ಕಲಬುರಗಿ: ಗುರುವಿನ ಋಣ ಮುಟ್ಟಿಸಲು ಯಾರಿಂದ ಸಾಧ್ಯವಿಲ್ಲ. ಗುರು ಮಾರ್ಗದರ್ಶಕ, ಗುರು ಶಿಲ್ಪಿ ಗುರು ಎಂಬ ಪದದಲ್ಲಿ ಧನ್ಯತಾ ಭಾವ ತುಂಬಿಕೊAಡಿದೆ. ಹಳೆಬೇರುಗಳು ಗಟ್ಟಿಯಿದ್ದಾಗ ಮಾತ್ರ, ಹೊಸ ಚಿಗುರು ಹುಟ್ಟಿಕೊಳ್ಳಲು ಸಾಧ್ಯ. ಹಳೆ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ಈ ಕಾರ್ಯಕ್ರಮ ಇಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಮಾದರಿಯಾಗಿದೆ ಎಂದು ಶ್ರೀ ಶಿವಲಿಂಗೇಶ್ವರ ಸಂಸ್ಥಾನದ ಪೀಠಾಧಿಪತಿಗಳಾದ ಪ.ಪೂಜ್ಯ ಗುರುನಾಥ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು.
ಸಮೀಪದ ಸಾವಳಗಿ ಬಿ ಗ್ರಾಮದಲ್ಲಿ ರವಿವಾರ ಹಮ್ಮಿಕೊಂಡಿದ್ದ ಗುರುವಂದನಾ ಹಾಗೂ ಹಳೆ ವಿದ್ಯಾರ್ಥಿಗಳ ಸ್ನೇಹ ಸಂಗಮ ಕಾರ್ಯಕ್ರಮದಲ್ಲಿ ದಿವ್ಯಸಾನ್ನಿಧ್ಯವಹಿಸಿ ಮಾತನಾಡಿದ ಅವರು, (೨೦೦೧-೨೦೦೨) ಸಾಲಿನಲ್ಲಿ ಅಂದರೆ ಸು. ೨೦ ವರ್ಷದ ಹಿಂದೆ ಈ ಶಾಲೆಯಲ್ಲಿ ಅಕ್ಷರ ಕಲಿತ ಮತ್ತು ಅಕ್ಷರ ಕಲಿಸಿದ ಗುರುಶಿಷ್ಯರ ಸಂಗಮ ಇದಾಗಿದೆ. ಇದು ಸಂತೋಷದ ಸಂಗತಿಯಾಗಿದೆ. ಶೀಥಿಲಾವ್ಯವಸ್ಥೆಯಲ್ಲಿದ್ದ ಶಾಲೆಯ ಕಟ್ಟಡ ಪುನಃ ನಿರ್ಮಾಣ ಮಾಡಿಸುದಾಗಿ ಭರವಸೆ ನೀಡಿದರು.
ಕಾರ್ಯಕ್ರಮಕ್ಕೆ ಉದ್ಘಾಟಕರಾಗಿ ಆಗಮಿಸಿದಂತಹ ಕಲಬುರಗಿ ಆಯುಕ್ತರ ಕಚೇರಿಯ ವಿಷಯ ಪರಿವಿಕ್ಷಕರು ಹಾಗೂ ಪ್ರಭಾರಿ ಹಿರಿಯ ಸಹಾಯಕ ನಿರ್ದೇಶಕರಾದ ನಾಗೇಂದ್ರಪ್ಪ ಅವರಾದ ಅವರು ಮಾತನಾಡಿ, ಸರ್ಕಾರಿ ಶಾಲೆಯ ಶಿಕ್ಷಕರು ಉತ್ತಮ ರೀತಿಯಲ್ಲಿ ಸೇವೆ ಸಲ್ಲಿಸಬೇಕು. ಶಿಕ್ಷಕರು ತಾವು ಪಡೆಯುತ್ತಿರುವಂತಹ ವೇತನಕ್ಕೆ ತಕ್ಕಂತೆ ದುಡಿಯಬೇಕು. ಶಿಕ್ಷಕರ ಬದುಕು ಶಿಷ್ಯರಿಗೆ ಸಮರ್ಪಣೆಯಾಗಬೇಕೆ ಹೊರತು, ಕುಟುಂಬಕ್ಕೆ ಅಲ್ಲ ಎಂದು ಹೇಳಿದರು.
ಕಾರ್ಯಕ್ರಮದ ಅತಿಥಿಯಾಗಿ ಭಾಗವಹಿಸಿದ ಶಹಬಾದ ಸರಕಾರಿ ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯರಾದ ಮಹಾದೇವಿ ಎಚ್, ಪಾಟೀಲ ಮಾತನಾಡಿ, ಬದುಕು ನೋವು ನಲಿವುಗಳ ಸಂಗಮ. ಕಷ್ಟಕ್ಕೆ ದೃತಿಗೇಡದೆ ಮುಂದೆ ಸಾಗುವಂತಹ ಧೈರ್ಯ ಮತ್ತು ತಾಳ್ಮೆ ಬೇಳಸಿಕೊಳ್ಳಿ . ಈ ಶಾಲೆಯಲ್ಲೆ ಕಲಿತು ಸಾಧನೆ ಮಾಡಿದವರನ್ನು ನಿಮ್ಮ ಮಾದರಿಯನ್ನಾಗಿ ಇಟ್ಟುಕೊಂಡು ನಿಮ್ಮ ಬದುಕನ್ನು ಉತ್ತಮ ರೀತಿಯಲ್ಲಿ ರೂಪಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಶಾಲೆಯ ಸಹ ಶಿಕ್ಷಕರಾದ ರಾಜಕುಮಾರ ಆರ್. ಕನಗೊಂಡ ಮಾತನಾಡಿ, ಶಾಲೆಯ ಶ್ರೇಯೋಭಿವೃದ್ಧಿಗೆ ಎಲ್ಲರು ಜೋಡಿಸಬೇಕು. ಗುರುವಂದನಾ ಕಾರ್ಯಕ್ರಮ ಹಮ್ಮಿಕೊಂಡಿದ್ದಕ್ಕೆ ಸಂಸ್ಥಾನ ಪರವಾಗಿ ಧನ್ಯವಾದ ಸಲ್ಲಿಸಿದರು.
ಹಳೆ ವಿದ್ಯಾರ್ಥಿಗಳಾದ ಶರಣಬಸವ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಚೆರಪರ್ಸನರಾದ ಡಾ. ಸುನಿತಾ ಬಿ. ಪಾಟೀಲ ಮಾತನಾಡಿ, ಪ್ರೀತಿ, ವಾತ್ಸಲ್ಯ, ಮಮತೆಯಿಂದ ಕಲಿಸಿಕೊಟ್ಟ ಅಕ್ಷರ, ಸಮಾಜದಲ್ಲಿ ಉತ್ತಮ ಪ್ರಜೆಯನ್ನಾಗಿ ಬದುಕುವಂತಹ ಕಲಿಸಿಕೊಟ್ಟ ನಿಮ್ಮ ಸಂಸ್ಕೃತಿ, ಗುರುಗಳಿಗೆ ಮತ್ತೊಮ್ಮೆ ಶಿರಬಾಗಿ ನಿಲ್ಲುವಂತೆ ಅವಕಾಶ ಮಾಡಿಕೊಟ್ಟಿದೆ ಈ ಕಾರ್ಯಕ್ರಮ. ಗುರು ಶಿಷ್ಯರ ಪರಂಪರೆಯ ಇಂತಹ ಕಾರ್ಯಕ್ರಮಗಳು ನಿರಂತರವಾಗಿ ಸಾಗಲಿ ಎಂದರು.
ಈ ಶಾಲೆಯಲ್ಲೆ ಕಲಿತು ಉನ್ನತ ಪದವಿಯಾದ ಪಿಎಚ್.ಡಿ ಗಳಿಸಿದ ವಿದ್ಯಾರ್ಥಿಗಳಿಗೆ ಡಾ. ಶಿವಲಿಂಗಪ್ಪ ಸುಲ್ತಾನಪೂರ, ಡಾ. ಸಚೀನ್ ಎಸ್. ಹುಗ್ಗಿ ಹಾಗೂ ಡಾ. ಸುನೀತಾ ಬಿ. ಪಾಟೀಲ ಅವರಿಗೆ ವಿಶೇಷವಾಗಿ ಸನ್ಮಾನಿಸಲಾಯಿತು. ಅದೇ ರೀತಿ ೨೦೦೧ -೦೨ ನೇ ಶಾಲಿನಲ್ಲಿ ಕಲಿತ ಎಲ್ಲ ವಿದ್ಯಾರ್ಥಿಗಳಿಗೆ ಶಾಲು ಮತ್ತು ನೆನಪಿನಕಾಣಿಕೆ ನೀಡಿ ಗೌರವಿಸಲಾಯಿತು.
ಶಾಲೆಯ ನಿವೃತ್ತ ಮುಖ್ಯೋಪಾಧ್ಯರಾದ ಶಿವರಾಯ ಎ. ಪಾಟೀಲ, ಶಾಂತಪ್ಪ ಜಿ. ಅರಕೇರಿ, ನಿವೃತ್ತ ಸಹಾಯಕರು ಶಿವಪುತ್ರಪ್ಪ ಎಸ್. ಮಂಗಲಗಿ, ಪ್ರಸ್ತುತ ಮುಖ್ಯೋಪಾಧ್ಯರಾದ ಮಲ್ಲಿಕಾರ್ಜುನ ಸಿ. ಬಳ್ಳಾರಿ, ಶಿಕ್ಷಕರಾದ ಜಗದೇವಪ್ಪ ಎಮ್. ಕರಿಭೀಮಣ್ಣನವರು, ನಾಮದೇವ ಆರ್. ಪವಾರ, ಚೆನ್ನಬಸವ ಎಚ್.ಬಿರಾದಾರ, ಚಂದ್ರಶೇಖರ ಪಿ. ಪವಾರ, ಶಿವಲಿಂಗಪ್ಪ ಎಸ್. ಹರಶೆಟ್ಟಿ, ಮಲ್ಲಪ್ಪ ಬಿ. ಶಿರಗುಂಪಿ, ಸಚಿನ ಬಿ ಭಾಲ್ಕಿ, ಸಿಪಾಯಿ ಶಿವಲಿಂಗಪ್ಪ ಕಡಕೋಳ ಸೇರಿದಂತೆ ಇತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಡಾ. ಶಿವಲಿಂಗಪ್ಪ ಸುಲ್ತಾನಪೂರ ನಿರೂಪಿಸಿದರು, ಡಾ. ಸುನಿತಾ ಬಿ ಪಾಟೀಲ ಸ್ವಾಗತಿಸಿದರು. ಅಮರನಾಥ ಶಿವಮೂರ್ತಿ ವಂದಿಸಿದರು. ಕೈಲಾಸ ಶಿವಮೂರ್ತಿ ಅನಿಸಿಕೆ ವ್ಯಕ್ತಪಡಿಸಿದರು. ವಿದ್ಯಾರ್ಥಿನಿಯರು ಕನ್ನಡ ಸ್ವಾಭಿಮಾನದ ಹಾಡುಗಳಿಗೆ ನೃತ್ಯ ಪದರ್ಶಿಸದರು.