕಾರ ಶಿಕ್ಷಣ ನೀಡುವ ತನ್ನ ಜವಾಬ್ದಾರಿಯಿಂದ ನಿಧಾನಕ್ಕೆ ಹಿಂದೆ ಸರಿಯುತ್ತಿದೆ. ಅಸ್ಥಿತ್ವದಲ್ಲಿ ಇಲ್ಲದೇ ಇರುವ ಜಿಯೋ ವಿಶ್ವವಿದ್ಯಾಲಯಕ್ಕೆ “ಶ್ರೇಷ್ಠ ವಿಶ್ವವಿದ್ಯಾನಿಲಯ” ಎಂಬ ಪ್ರಶಸ್ತಿ ನೀಡಿದ್ದು ಗಮನಿಸಿದರೇ ಇದು ತಿಳಿಯುತ್ತದೆ. ಕೇಂದ್ರವು ಸರ್ಕಾರ ಸಂಸ್ಥೆಗಳ ಗುಣಮಟ್ಟವನ್ನು ಕಡಿಮೆ ಮಾಡುತ್ತಾ ಖಾಸಗೀ ಸಂಸ್ಥೆಗಳ ಉದ್ಧಾರ ಮಾಡುತ್ತಲೇ ದಲಿತ, ಹಿಂದುಳಿದ ಹಾಗೂ ಮಹಿಳೆಯರನ್ನು ಉನ್ನತ ಶಿಕ್ಷಣದಿಂದ ದೂರವಿಡುವಂತಹ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಯನ್ನು ಹೊಡೆಯುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.

ಜಾತೀಯತೆ ಅಳಿಸಲು ಪ್ರಜ್ಞಾಪೂರ್ವಕವಾಗಿ ಸರ್ಕಾರ ಪ್ರಯತ್ನಿಸಬೇಕಿದೆ. ಶಿಕ್ಷಣವನ್ನು ಗುಣಮಟ್ಟವೂ ಉಚಿತವೂ ಮಾಡಬೇಕಿದೆ. ಇದರ ಜೊತೆಗೆ ಐಐಟಿಗಳಲ್ಲಿ ದಲಿತ ಹಿಂದುಳಿದ ವರ್ಗದ ವಿದ್ಯಾರ್ಥಿಗಳು ಹೊರ ಬರುತ್ತಿರುವುದಕ್ಕೆ ಇನ್ನೂ ಅಡಗಿರುವ ಸುಪ್ತ ಕಾರಣಗಳನ್ನು ಕೇಂದ್ರದ ಇಲಾಖೆಗಳು ಹುಡುಕಿ ಅದನ್ನು ಬಗೆಹರಿಸಿ ವಿದ್ಯಾರ್ಥಿ ಸ್ನೇಹಿ ವಾತಾವರಣವನ್ನು ಸೃಷ್ಠಿಸಬೇಕು. ದೇಶ ನಿರ್ಮಾಣದ ಪ್ರಕ್ರಿಯೆಯಲ್ಲಿ ಎಲ್ಲರ ಪಾಲೂ ಇರುವಂತೆ ನೋಡಿಕೊಳ್ಳಬೇಕು ಮತ್ತು ಇದು ಕೇಂದ್ರದ ಜವಾಬ್ದಾರಿಯೂ ಹೌದು. ಎಲ್ಲರ ಭಾಗವಹಿಸುವಿಕೆಯಿಂದಲೇ ಮಾನವೀಯ ಮೌಲ್ಯದ ಶಿಕ್ಷಣ ಉಳಿಯಲು ಸಾಧ್ಯ ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ನೂರಾರು ವಿದ್ಯಾರ್ಥಿಗಳು ಮತ್ತು ವಿವಿಧ ಸಂಘಟನೆಯ ಮುಖಂಡರು ಮತ್ತು ಸಂಚಾಲಕರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here