ಕಲಬುರಗಿ: ಪ್ರಸಕ್ತ 2022-23ನೇ ಸಾಲಿಗೆ ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆಯಡಿ ಅರ್ಹ ಫಲಾನುಭವಿಗಳು ನೋಂದಾಯಿಸಿಕೊಳ್ಳಬೇಕೆಂದು ಕಲಬುರಗಿ ಸಹಕಾರ ಸಂಘಗಳ ಉಪನಿಬಂಧಕರು ತಿಳಿಸಿದ್ದಾರೆ.
ಯಶಸ್ವಿನಿ ಸಹಕಾರಿಗಳ ಆರೋಗ್ಯ ರಕ್ಷಣಾ ಯೋಜನೆಯಾಗಿದ್ದು, ಈ ಯೋಜನೆಯಡಿ 2022-23ನೇ ಸಾಲಿಗೆ ಅರ್ಹ ಫಲಾನುಭವಿಗಳು ನೋಂದಾಯಿಸಿಕೊಳ್ಳಬೇಕೆಂದು ಸರ್ಕಾರವು ಆದೇಶ ಹೊರಡಿಸಿದೆ. ಅದರಂತೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ, ಪಿಕಾರ್ಡ ಬ್ಯಾಂಕುಗಳ, ಹಾಲು ಉತ್ಪಾದಕರ ಸಹಕಾರ ಸಂಘಗಳ, ಟಿಎಪಿಸಿಎಂಎಸ್‍ಗಳ ಹಾಗೂ ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959 ರಡಿ ಅಥವಾ ಕರ್ನಾಟಕ ಸೌಹಾರ್ದ ಸಹಕಾರಿಗಳ ಕಾಯ್ದೆ 1997 ರಡಿ ಅಥವಾ ಬಹುರಾಜ್ಯ ಸಹಕಾರಿ ಸಂಘಗಳ ಕಾಯ್ದೆ 2002 ರಡಿ ನೊಂದಾಯಿಸಿ ಕಾರ್ಯನಿರ್ವಹಿಸುತ್ತಿರುವ ಯಾವುದೇ ಸಹಕಾರ ಸಂಘಗಳ ಸದಸ್ಯರು ಮತ್ತು ಗ್ರಾಮೀಣ ಸಹಕಾರ ಸಂಘಗಳ/ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕುಗಳ ಮತ್ತು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ವತಿಯಿಂದ ಸಂಘಟಿಸಲ್ಪಟ್ಟಿರುವ ಸ್ವ-ಸಹಾಯ ಗುಂಪುಗಳ ಸದಸ್ಯರು ಈ ಯೋಜನೆಯಡಿ ಸೌಲಭ್ಯ ಪಡೆಯಲು ಅರ್ಹರಾಗಿರುತ್ತಾರೆ.
ಯಶಸ್ವಿನಿ ಯೋಜನೆಯಡಿ ಸದಸ್ಯರಾಗಲು ಸಹಕಾರ ಸಂಘಗಳಲ್ಲಿ ಸದಸ್ಯರಾಗಿ ಯಶಸ್ವಿನಿ ಯೋಜನೆಯಡಿ ನೋಂದಾಯಿಸುವ ದಿನಾಂಕಕ್ಕೆ 03 ತಿಂಗಳು ಕಳೆದಿರಬೇಕು. ವಯೋಮಿತಿ ನಿರ್ಬಂಧ ಇರುವುದಿಲ್ಲ. ಈ ಯೋಜನೆಯಡಿ ಯಶಸ್ವಿನಿ ಸದಸ್ಯರ ನೋಂದಣಿ ಪ್ರಕ್ರಿಯೆಯು ಈಗಾಗಲೇ 2022ರ ನವೆಂಬರ್ 1 ರಿಂದ ಪ್ರಾರಂಭವಾಗಿದ್ದು, ಈ ಯೋಜನೆಯಡಿ 1650 ಖಾಯಿಲೆಗಳಿಗೆ ಚಿಕಿತ್ಸೆಯನ್ನು ಯಶಸ್ವಿನಿ ಯೋಜನೆಯಡಿ ಅಳವಡಿಸಿಕೊಂಡಿರುವುದರಿಂದ ಸದರಿ ಯೋಜನೆಯ ಫಲಾನುಭವಿಗಳ ಕುಟುಂಬಕ್ಕೆ ವಾರ್ಷಿಕ ವೈದ್ಯಕೀಯ ಚಿಕಿತ್ಸಾ ವೆಚ್ಚದ ಗರಿಷ್ಟ ಮಿತಿ 5 ಲಕ್ಷ ರೂ.ನಿಗದಿಪಡಿಸಿದೆ. ರಾಜ್ಯದ ಯಾವುದೇ ಯಶಸ್ವಿನಿ ನೆಟವರ್ಕ್ ಆಸ್ಪತ್ರೆಯಲ್ಲಿ ನಗದುರಹಿತ ಚಿಕಿತ್ಸೆ ಪಡೆಯಲು ಅವಕಾಶ ಇರುತ್ತದೆ. ಸದರಿ ಯೋಜನೆಯಡಿ ನೋಂದಾಯಿಸಿ ಪ್ರಯೋಜನೆ ಪಡೆದುಕೊಳ್ಳಬಹುದಾಗಿದೆ.
2022-23ನೇ ಯಶಸ್ವಿನಿ ಯೋಜನೆಯ ಅವಧಿ ದಿನಾಂಕ:01.01.2023 ರಿಂದ 31.12.2023 ರ ವರೆಗೆ ಜಾರಿಯಲ್ಲಿದ್ದು, ಕಲಬುರಗಿ ಜಿಲ್ಲೆಯ ವ್ಯಾಪ್ತಿಗೆ ಒಳಪಡುವ ಎಲ್ಲಾ ಸಹಕಾರಿಗಳು ಈ ಯೋಜನೆಯ ಸದುಪಯೋಗಪಡೆದುಕೊಳ್ಳಬೇಕೆಂದು ಅವರು ತಿಳಿಸಿದ್ದಾರೆ.