ಕಲಬುರಗಿ: ನಗರದ ಸರ್ವೋದಯ್ ನಗರದಲ್ಲಿ ವ್ಯಕ್ತಿಯೊಬ್ಬರ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಆಟೋ ಚಾಲಕನಿಗೆ ಪೋಲಿಸರು ಬಂಧಿಸಿದ ಘಟನೆ ವರದಿಯಾಗಿದೆ. ಬಂಧಿತನಿಗೆ ನಗರದ ಎಂ.ಎಸ್.ಕೆ. ಮಿಲ್ ಪ್ರದೇಶದ ಮೊಹ್ಮದಿ ಚೌಕ್ ನಿವಾಸಿ ಹಾಗೂ ಆಟೋ ಚಾಲಕ ಸೈಯದ್ ಸೋಹೇಬ್ ಸೈಯದ್ ಮಹಿಬೂಬ್ ಪಟೇಲ್ (೨೨) ಎಂದು ಗುರುತಿಸಲಾಗಿದೆ.
ಬಂಧಿತನಿಂದ ೧೭೦೦ರೂ.ಗಳ ನಗದು, ೧೬೯೯೦ರೂ.ಗಳ ಮೌಲ್ಯದ ಒಂದು ಸ್ಯಾಮಸಂಗ್ ಜಿ೮ ಮೊಬೈಲ್, ಕೃತ್ಯಕ್ಕೆ ಉಪಯೋಗಿಸಿದ ೩೦,೦೦೦ರೂ.ಗಳ ಮೌಲ್ಯದ ದ್ವಿಚಕ್ರವಾಹನ ಸೇರಿ ಒಟ್ಟು ೪೮,೬೯೦ರೂ.ಗಳ ಮೌಲ್ಯದ್ದನ್ನು ಪೋಲಿಸರು ವಶಪಡಿಸಿಕೊಂಡರು. ಕಳೆದ ಜೂನ್ ೨೭ರಂದು ರಾತ್ರಿ ೧೧-೪೫ರ ಸುಮಾರಿಗೆ ಆರೋಗ್ಯ ಇಲಾಖೆ ನಿವೃತ್ತ ನೌಕರ ಹಾಗೂ ಸರ್ವೋದಯ್ ನಗರದ ನಿವಾಸಿ ಸಾಯಬಣ್ಣಾ ಹೋಳಕರ್ (೬೫) ಅವರು ದ್ವಿಚಕ್ರವಾಹನದ ಮೇಲೆ ಹೋಗುತ್ತಿದ್ದಾಗ ಅವರನ್ನು ತಡೆದು ಅವರ ಮೇಲೆ ಹಲ್ಲೆ ನಡೆಸಿ ೪,೬೦೦ರೂ.ಗಳ ನಗದು, ಮೊಬೈಲ್, ಕೈಗಡಿಯಾರ, ಎಟಿಎಂ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಆಧಾರ್ ಕಾರ್ಡ್, ತೆರಿಗೆ ಪಾವತಿ ರಸೀದಿ ಮುಂತಾದವುಗಳನ್ನು ಕಸಿದುಕೊಂಡು ಪರಾರಿಯಾಗಿದ್ದರು.
ಈ ಕೃತ್ಯದ ಹಿಂದೆ ತನ್ನ ಗೆಳೆಯನ ಮೇಲೆ ಶಂಕೆ ಇದೆ ಎಂದು ದೂರುದಾರರು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಿಗೆ ದೂರು ಸಲ್ಲಿಸಿದ್ದರು. ಆದಾಗ್ಯೂ, ಬ್ರಹ್ಮಪೂರ್ ಠಾಣೆಯ ಪೋಲಿಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡರು. ಖಚಿತ ಭಾತ್ಮಿ ಮೇರೆಗೆ ಪಿಐ ಶ್ರೀಮಂತ್ ಇಲ್ಲಾಳ್, ಸಿಬ್ಬಂದಿಗಳಾದ ಸಲಿಮೋದ್ದೀನ್, ಪಂಡೀತ್, ಯಶವಂತ್, ಸುರೇಶ್, ವೆಂಕಟೇಶ್ ಅವರು ಕಾರ್ಯಾಚರಣೆಯನ್ನು ನಡೆಸಿ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.