ಭಾಲ್ಕಿ: ಪಟ್ಟಣದ ಹಿರೇಮಠ ಸಂಸ್ಥಾನಕ್ಕೆ ಭೇಟಿ ನೀಡಿ ಪೂಜ್ಯ ಶ್ರೀ ಗುರುಬಸವ ಪಟ್ಟದ್ದೇವರ ಆಶೀರ್ವಾದ ಪಡೆದ ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಸ.ಚಿ.ರಮೇಶ ಅವರು ಭಾಲ್ಕಿ ಮಠದ ಕನ್ನಡ ಕೊಡುಗೆ ಕುರಿತು ಅಭಿಮಾನದ ಮಾತುಗಳನ್ನು ಆಡಿದರು. ನಿಜಾಮನ ಆಡಳಿತದಲ್ಲಿ ಹೊರಗೆ ಉರ್ದು ಬೋರ್ಡ ಹಾಕಿ ಒಳಗೆ ಕನ್ನಡ ಕಲಿಸಿದ ಕೀರ್ತಿ ಭಾಲ್ಕಿ ಮಠದ ಪೂಜ್ಯ ಶ್ರೀ ಡಾ.ಚನ್ನಬಸ ಪಟ್ಟದ್ದೇವರಿಗೆ ಸಲ್ಲುತ್ತದೆ. ಅದಕ್ಕಾಗಿಯೇ ಈ ನಾಡಿನ ಖ್ಯಾತ ಸಂಶೋಧಕರಾದ ಡಾ.ಎಂ.ಎಂ.ಕಲಬುರಗಿ ಅವರು ಹಿರಿಯ ಪೂಜ್ಯರಿಗೆ ಯುಗಪುರುಷ ಎಂದು ಕರೆದಿರುವುದು ನಿಜಕ್ಕೂ ಅರ್ಥಪೂರ್ಣ. ಶ್ರೀಮಠ ಧಾರ್ಮಿಕ ಸಂಸ್ಕಾರಗಳಿಗೆ ಸೀಮಿತವಾಗಿರದೇ ಸಾಮಾಜಿಕ, ಶೈಕ್ಷಣಿಕ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಸಲ್ಲಿಸುತ್ತಿರುವ ಸೇವೆ ಅಭಿನಂದನೀಯವಾಗಿದೆ. ಬಸವಾದಿ ಶರಣರ ತತ್ವಗಳು ನೆರೆಯ ರಾಜ್ಯಗಳಲ್ಲಿ ಪಸರಿಸುವ ದಿಶೆಯಲ್ಲಿ ಇಂದಿನ ಪೂಜ್ಯರಾದ ಡಾ.ಬಸವಲಿಂಗ ಪಟ್ಟದ್ದೇವರು ಮರಾಠಿ, ತೆಲಗು, ಹಿಂದಿ ಮುಂತಾದ ಭಾಷೆಗಳಲ್ಲಿ ಅನುವಾದ ಮಾಡಿ ಪುಸ್ತಕ ಪ್ರಕಟಿಸಿರುತ್ತಿರುವುದು ಒಂದು ಐತಿಹಾಸಿಕ ಕಾರ್ಯವಾಗಿದೆ. ಪೂಜ್ಯರ ಎಲ್ಲ ಕಾರ್ಯಕ್ಕೆ ಕ್ರಿಯಾಶಕ್ತಿಯಾಗಿ ದುಡಿಯುತ್ತಿರುವ ಪೂಜ್ಯ ಶ್ರೀ ಗುರುಬಸವ ಪಟ್ಟದ್ದೇವರು ನಮ್ಮೆಲ್ಲರಿಗೆ ಮಾದರಿಯಾಗಿದ್ದಾರೆ ಎಂದು ನುಡಿದರು.
ಪೂಜ್ಯ ಶ್ರೀ ಗುರುಬಸವ ಪಟ್ಟದ್ದೇವರು ಸಾನಿಧ್ಯವಹಿಸಿ, ಹಂಪಿಯ ಕನ್ನಡ ವಿಶ್ವವಿದ್ಯಾಲದ ಕುಲಪತಿಗಳಾಗಿ ಕನ್ನಡದ ಮಠಕ್ಕೆ ಭೇಟಿ ನೀಡಿರುವುದು ನಮಗೆ ಅತ್ಯಂತ ಸಂತೋಷವನ್ನುಂಟು ಆಗಿದೆ. ಕೋವಿಡದ ಸಂದರ್ಭದಲ್ಲಿ ಪ್ರೊ.ಸ.ಚಿ.ರಮೇಶ ಅವರು ಮಾಡಿರುವ ಕಾರ್ಯ ಅಭಿನಂದನೀಯವಾಗಿದೆ ಎಂದು ಆಶೀರ್ವಚನ ನೀಡಿದರು. ಪೂಜ್ಯರು ಪ್ರೊ.ಸ.ಚಿ.ರಮೇಶ ಮತ್ತು ಧರ್ಮಪತ್ನಿಯಾದ ಚೈತ್ರಾ ಮತ್ತು ಮಗನಾದ ಅಭಿರಾಮ ಅವರಿಗೆ ಸತ್ಕರಿಸಿ ಆಶೀರ್ವದಿಸಿರು.
ಜಾನಪದ ಸಾಹಿತ್ಯ ಪರಿಷತ್ತಿನ ಔರಾದ ತಾಲೂಕು ಘಟಕದ ಅಧ್ಯಕ್ಷರಾದ ಡಾ.ಸಂಜುಕುಮಾರ ಜುಮ್ಮಾ, ಹಿರೇಮಠ ಸಂಸ್ಥಾನ ವಿದ್ಯಾಪೀಠದ ಆಡಳಿತಾಧಿಕಾರಿಯಾದ ಮೋಹನರೆಡ್ಡಿ, ಶಾಂತಯ್ಯ ಸ್ವಾಮಿ, ರಾಜು ಜುಬರೆ, ದೀಪಕ ಥಮಕೆ ಮುಂತಾದವರು ಉಪಸ್ಥಿತರಿದ್ದರು.