ಶಹಾಬಾದ: ಜಿಲ್ಲೆಯಲ್ಲಿ ಅತಿವೃಷ್ಟಿಯಿಂದಾಗಿ ಬೆಳೆ ಹಾನಿಯಾದ ರೈತರಿಗೆ ಪ್ರತಿ ಎಕರೆಗೆ 25000 ರೂಪಾಯಿ ಪರಿಹಾರ ಘೋಷಿಸಬೇಕು ಮತ್ತು ಇತರ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಗುರುವಾರ ತಹಸೀಲ್ದಾರ ಕಚೇರಿಯ ಮುಂಭಾಗದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಕಾರ್ಯಕರ್ತರು ಪ್ರತಿಭಟಿಸಿ ತಹಸೀಲ್ದಾರ ಮುಖಾಂತರ ಮೂಲಕ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಕೆಪಿಆರ್‍ಎಸ್ ತಾಲೂಕಾಧ್ಯಕ್ಷ ರಾಯಪ್ಪ ಹುರಮುಂಜಿ ಮಾತನಾಡಿ, ದೇಶಕ್ಕೆ ಅನ್ನ ನೀಡುವ ರೈತನ ಆರ್ಥಿಕ ಸಂಕಷ್ಟ ಹೇಳತೀರದಂತಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡುವಲ್ಲಿ ವಿಫಲವಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ರೈತ ವಿರೋಧಿ ನೀತಿ ಅನುಸರಿಸುತ್ತಿದ್ದು ರೈತ ವಿರೋಧಿ ಸರ್ಕಾರಕ್ಕೆ ರೈತರ ಬಗ್ಗೆ ಕಿಂಚಿತ್ತು ಕರುಣೆ ಇಲ್ಲ. ಹೀಗಾಗಿ ರೈತರ ವಕ್ಕಲತನಗಳು ದಿವಾಳಿಯಾಗುವ ಪರಿಸ್ಥಿತಿ ತಂದಿದೆ. ರೈತರು ಬಿತ್ತನೆ ಮಾಡುವಾಗ ಬೀಜದ ರೇಟ್ ದುಬಾರಿ, ಗೊಬ್ಬರದ ರೇಟ್ ದುಬಾರಿ.ಔಷಧಿ ರೇಟ್ ದುಬಾರಿ. ಕಷ್ಟಪಟ್ಟು ಹೈರಾಣಗಿ ಬಿತ್ತಿದ ರೈತನಿಗೆ ಪ್ರತಿ ಎಕರೆಗೆ ಕನಿಷ್ಠ 5500 ಖರ್ಚಾಗುತ್ತಿದೆ. ಇದರ ಅಂದಾಜು ಇಲ್ಲದೇ ಪರಿಹಾರ ಘೋಷಣೆ ಮಾಡಿದೆ. ಆದರೆ ಬಹಳಷ್ಟು ಜನ ರೈತರಿಗೆ ಪರಿಹಾರ ಹಣ ರೈತರ ಖಾತೆಗೆ ಜಮಾ ಆಗಿಲ್ಲವೆಂದು ರೈತರು ಪರದಾಡುವಂತಾಗಿದೆ. ಕೂಡಲೇ ಎಲ್ಲಾ ರೈತರಿಗೆ ಪ್ರತಿ ಎಕರೆಗೆ 25000 ರೂಪಾಯಿ ಪರಿಹಾರ ಘೋಷಿಸಲು ಆಗ್ರಹಿಸಿದರು.
ಅಲ್ಲದೇ ಶಹಾಬಾದ ತಾಲೂಕು ಎಬಿಎಲ್ ಕ್ರಾಸ್‍ದಿಂದ ಜೇವರ್ಗಿ ವೃತ್ತದವರೆಗಿನ ಕಳಪೆ ಮಟ್ಟದ ಡಾಂಬರಿಕರಣದಿಂದ ರಸ್ತೆ ಹದಗೆಟ್ಟಿದೆ.ಕೂಡಲೇ ತನಿಖೆ ನಡೆಸಿ ಅಧಿಕಾರಿಗಳ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಿ, ಗುತ್ತಿಗೆದಾರರ ಪರವಾನಗಿ ಕಪ್ಪು ಪಟ್ಟಿಗೆ ಸೇರಿಸಿ ಹದಗೆಟ್ಟ ಡಾಂಬರಿಕರಣ ರಸ್ತೆ ದುರಸ್ತಿ ಮಾಡಬೇಕು.
ಜೆಪಿ ಸಿಮೆಂಟ್ ಕಂಪನಿ ಹಾಗೂ ಜಿಇ ಇಂಜಿನಿಯರಿಂಗ್ ಕಾರ್ಖಾನೆಗಳು ಮುಚ್ಚಲಪಟ್ಟಿರುವುದರಿಂದ, ಕಂಪನಿ ಮೇಲೆ ಅವಲಂಬಿಸಿ ಬದುಕು ನಡೆಸುತ್ತಿದ್ದ 2000 ಸಾವಿರ ಕಾರ್ಮಿಕರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಶಹಾಬಾದ ನಗರದ ಆರ್ಥಿಕ ಮೂಲಗಳಾದ 2 ಕಾರ್ಖಾನೆಗಳು ಉತ್ಪಾದನೆ ಸ್ಥಗಿತಗೊಂಡಿದ್ದು, ಇಲ್ಲಿಯ ಕಾರ್ಮಿಕರು ಯುವಕರಿಗೆ ಕೆಲಸ ಇರದಕಾರಣ ಬೆಂಗಳೂರು,ಹೈದ್ರಾಬಾದ,ಮುಂಬಯಿ, ಪೂನಾಗೆ ಬದಕಲು ಕಾರ್ಮಿಕರು ಒಲಸೆ ಹೋಗಿದ್ದಾರೆ.ವ್ಯಾಪಾರಸ್ಥರು ವಹಿವಾಟು ಇಲ್ಲದೆ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.ಕೂಡಲೆ ಕಾರ್ಮಿಕರ ಹಿತದೃಷ್ಟಿಯಿಂದ ಜಿಪಿ ಸಿಮೆಂಟ್ ಕಂಪನಿ ಹಾಗೂ ಜಿಇ ಕಾರ್ಖಾನೆಗಳು ಪುನಃ ಪ್ರಾರಂಭಿಸಬೇಕು.
ಅತಿವೃಷ್ಟಿಯಿಂದ ಹಾನಿಯಾದ ಬೆಳೆಗಳಿಗೆ ಪ್ರತಿ ಎಕರೆಗೆ 25000 ರೂ ಪರಿಹಾರ ಕೊಡಬೇಕು.ಮಹತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಕೆಲಸದ ಸ್ಥಳದಲ್ಲಿ ಮೃತಪಟ್ಟ ಕುಟುಂಬದ ಹೊನಗುಂಟ ಗ್ರಾಮದ ನಿವಾಸಿಯಾದ ಶಂಕರ್ ತಂದೆ ಸಾಯಬಣ್ಣಾ ಕಿಂಡ್ರಿ ಇವರ ಉದ್ಯೋಗ ಚೀಟಿ ಸಂಖ್ಯೆ ಕೆಎನ್ – 004 – 014 – 0001 /6244 ಕಾರ್ಮಿಕರ ಕುಟುಂಬಕ್ಕೆ ಪರಿಹಾರ ಕೊಡಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಕೆಪಿಆರ್‍ಎಸ್ ಕಾರ್ಯದರ್ಶಿ ವೀರಯ್ಯಸ್ವಾಮಿ, ಸಿಐಟಿಯು ತಾಲೂಕಾಧ್ಯಕ್ಷೆ ಶೇಖಮ್ಮ ಕುರಿ,ಅಕ್ಷರ ದಾಸೋಹದ ನೌಕರರ ಸಂಘದ ತಾಲೂಕಾಧ್ಯಕ್ಷೆ ಸಂಪತ್ತಕುಮಾರಿ, ಸಿಐಟಿಯು ಹಿರಿಯ ಮುಖಂಡ ಮಲ್ಲಣ್ಣ ಕಾರೊಳ್ಳಿ, ಮಲ್ಲಿಕಾರ್ಜುನ ಬುರ್ಲಿ, ಕಟ್ಟಡ ಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ನಾಗಪ್ಪ ರಾಯಚೂರಕರ್,ಮಲ್ಕಣ್ಣ ಮುದ್ದಾ, ಬಲಭೀಮ ಕಾರೊಳ್ಳಿ, ವಿಶ್ವರಾಜ ಫೀರೋಜಾಬಾದ ಸೇರಿದಂತೆ ಅನೇಕರು ಇದ್ದರು.