ಕಲಬುರಗಿ: ನೈರ್ಮಲ್ಯ ಸಮಸ್ಯೆ ಹೆಚ್ಚು | ವೈಯಕ್ತಿಕ ಶೌಚಾಲಯ ನಿರ್ಮಾಣಕ್ಕೆ ಆಂದೋಲನ ಹಮ್ಮಿಕೊಳ್ಳಿ 

0
19

ಕಲಬುರಗಿ: ರಾಜ್ಯದ ಇತರೆ ಭಾಗಕ್ಕೆ ಹೋಲಿಸಿದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಅರಿವಿನ ಕೊರತೆ, ಅಭ್ಯಾಸ ಹಾಗೂ ಇನ್ನಿತರ ಕಾರಣದಿಂದ ಇಲ್ಲಿ ನೈರ್ಮಲ್ಯ ಸಮಸ್ಯೆ ಹೆಚ್ಚಿದ್ದು, ಗ್ರಾಮೀಣ ಭಾಗದಲ್ಲಿ ವೈಯಕ್ತಿಕ ಶೌಚಾಲಯ ನಿರ್ಮಾಣಕ್ಕೆ ವಿಶೇಷ ಆಂದೋಲನ ಹಮ್ಮಿಕೊಳ್ಳಿ ಎಂದು ಜಿಲ್ಲಾ ಪಂಚಾಯತ್ ಸಿ.ಇ.ಓ.ಗಳಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್ ಅವರು ಸೂಚಿಸಿದರು.

ಶುಕ್ರವಾರ ಕಲಬುರಗಿ ಜಿಲ್ಲಾ ಪಂಚಾಯತಿಯ ಸಭಾಂಗಣದಲ್ಲಿ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಸ್ವಚ್ಛ ಭಾರತ ಮಿಷನ್ (ಗ್ರಾಮೀಣ) ಯೋಜನೆಯಲ್ಲಿ ಅನುμÁ್ಟನವಾಗುತ್ತಿರುವ ಕಾಮಗಾರಿಗಳ ಪ್ರಗತಿ ಪರಿಶೀಲನೆ ಸಭೆ ನಡೆಸಿ ಮಾತನಾಡಿದರು.

Contact Your\'s Advertisement; 9902492681

ಶೌಚಾಲಯದ ಸೌಲಭ್ಯದ ಕುರಿತು ಎನ್.ಎಫ್.ಹೆಚ್.ಎಸ್.-5ನೇ ಸರ್ವೇ ಪ್ರಕಾರ ರಾಜ್ಯದಲ್ಲಿ ಶೌಚಾಲಯ ಸೌಲಭ್ಯದ ಪ್ರಮಾಣ ಶೇ.68.5 ಇದ್ದರೆ, ಕ.ಕ. ಭಾಗದ ಕಲಬುರಗಿ-36.5, ಯಾದಗಿರಿ-37.4, ರಾಯಚೂರು-53, ಬೀದರ-56.5, ಬಳ್ಳಾರಿ ಮತ್ತು ವಿಜಯನಗರ-64.1 ಹಾಗೂ ಕೊಪ್ಪಳ-46.90 ಪ್ರಮಾಣದಲ್ಲಿದೆ. ಹೀಗಾಗಿ ಪ್ರದೇಶದ ಗ್ರಾಮೀಣ ಭಾಗದಲ್ಲಿ ವೈಯಕ್ತಿಕ ಶೌಚಾಲಯಕ್ಕೆ ನಿರ್ಮಾಣಕ್ಕೆ ಹೆಚ್ಚಿನ ಒತ್ತು ನೀಡಬೇಕಿದೆ ಎಂದರು.

ಜಿಲ್ಲಾ ಪಂಚಾಯತ್ ಸಿ.ಇ.ಓ, ಉಪ ಕಾರ್ಯದರ್ಶಿ, ಎಸ್.ಬಿ.ಎಮ್. ನೋಡಲ್ ಅಧಿಕಾರಿಗಳು, ತಾ.ಪಂ. ಇ.ಓ, ಲೆಕ್ಕಾಧಿಕಾರಿಗಳು, ಯೋಜನಾ ಅಧಿಕಾರಿಗಳು ಹೀಗೆ ಹಿರಿಯ ಅಧಿಕಾರಿಗಳು ಏಕಕಾಲದಲ್ಲಿ 300-400 ಮನೆಗಳಿರುವ 15 ಹಳ್ಳಿಗಳಿಗೆ ಪ್ರತ್ಯೇಕವಾಗಿ ಹೋಗಿ ವೈಯಕ್ತಿಕ ಶೌಚಾಲಯ ಕಟ್ಟಿಸಿಕೊಳ್ಳಲು ಮನವೊಲಿಸಬೇಕು. ಈಗಾಗಲೆ ನಿರ್ಮಿಸಿಕೊಂಡಿದಲ್ಲಿ ಅದರ ಬಳಕೆ ಮತು ಬಳಕೆಯಿಂದ ಆಗುವ ಸಕಾರಾತ್ಮಕ ಪರಿಣಾಮಗಳ ಬಗ್ಗೆಯೂ ತಿಳಿಸಬೇಕು. ಇನ್ನೂ ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಳ್ಳಲು ಎಸ್.ಸಿ-ಎಸ್.ಟಿ ವರ್ಗದವರಿಗೆ ನೀಡಲಾಗುತ್ತಿದ್ದ ಪೆÇ್ರೀತ್ಸಾಹಧನ 3 ರಿಂದ 8 ಸಾವಿರ ರೂ. ಗಳಿಗೆ ಹೆಚ್ಚಿಸಲಾಗಿದೆ. ಶೌಚಾಲಯ ಬಳಕೆ ಪ್ರಮಾಣ ಸಹ ಇಲ್ಲಿ ಕಡಿಮೆ ಇರುವುದರಿಂದ ಐ.ಇ.ಸಿ. ಚಟಿವಟಿಕೆಗಳು ತೀವ್ರಗೊಳಿಸಿ ಎಂದು ಎಲ್.ಕೆ.ಅತೀಕ್ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಪ್ರದೇಶದಲ್ಲಿ ಸಮುದಾಯ ಶೌಚಾಲಯ ನಿರ್ಮಾಣಕ್ಕೆ 595.2 ಲಕ್ಷ ರೂ. ಗಳಲ್ಲಿ ಅನುಮೋದನೆಗೊಂಡ 308 ರಲ್ಲಿ 449.3 ಲಕ್ಷ ರೂ. ಖರ್ಚು ಮಾಡಿ 280 ಮಾತ್ರ ನಿರ್ಮಿಸಿದ್ದರಿಂದ ಉಳಿದ ಕಾಮಗಾರಿಗಳ ಕುರಿತು ಮಾಹಿತಿ ಪಡೆದ ಅಪರ ಮುಖ್ಯ ಕಾರ್ಯದರ್ಶಿಗಳು, 500 ಮಕ್ಕಳಕ್ಕಿಂತ ಹೆಚ್ಚಿರುವ ಸರ್ಕಾರಿ ಪ್ರೌಢ ಶಾಲೆಗಳು ಸೇರಿದಂತೆ ಹೋಬಳಿ, ದೊಡ್ಡ ಗ್ರಾಮ ಪಂಚಾಯತಿಯ ಹೆಚ್ಚಿನ ಜನ ಸೇರುವ, ವಿಶೇಷವಾಗಿ ಮುಖ್ಯ ಜಿಲ್ಲಾ ರಸ್ತೆ-ರಾಜ್ಯ-ರಾಷ್ಟ್ರ ಹೆದ್ದಾರಿಯಲ್ಲಿರುವ ಹಳ್ಳಿ, ಪ್ರಮುಖ ವೃತ್ತಗಳಲ್ಲಿ ಸಮುದಾಯ ಶೌಚಾಲಯ ಸಂಕೀರ್ಣ ಸ್ಥಾಪಿಸುವ ಮೂಲಕ ಗುರಿ ಮುಟ್ಟಬೇಕು. ಎನ್.ಅರ್.ಎಲ್.ಎಂ., ಎಸ್.ಬಿ.ಎಂ ಹಾಗೂ 15ನೇ ಹಣಕಾಸು ಅನುದಾನ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.

ಕಲಬುರಗಿ ಜಿಲ್ಲೆಯಲ್ಲಿ 261 ಗ್ರಾ.ಪಂ.ಗಳ ಪೈಕಿ 217 ಪಂಚಾಯತಿಗಳಲ್ಲಿ ಕಸ ಸಂಗ್ರಹಣೆಗೆ ವಾಹನಗಳು ನೀಡಲಾಗಿದೆ. ಆದರೆ ಕೆಲವು ಗ್ರಾಮ ಪಂಚಾಯತಿಗಳಲ್ಲಿ ವಾಹನಗಳು ಕಾರ್ಯಚರಣೆ ಮಾಡುತ್ತಿಲ್ಲ. ನಿನ್ನೆ ಜೇವರ್ಗಿ ತಾಲುಕಿನ ನರಿಬೋಳ ಗ್ರಾಮಕ್ಕೆ ಭೇಟಿ ನೀಡಿದಾಗ ಈ ವಿಷಯ ಗಮನಕ್ಕೆ ಬಂದಿದೆ ಎಂದು ಗ್ರಾಮೀಣ ಕುಡಿಯುವ ನೀರು ಸರಬರಾಜು ಹಾಗೂ ನೈರ್ಮಲ್ಯ ಇಲಾಖೆಯ ನಿರ್ದೇಶಕ ಗಂಗಾಧರ ಸ್ವಾಮಿ ಅವರು ಘನ್ಯ ತ್ಯಾಜ್ಯ ವಿಲೇವರಿ ವಿಷಯ ಚರ್ಚೆ ವೆಳೆಯಲ್ಲಿ ಪ್ರಸ್ತಾಪಿಸಿದರು. 15 ದಿನದಲ್ಲಿ ಕ.ಕ. ಭಾಗದ ಗ್ರಾ.ಪಂ.ಗಳಿಗೆ ಕಸ ಸಂಗ್ರಹಣಕ್ಕೆ ನೀಡಲಾದ ವಾಹನಗಳು ಸಂಚರಿಸಬೇಕು. ಟ್ರ್ಯಾಕ್ಕಿಂಗ್‍ಗೆ ಜಿ.ಪಿ.ಎಸ್. ಅಳವಡಿಸಬೇಕು. ಇಲ್ಲವಾದಲ್ಲಿ ಸಂಬಂಧಿಸಿದವರ ಮೇಲೆ ಕ್ರಮ ಅನಿವಾರ್ಯ ಎಂದು ಡಾ.ಗಿರೀಶ ಡಿ. ಬದೋಲೆ ಸೇರಿದಂತೆ ಎಲ್ಲಾ ಜಿ.ಪಂ. ಸಿ.ಇ.ಓ ಗಳಿಗೆ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್ ಅವರು ಸೂಚಿಸಿದರು.

ಬಚ್ಚಲು ಗುಂಡಿಗೆ 2,371.92 ಲಕ್ಷ ರೂ. ಬಿಡುಗಡೆ: ಪ್ರದೇಶದ 7 ಜಿಲ್ಲೆಗಳ 4,047 ಗ್ರಾಮ ಪಂಚಾಯತಿಗಳಲ್ಲಿ ಮನೆಗಳಿಗೆ ವೈಯಕ್ತಿಕ ಬಚ್ಚಲು ಗುಂಡಿ ನಿರ್ಮಾಣಕ್ಕೆ 2,371.92 ಲಕ್ಷ ರೂ. ಬಿಡುಗಡೆ ಮಾಡಲಾಗಿದೆ. ಆದರೆ ಖರ್ಚು ಮಾಡಿದ್ದು ಕೇವಲ 16.50 ಲಕ್ಷ ರೂ. ಮಾತ್ರ. ಎಸ್.ಬಿ.ಎಂ.(ಗ್ರಾಮೀಣ) ಅನುದಾನ ಇದನ್ನು ಬಳಕೆ ಮಾಡಿಕೊಂಡು ನವೆಂಬರ್ ಒಳಗಡೆ ನಿಗದಿತ ಗುರಿ ತಲುಪಬೇಕು. ಸಣ್ಣ ಹಳ್ಳಿಗಳಲ್ಲಿ 280 ರೂ. ಮತ್ತು 5,000ಕ್ಕೂ ಹೆಚ್ಚಿನ ಜನಸಂಖ್ಯೆ ಇರುವ ಗ್ರಾಮಗಳಲ್ಲಿ 660 ರೂ. ಪ್ರೋತ್ಸಾಹಧನ ಇದಕ್ಕೆ ನೀಡಲಾಗುತ್ತಿದ್ದು, ಸಾರ್ವಜನಿಕರಿಗೆ ತಿಳುವಳಿಕೆ ನೀಡಬೇಕು. ಇದಲ್ಲದೆ ಬಚ್ಚಲು ಗುಂಡಿ ನೀರು ಕೃಷಿಗೆ ಮರುಬಳಕೆ ಮಾಡುವ ನಿಟ್ಟಿನಲ್ಲಿ ಚೆನ್ನೈನಲ್ಲಿ ರೂಟ್ ಝೋನ್ ಟ್ರೀಟ್‍ಮೆಂಟ್ ಪ್ಲ್ಯಾಂಟ್ ಸ್ಥಾಪಿಸಿದ್ದು, ಇದೇ ಮಾದರಿಯಲ್ಲಿ ಪ್ರದೇಶದ ಪ್ರತಿ ಜಿಲ್ಲೆಯಲ್ಲಿ 5 ಕಡೆ ಸಿ.ಎಸ್.ಆರ್. ನಿಧಿ ಬಳಕೆ ಮಾಡಿಕೊಂಡು ಪ್ರಾಯೋಗಿಕವಾಗಿ ಪ್ಲ್ಯಾಂಟ್ ಸ್ಥಾಪಿಸಲು ಮುಂದಾಗುವಂತೆ ಜಿಲ್ಲಾ ಪಂಚಾಯತ್ ಸಿ.ಇ.ಓ.ಗಳಿಗೆ ಎಲ್.ಕೆ.ಅತೀಕ್ ಸಲಹೆ ನೀಡಿದರು.

ಸಿಟಿಜನ್ ಅರ್ಜಿ ವಿಲೇವಾರಿಗೆ ತಾಕೀತು: ಸಿಟಿಜನ್ ತಂತ್ರಾಂಶದಲ್ಲಿ ವೈಯಕ್ತಿಕ ಶೌಚಾಲಯ ನಿರ್ಮಾಣಕ್ಕೆ ಪ್ರದೇಶದಲ್ಲಿ ಸಲ್ಲಿಕೆಯಾದ 32,098 ಅರ್ಜಿಗಳ ಪೈಕಿ 17,103 ಅರ್ಜಿಗಳನ್ನು ಮಾತ್ರ ಅನುಮೋದನೆಗೊಂಡಿವೆ. ರಾಯಚೂರಿನಲ್ಲಿ ಸಲ್ಲಿಕೆಯಾದ 3,779ರಲ್ಲಿ ಕೇವಲ 125ಕ್ಕೆ, ಕೊಪ್ಪಳದಲ್ಲಿ 3,108 ಪೈಕಿ 641ಕ್ಕೆ, ವಿಜಯನಗರದಲ್ಲಿ 3,659 ಪೈಕಿ 1,188ಕ್ಕೆ ಮಾತ್ರ ಅನುಮೋದನೆ ದೊರೆತಿರುವುದಕ್ಕೆ ಅಸಮಾದಾನ ವ್ಯಕ್ತಪಡಿಸಿದ ಎಲ್.ಕೆ.ಅತೀಕ್ ಅವರು, ಸ್ಥಳ ಪರಿಶೀಲನೆ ಮಾಡಿ ಈ ಮಾಸಾಂತ್ಯಕ್ಕೆ ಉಳಿದ ಅರ್ಜಿ ವಿಲೇವಾರಿ ಮಾಡುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಎರೆಹುಳು ಘಟಕ ನಿರ್ಮಿಸಿ: ಹಸಿ ಕಸ ಸಂಗ್ರಹಣೆಗೆ ಪ್ರತಿ ಗ್ರಾಮದ ಜನವಸತಿ ಪ್ರದೇಶದ ಸಮೀಪದಲ್ಲಿಯೇ 10*5 ಅಗಲ ಮತ್ತು 2 ಅಡಿ ಆಳ ತೋಡಿ ಸುತ್ತಮುತ್ತ ಸ್ಥಳೀಯ ಕಲ್ಲು ಅಥವಾ ಇಟ್ಟಂಗಿ ಬಳಸಿ ಎರೆಹುಳು ಘಟಕ ಸ್ಥಾಪಿಸಬೇಕು. ಸಾರ್ವಜನಿಕರು ತಾವೇ ಸ್ವತ ಇಲ್ಲಿಗೆ ಬಂದು ಹಸಿ ಕಸ ಹಾಕುವಂತೆ ಮಾಡಬೇಕು. ಇದರಿಂದ ಕೃಷಿಗೆ ಪೂರಕ ಗೊಬ್ಬರ ಸಹ ಲಭ್ಯವಾಗುತ್ತದೆ. ತಾಲೂಕು ಪಂಚಾಯತ್ ಇ.ಓ. ಗಳು ಇದರ ಮುಂದಾಳತ್ವ ವಹಿಸಬೇಕು ಎ.ಸಿ.ಎಸ್. ಅವರು ಸೂಚಿಸಿದರು.

ಮಲ ಹಾಕಿದಲ್ಲಿ ಕ್ರಿಮಿನಲ್ ಕೇಸ್ ದಾಖಲಿಸಿ: ಶೌಚಾಲಯಗಳ ಸೆಪ್ಟಿಂಕ್ ಟ್ಯಾಂಕ್ ಹೊಂದಿರುವ ಮನೆಗಳಿಂದ ಸಕ್ಕಿಂಗ್ ಯಂತ್ರದ ಮೂಲಕ ಮಲ ಹೊರ ತೆಗೆಯುವ ಖಾಸಗಿ ವಾಹನಗಳು ಅದನ್ನು ಎಲ್ಲೆಂದರಲ್ಲಿ ಡಂಪ್ ಮಾಡುವುದರಿಂದ ಸಾರ್ವಜನಿಕರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಆಯಾ ಗ್ರಾಮ ಪಂಚಾಯತಿಗಳು ಬೈಲಾಗೆ ತಿದ್ದುಪಡಿ ಮಾಡಿಕೊಂಡು ಪ್ರಥಮ ಬಾರಿಗೆ ತಪ್ಪಿಗೆ 1,000 ರೂ., ಎರಡನೇ ಬಾರಿಗೆ 5,000 ರೂ. ಜೊತೆಗೆ ಕ್ರಿಮಿನಲ್ ಕೇಸ್ ದಾಖಲಿಸಬೇಕು. ಈ ಕುರಿತು ಜಿಲ್ಲಾಧಿಕಾರಿಗಳಿಂದ ಆದೇಶ ಹೊರಡಿಸಬೇಕು. ಇನ್ನೂ ಪ್ರತಿ ತಾಲೂಕು ಪಂಚಾಯತಿಗಳಲ್ಲಿ ಇಂತಹ ವಾಹನಗಳ ನೊಂದಣಿ ಮಾಡಿಕೊಳ್ಳಬೇಕು ಎಂದರು.

ಬಚ್ಚಲು ಗುಂಡಿಯ ನೀರಿನೊಂದಿಗೆ ಶೌಚಾಯದ ನೀರು ಸೇರಬಾರದು. ಈ ನಿಟ್ಟಿನಲ್ಲಿ 2022-23ನೇ ಸಾಲಿಗೆ ಪ್ರದೇಶದಲ್ಲಿ 88 ಮಲ ಹೂಳು ಸಂಸ್ಕರಣ ಘಟಕ ನಿರ್ಮಾಣಕ್ಕೆ ಗುರಿ ಇದ್ದು, ಇದನ್ನು ಆದ್ಯತೆ ಮೇಲೆ ನಿರ್ಮಿಸಬೇಕು. ಆಯಾ ಘಟಕದ ವ್ಯಾಪ್ತಿಯಲ್ಲಿ ಬರುವ ಮನೆಗಳ ಸೆಫ್ಟಿಕ್ ಟ್ಯಾಂಕ್ ಮೂಲಕ ತೆಗೆಯುವ ಮಲವನ್ನು ಈ ಘಟಕಕ್ಕೆ ತಂದು ವೈಜ್ಞಾನಿಕ ರೀತಿಯಲ್ಲಿ ಗೊಬ್ಬರವನ್ನಾಗಿ ಪರಿವರ್ತಿಸಬಹುದಾಗಿದೆ ಎಂದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಆಯುಕ್ತೆ ಪ್ರಿಯಾಂಕಾ ಪ್ರಾನ್ಸಿಸ್ ಮಾತನಾಡಿ, ಜಿಲ್ಲೆಯಲ್ಲಿ ಕನಿಷ್ಟ 5 ಗ್ರಾಮ ಪಂಚಾಯತಿಗಳನ್ನು ಪೈಲಟ್ ಮಾದರಿಯಲ್ಲಿ ತೆಗೆದುಕೊಂಡು “ಗ್ರಾಮ ನೈರ್ಮಲ್ಯ” ಯೋಜನೆ ರೂಪಿಸಿಕೊಳ್ಳಬೇಕು. ಘನ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ಎನ್.ಜಿ.ಓ.ಗಳಿಗೆ ತರಬೇತಿ ನೀಡಲಾಗಿದೆ. ಇವರು ಜಿಲ್ಲೆಯಲ್ಲಿ ಗ್ರಾ.ಪಂ. ಅಧ್ಯಕ್ಷರು, ಜನಪ್ರತಿನಿಧಿಗಳು ಮತ್ತು ಸ್ವಚ್ಛತಾ ಸಿಬ್ಬಂದಿಗಳಿಗೆ ತರಬೇತಿ ನೀಡಲಿದ್ದಾರೆ. ಇದನ್ನು ಸಾಕಾರಗೊಳಿಸಲು ಗ್ರಾ.ಪಂ.ಗಳು ಬೈಲಾ ತಿದ್ದುಪಡಿ ಮಡಿಕೊಂಡು ಸಂಬಂಧಿಸಿದ ಸಂಸ್ಥೆಗಳ ಜೊತೆಗೆ ತರಬೇತಿಗೆ ಒಪ್ಪಂದ ಮಾಡಿಕೊಂಡು ಕೆಲಸ ನಿರ್ವಹಿಸಬೇಕು. ನವೆಂಬರ್ ಅಂತ್ಯದೊಳಗೆ ಒಪ್ಪಂದ ಮಾಡಿಕೊಂಡು ಬರುವ ಮಾರ್ಚ್ ದೊಳಗೆ ಎಲ್ಲರಿಗೂ ತರಬೇತಿ ನೀಡಬೇಕು. ಇನ್ನು ಜಿ.ಪಂ., ತಾ.ಪಂ. ಗ್ರಾಂ.ಪಂ. ಕಚೇರಿ ಆವರಣದಲ್ಲಿಯೇ ಘನ ತ್ಯಾಜ್ಯ ವಿಲೇವರಿ (ಹಸಿ ಕಸ) ಮಾದರಿ ಘಟಕವನ್ನು ನಿರ್ಮಿಸುವ ಮೂಲಕ ಜನಪ್ರತಿನಿಧಿಗಳಿಗೆ ಮತ್ತು ಸಾರ್ವಜನಿಕರಿಗೆ ಅರಿವು ಮೂಡಿಸಬೇಕು ಎಂದರು.

ಇದೇ ಸಂದರ್ಭದಲ್ಲಿ ಜಲ್ ಜೀವನ್ ಯೋಜನೆ ಕುರಿತು ಕಾರ್ಯಾಗಾರ ಸಹ ನಡೆಯಿತು. ಎಲ್.ಕೆ.ಅತೀಕ್ ಅವರು ಘನ ತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದ “ಸ್ವಚ್ಛತಾ” ಮೊಬೈಲ್ ತಂತ್ರಾಂಶ ಸಹ ಬಿಡುಗಡೆಗೊಳಿಸಿದರು.

ಸಭೆಯಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸರ್ಕಾರದ ಉಪ ಕಾರ್ಯದರ್ಶಿ (ಅಭಿವೃದ್ಧಿ) ಎಸ್.ಸಿ.ಮಹೇಶ, ಕಲಬುರಗಿ ವಿಭಾಗದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಕಲಬುರಗಿಯ ಡಾ.ಗಿರೀಶ್ ಡಿ. ಬದೋಲೆ, ಯಾದಗಿರಿಯ ಅಮರೇಶ ನಾಯಕ್, ಬಳ್ಳಾರಿಯ ಲಿಂಗಮೂರ್ತಿ ಜಿ., ಕೊಪ್ಪಳದ ಬಿ.ಫೌಜಿಯಾ ತರನ್ನುಮ್, ಬೀದರಿನ ಶಿಲ್ಪಾ ಎಂ., ರಾಯಚೂರಿನ ಶಶಿಧರ ಕುರೇರ, ವಿಜಯನಗರದ ಹರ್ಷಲ್ ಬೋಯಾರ ನಾರಾಯಣರಾವ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ನಿರ್ದೇಶಕ (ಐ.ಎಸ್.ಎ) ಶೀತಲ್ ಎನ್. ಸಿಂಗ್, ರಾಜ್ಯ ಶುಚಿತ್ರ ಮತ್ತು ನೈರ್ಮಲ್ಯ ಸಮಾಲೋಚಕ ಕಾಳಾಚಾರಿ ಬಿ.ಕೆ., ಹೈದ್ರಾಬಾದಿನ ಯುನಿಸೆಫ್ ಸಂಸ್ಥೆಯ ಸೀನಿಯರ್ ವಾಶ್ ಪ್ರಭಾತ್ ಎಂ. ಸೇರಿದಂತೆ ಜಿ.ಪಂ. ಉಪ ಕಾರ್ಯದರ್ಶಿಗಳು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರರು, ತಾಲೂಕ ಪಂಚಾಯತ ಇ.ಓ.ಗಳು, ಸ್ವಚ್ಛ ಭಾರತ ಮಿಷನ್ (ಗ್ರಾಮೀಣ) ನೋಡಲ್ ಅಧಿಕಾರಿಗಳು, ಜಿಲ್ಲಾ ಸಮಲೋಚಕರು ಇನ್ನಿತರ ಅಧಿಕಾರಿಗಳು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here