ಶಹಾಬಾದ:ಮಕ್ಕಳೆಂದರೆ ಕೇವಲ ಪೋಷಕರಿಗೆ ಮಾತ್ರವಲ್ಲ ಮೀಸಲಾಗಿರದೆ ಇಡೀ ನಾಗರಿಕ ಸಮಾಜಕ್ಕೆ ಸೇರಿದವರು. ಮಕ್ಕಳ ಬಗ್ಗೆ ಹೆತ್ತವರಿಗಿರುವ ಜವಾಬ್ದಾರಿ ಸಮಾಜ, ಶಿಕ್ಷಕ ವೃಂದ, ಹಿರಿಯ ನಾಗರಿಕರಿಗೂ ಇದೆ ಎಂದು ಶಿಶುಪಾಲನಾ ಕೇಂದ್ರದ ಜಿಲ್ಲಾ ಸ್ತ್ರೀ ಶಕ್ತಿ ಒಕ್ಕೂಟದ ಅಧ್ಯಕ್ಷೆ ಮಲ್ಲಮ್ಮ ಕಡ್ಲಾ ಹೇಳಿದರು.
ಅವರು ಸೋಮವಾರ ನಗರದ ಶಿಶು ಪಾಲನಾ ಕೇಂದ್ರದಲ್ಲಿ ಚಾಚಾ ನೆಹರು ಅವರ ಜಯಂತಿ ನಿಮಿತ್ತ ಆಯೋಜಿಸಲಾದ ಮಕ್ಕಳ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ನೆಹರೂ ಅವರಿಗೆ ಮಕ್ಕಳೆಂದರೆ ಬಲು ಪ್ರೀತಿ. ಅಲ್ಲದೆ ಅವರು ಮಕ್ಕಳನ್ನು ಗುಲಾಬಿ ಹೂವಿಗೆ ಹೋಲಿಸಿದ್ದಾರೆ. ಮಕ್ಕಳ ಮನಸ್ಸು ಗುಲಾಬಿ ಹೂವಿನಷ್ಟೇ ಸುಂದರವಾಗಿರುತ್ತದೆ. ಅಂತೆಯೇ ಅವರ ಜನ್ಮದಿನವನ್ನು ಮಕ್ಕಳ ದಿನವನ್ನಾಗಿ ಆಚರಿಸುತ್ತೇವೆ. ನೆಹರು ಅವರ ಹಲವಾರು ಸಾಧನೆಗಳು ಮಕ್ಕಳಿಗೆ ಸ್ಪೂರ್ತಿ ನೀಡಬೇಕು ಎಂದು ಹೇಳಿದರಲ್ಲದೇ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಶಹಾಬಾದ ನಗರದಲ್ಲಿ ಸರಕಾರ ನೂತನವಾಗಿ ಶಿಶು ಪಾಲನಾ ಕೇಂದ್ರವದನ್ನು ತೆರೆಯಲಾಗಿದೆ.
ಸರಕಾರಿ ಹಾಗೂ ಖಾಸಗಿ ಉದ್ಯೋಗಸ್ಥ ಮಹಿಳೆಯರ ಮಕ್ಕಳು, ಕೂಲಿ ಕಾರ್ಮಿಕರ ಮಕ್ಕಳ ಪಾಲನೆ ಮತ್ತು ಫೊಷಣೆ ಹಾಗೂ ಸುರಕ್ಷತೆ ದೃಷ್ಟಿಯಿಂದ ಈ ಕೇಂದ್ರವನ್ನು ತೆರೆಯಲಾಗಿದೆ.ಇಲ್ಲಿ 6 ತಿಂಗಳಿನಿಂದ 6 ವರ್ಷದ ಮಕ್ಕಳಿಗೆ ಎಲ್ಲಾ ರಿತೀಯ ಪೌಷ್ಠಿಕ ಆಹಾರ ನೀಡಲಾಗುತ್ತಿದೆ.ಮಕ್ಕಳಿಗೆ ಉತ್ತಮ ಆರೈಕೆ ಮಾಡಲಾಗುತ್ತದೆ.ಅಲ್ಲದೇ ಶಿಕ್ಷಣ ಕೂಡ ನೀಡಲಾಗುತ್ತದೆ.ಈಗಾಗಲೇ 19 ಮಕ್ಕಳು ಕೇಂದ್ರದಲ್ಲಿದ್ದು, ಇನ್ನೂ 6 ಮಕ್ಕಳಿಗೆ ಪ್ರವೇಶಾತಿ ಪಡೆಯಬಹುದು.ಆದ್ದರಿಂದ ಮಹಿಳೆಯರು ಇದರ ಸದುಪಯೋಗಪಡಿಸಿಕೊಳ್ಳಬೇಕೆಂದು ಹೇಳಿದರು.
ಅಂಗನವಾಡಿ ಮೇಲ್ವಚಾರಕಿ ಮೀನಾಕ್ಷಿ ಗುಂಡಗುರ್ತಿ ಮಾತನಾಡಿ,ಮಕ್ಕಳ ಮನಸ್ಸು ಹೂವಿನಂತೆ ಪರಿಶುದ್ಧವಾಗಿರುತ್ತದೆ.ಅಲ್ಲದೇ ಬಿಳಿ ಹಾಳೆಯಂತಿರುವ ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿಯೇ ಒಳ್ಳೆ ಸಂಸ್ಕಾರ ನೀಡಿದರೇ ಮುಂದೆ ಸಮಾಜದ ಉತ್ತಮ ನಾಗರಿಕರಾಗಲು ಸಾಧ್ಯ.ಆ ನಿಟ್ಟಿನಲ್ಲಿ ಎಲ್ಲರೂ ಮಕ್ಕಳಿಗೆ ಒಳ್ಳೆಯ ಹಿತನುಡಿಗಳ ಮೂಲಕ ಅವರಲ್ಲಿ ಉತ್ತಮ ಮೌಲ್ಯಗಳನ್ನು ಬಿತ್ತಲು ಮುಂದಾಗಬೇಕಿದೆ ಎಂದರು.
ಈ ಸಂದರ್ಭದಲ್ಲಿ ಶಿಶುಪಾಲನಾ ಕೇಂದ್ರದ ಐಶ್ವರ್ಯ,ಭಾಗ್ಯಶ್ರೀ, ರೂಭಿಕಾ ಸೇರಿದಂತೆ ಮಕ್ಕಳು ಹಾಗೂ ಪಾಲಕರು ಇದ್ದರು.