ಸುರಪುರ: ನಾರಾಯಣಪುರ ಜಲಾಶಯ ಭರ್ತಿಯಾಗಿದ್ದರಿಂದ ಕೃಷ್ಣಾ ನದಿಗೆ ಸುಮಾರು ಎರಡು ಲಕ್ಷ ಮೂವತ್ತಾರು ಸಾವಿರ ಕ್ಯೂಸೆಕ್ ನೀರನ್ನು ಬಿಡಲಾಗಿದ್ದು ಇದರಿಂದ ತಾಲ್ಲೂಕಿನ ಅನೇಕ ಹಳ್ಳಿಗಳ ಜಮೀನು ಮುಳುಗಡೆಯಾಗಿದ್ದು ರೈತರಲ್ಲಿ ಆತಂಕ ಮನೆ ಮಾಡಿದೆ.
ಭಾನುವಾರ ಮದ್ಹ್ಯಾನದ ವೇಳೆಗೆ ಮತ್ತಿಷ್ಟು ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ನದಿಗೆ ಹರಿಬಿಡಲಾಗಿದ್ದರಿಂದ ಸುರಪುರ ತಾಲ್ಲೂಕಿನ ತಿಂಥಣಿ,ಬಂಡೊಳ್ಳಿ,ಶಾಂತಪುರ,ಅಡವಿ ಲಿಂಗದಹಳ್ಳಿ,ಶೆಳ್ಳಿಗಿ,ಹೆಮ್ಮಡಗಿ,ಸೂಗುರು ಸೇರಿದಂತೆ ಅನೇಕ ಗ್ರಾಮಗಳ ನೂರಾರು ಎಕರೆ ಜಮೀನುಗಳು ಜಲಾವೃತಗೊಂಡಿದ್ದು,ಇದರಿಂದ ರೈತರು ಬೆಳೆದ ಭತ್ತ,ತೊಗರಿ ಸೇರಿದಂತೆ ಅನೇಕ ಬೆಳೆಗಳು ಸಂಪೂರ್ಣ ನಾಶವಾಗಿವೆ.ಶೆಳ್ಳಿಗಿ ಗ್ರಾಮದ ಸುಮಾರು ಒಂದು ನೂರಾ ಮೂವತ್ತಕ್ಕು ಹೆಚ್ಚು ಎಕರೆ ಜಮೀನು ಸಂಪೂರ್ಣ ಮುಳುಗಡೆಯಾಗಿದೆ.
ಹಾನಿಗೀಡಾದ ನೆರೆ ಹಾವಳಿ ಜಮೀನುಗಳಿಗೆ ಶಾಸಕರ ಸಹೋದರ ಹಾಗು ಬಿಜೆಪಿ ಯುವ ಮುಖಂಡ ಹಣಮಂತ ನಾಯಕ (ಬಬ್ಲುಗೌಡ) ಭೇಟಿ ನೀಡಿ ರೈತರಿಗೆ ಸಾಂತ್ವಾನ ಹೇಳಿದ್ದಾರೆ.ಅಲ್ಲದೆ ಮಾನ್ಯ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ವೈಮಾನಿಕ ಸಮೀಕ್ಷೆ ನಡೆಸಲಿದ್ದು,ರೈತರಿಗೆ ಪರಿಹಾರ ನೀಡಲು ನಮನವಿ ಮಾಡಲಾಗುವುದು. ಅಲ್ಲದೆ ಬಸವಸಾಗರ ಜಲಾಶಯಕ್ಕೆ ಇನ್ನೂ ಹೆಚ್ಚಿನ ನೀರು ಹರಿದು ಬರುವ ಸಾಧ್ಯತೆ ಇದ್ದು,ಅದರಿಂದಾಗಿ ನದಿಗು ಹೆಚ್ಚಿನ ಪ್ರಮಾಣದ ನೀರು ಹರಿಬಿಡಬಹುದು.ಆದ್ದರಿಂದ ನದಿ ಪಾತ್ರದ ಎಲ್ಲಾ ಗ್ರಾಮದ ಜನರು ನದಿಯೆಡೆಗೆ ಹೋಗದಂತೆ ಮುನ್ನೆಚ್ಚರಿಕೆ ವಹಿಸುವಂತೆ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಬಬ್ಲುಗೌಡರನ್ನು ಅನೇಕ ಗ್ರಾಮಗಳ ರೈತರು ಭೇಟಿ ಮಾಡಿ ತಮ್ಮ ಬೆಳೆಗಳು ಸಂಪೂರ್ಣ ಹಾಳಾಗಿದ್ದು ಪರಿಹಾರ ಕೊಡಿಸುವಂತೆ ಮನವಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಮುಖಂಡರಾದ ಬಿ.ಎಂ.ಹಳ್ಳಿಕೋಟಿ,ಹೆಚ್.ಸಿ.ಪಾಟೀಲ,ಶರಣಗೌಡ,ಮಲ್ಲು ನವಲಗುಡ್ಡ,ಸಂಗಮೇಶ ಹೂಗಾರ, ಪ್ರಮೋದ ಜೋಷಿ,ಸಂಜೀವ ಸೇರಿದಂತೆ ಅನೇಕರಿದ್ದರು.
ತುಂಬಿ ಹರಿಯುತ್ತಿರುವ ಕೃಷ್ಣಾ ನದಿಯಿಂದಾಗಿ ತಾಲ್ಲೂಕಿನ ನದಿ ಪಾತ್ರದ ಗ್ರಾಮಗಳಿಗೆ ಹಾಗು ನೆರೆಯಿಂದ ಹಾನಿಗೀಡಾದ ಜಮೀನುಗಳಿಗೆ ಯಾದಗಿರಿ ಉಪಾಯುಕ್ತ ಶಂಕರಗೌಡ ಸೋಮನಾಳ ಭೇಟಿ ನೀಡಿ ವೀಕ್ಷಿಸಿದರು.ನದಿಯ ನೀರು ಅಪಾಯದ ಮಟ್ಟ ಮೀರಿ ಹರಿಯುತ್ತಿರುವುದರಿಂದ ಜನ ಮತ್ತು ಜಾನುವಾರುಗಳು ನದಿ ಕಡೆಗೆ ಹೋಗದಂತೆ ಜನರಲ್ಲಿ ಎಚ್ಚರಿಕೆ ಮೂಡಿಸಿದ್ದಾರೆ.