ಶಹಾಬಾದ: ಕಸವೆಂದರೆ ಮೂಗು ಮುರಿಯುವರೇ ಹೆಚ್ಚು. ಯಾಕೆಂದರೆ ಕಸದ ನಿರ್ವಹಣೆ ಸವಾಲಿನ ಕೆಲಸವೇ ಸರಿ. ಆದರೆ ಸಮರ್ಪಕವಾಗಿ ನಿರ್ವಹಿಸಿದಲ್ಲಿ ಇದು ಬಂಗಾರ ಕೂಡ ಆಗಬಹುದು ಎಂದು ನಗರಸಭೆಯ ಅಧ್ಯಕ್ಷೆ ಅಂಜಲಿ ಗಿರೀಶ ಕಂಬಾನೂರ ಹೇಳಿದರು.
ಅವರು ರವಿವಾರ ನಗರಸಭೆ ಹಾಗೂ ಮದರ್ ತೆರೆಸಾ ಗ್ರಾಮೀಣಾಭಿವೃದ್ಧಿ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಸ್ವಚ್ಚ ಭಾರತ್ ಮಿಷನ್ ಯೋಜನೆಯಡಿ ನಗರದ ಸರಕಾರಿ ಪ್ರಾಥಮಿಕ ಶಾಲೆ ವಡ್ಡರಸಂಘದಲ್ಲಿ ಆಯೋಜಿಸಲಾದ ವಿವಿಧ ಸ್ಪರ್ಧೆಗಳನ್ನು ಉದ್ಘಾಟಿಸಿ ಮಾತನಾಡಿದರು.
ಕಸ ಬಂಗಾರ, ಪುನರ್ಬಳಸಿದರೆ ಶೃಂಗಾರ, ಕಸದಿಂದ ರಸ… ಹೀಗೆ ಕಸದ ಕುರಿತು ಅನೇಕ ನಾಣ್ಣುಡಿಗಳಿವೆ. ಮನೆಗಳಲ್ಲಿ ಸಾಮಾನ್ಯವಾಗಿ ಮೂರು ಬಗೆಯ ಕಸ ಉತ್ಪತ್ತಿಯಾಗುತ್ತವೆ. ಹಸಿ ಕಸ, ಒಣ ಕಸ ಹಾಗೂ ತಿರಸ್ಕøತ ಕಸ. ಅಡುಗೆ ಮನೆ ತರಕಾರಿ ತ್ಯಾಜ್ಯ, ಪೇಪರ್ ತಟ್ಟೆ, ಮೊಟ್ಟೆ ಸಿಪ್ಪೆ ಹಾಗೂ ಇತರೆ ಹಸಿ ಪದಾರ್ಥಗಳನ್ನು ಹಸಿ ಕಸವೆಂದು, ಪ್ಲಾಸ್ಟಿಕ್ ಕವರ್, ಹಾಲಿನ ಕವರ್, ನೀರಿನ ಬಾಟಲ್‍ಗಳು, ಎಣ್ಣೆ ಪ್ಯಾಕೆಟ್, ದಿನಸಿ ಅಂಗಡಿ, ಬೇಕರಿ ಮತ್ತು ಇತರೆ ಸ್ಥಳಗಳಲ್ಲಿ ಪ್ಲಾಸ್ಟಿಕ್ ವಸ್ತುಗಳು, ಮಾತ್ರೆ ಕವರ್‍ಗಳು ಪ್ಲಾಸ್ಟಿಕ್‍ಗೆ ಸಂಬಂಧಿಸಿದ ಎಲ್ಲ ಪದಾರ್ಥಗಳನ್ನು ಒಣ ಕಸ. ಜೊತೆಗೆ ಸ್ಯಾನಿಟರಿ ನ್ಯಾಪಕಿನ್ಸ್, ಮಕ್ಕಳ ಡೈಪರ್‍ಗಳು ಹಾಗೂ ಆಸ್ಪತ್ರೆಗಳ ತ್ಯಾಜ್ಯ ವಸ್ತುಗಳನ್ನು ತಿರಸ್ಕøತ ಕಸವೆಂದು ಪರಿಗಣಿಸಲಾಗಿದ್ದು, ಈ ಮೂರು ಹಂತಗಳಲ್ಲಿ ಕಸ ಬೇರ್ಪಡಿಸಿ ನೀಡಿದರೆ ವಿಲೇವಾರಿ ಸುಲಭವಾಗುತ್ತದೆ. ಮನೆಯಿಂದಲೇ ಕಸ ಬೇರ್ಪಡಿಸಿ ನೀಡುವ ಮೂಲಕ ಸ್ವಚ್ಛತೆಯ ಬದ್ಧತೆಯನ್ನು ನಾಗರೀಕರು ತೋರಬೇಕಿದೆ ಎಂದರು.
ನಗರಸಭೆಯ ಪೌರಾಯುಕ್ತ ಅಶೋಕ ಬಿಲಗುಂದಿ ಮಾತನಾಡಿ, ನಿಮಗೆ ಬೇಡವಾದ, ನಿಮಗೆ ಅಸಹ್ಯವೆನಿಸುವ ನಿಮ್ಮ ಮನೆಯ ಹಸಿ ಕಸವನ್ನು ಕೇವಲ ಕಾಲುಕಸ ಎಂದು ಕಡೆಗಣಿಸಬೇಡಿ. ಬೆಳೆ ಬೆಳೆಯಲು ಈ ಕಸ ಶ್ರೇಷ್ಠ ಗೊಬ್ಬರವಾಗುತ್ತದೆ. ಕೃಷಿ ಭೂಮಿಗೆ ಬಿದ್ದ ಈ ಕಸ ರಸವಾಗುತ್ತದೆ. ಈ ಮೂಲಕ ನಿಮ್ಮ ಮನೆಯ ತ್ಯಾಜ್ಯ ಪೂಜ್ಯವಾಗುತ್ತದೆ. ಕಸವೂ ರಸವಾಗಿ ಬಳಕೆಯಾಗಲು ಸಹಕರಿಸಿ. ಮನೆ ಮುಂದೆ ಬರುವ ನಗರಸಭೆಯ ಕಸದ ಗಾಡಿಗೆ ನಿಮ್ಮ ಮನೆ ಕಸ ನೀಡಿ ಸಹಕರಿಸಿ ಎಂದರು.
ನಗರಸಭೆಯ ಸದಸ್ಯ ಡಾ.ಅಹ್ಮದ್ ಪಟೇಲ್ ಮಾತನಾಡಿ,ನಗರ ಸ್ವಚ್ಚತೆ, ನಾಗರೀಕರ ಆರೋಗ್ಯಕ್ಕಾಗಿ ನಗರದ ನೈರ್ಮಲ್ಯ ಕಾಪಾಡುವುದು ಎಲ್ಲರ ಜವಾಬ್ದಾರಿ. ಮನೆಯಲ್ಲಿ ಉತ್ಪತ್ತಿಯಾಗುವ ಕಸವನ್ನು ಎಲ್ಲೆಂದರಲ್ಲಿ ಎಸೆಯದೆ, ಮನೆ ಬಾಗಿಲಿಗೆ ಬರುವ ಪಾಲಿಕೆಯ ಕಸದ ವಾಹನಗಳಿಗೆ ನೀಡಬೇಕು ಎಂದು ಹೇಳಿದರು.
ಪರಿಸರ ಅಭಿಯಂತರ ಮುಜಾಮಿಲ್ ಅಲಂ, ನಗರಸಭೆಯ ಉಪಾಧ್ಯಕ್ಷೆ ಸಲೀಮಾಬೇಗಂ, ಸ್ಥಾಯಿ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ವಾಲಿ, ನಗರಸಭೆಯ ಸದಸ್ಯರಾದ ಪಾರ್ವತಿ ಪವಾರ, ರವಿ ರಾಠೋಡ,ತಿಪ್ಪಣ್ಣ ನಾಟೇಕಾರ, ಸಾಬೇರಾ ಬೇಗಂ, ಶಿವಕುಮಾರ ನಾಟೇಕಾರ, ಸಿದ್ರಾಮ ಕುಸಾಳೆ, ಅನಿಲ,ಸಮುದಾಯ ಸಂಘಟಕ ಅಧಿಕಾರಿ ಆರೋಗ್ಯ ನಿರೀಕ್ಷಕರಾದ ಶಿವರಾಜಕುಮಾರ, ಮಹಿನೊದ್ದಿನ್,ರಾಜೇಶ, ಶರಣು, ಸಿಆರ್‍ಪಿ ಸತ್ಯನಾರಾಯಣ,ದೇವದಾಸ ಜಾಧವ ಸೇರಿದಂತೆ ಶಾಲಾ ಶಿಕ್ಷಕರು ಇದ್ದರು. ಇದೇ ಸಂದರ್ಭದಲ್ಲಿ ಶಾಲಾ ಮಕ್ಕಳಿಗೆ ಭಾಷಣ, ರಸಪ್ರಶ್ನೆ, ರಂಗೋಲಿ,ಚಿತ್ರಕಲೆ ಸ್ಪರ್ಧೆ ನಡೆಸಿ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು.