ಆಳಂದ: ತಾಲೂಕಿನ ಯಳಸಂಗಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡವು ಕಟ್ಟಿದ ಎರಡೇ ವರ್ಷದಲ್ಲೇ ಮಳೆ ಬಂದಾಗ ಸೋರುತ್ತಿರುವುದು ಕಚೇರಿಯ ಸಿಬ್ಬಂದಿಗಳಿಗೆ ಹಾಗೂ ಚಿಕಿತ್ಸೆಗೆ ಬರುವ ರೋಗಿಗಳಿಗೆ ಆತಂಕ ಮೂಡಿಸಿದೆ.
ನಿರಂತರವಾಗಿ ಜಿಟಿ, ಜಿಟಿ ಮಳೆಗೆ ನಿತ್ಯವೂ ಆಸ್ಪತ್ರೆಯ ಮೇಲ್ಛಾವಣೆಯ ಮೂಲಕ ನೀರು ಮಧ್ಯಭಾಗದಲ್ಲಿ ಸೋರಿ ಆಸ್ಪತ್ರೆಯ ತುಂಬೆಲ್ಲ ನೀರು ನಿಂತು ಆಸ್ಪತ್ರೆಯ ಸಿಬ್ಬಂದಿಗಳಿಗೆ ಹಾಗೂ ಚಿಕಿತ್ಸೆಗೆ ಬರುವ ರೋಗಿಗಳಿಗೆ ಪ್ರಯಾಸ ಪಡುವಂತೆ ಮಾಡಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಗ್ರಾಮೀಣ ಜನರ ಆರೋಗ್ಯ ಸಂರಕ್ಷಣೆಯ ಹಿತದೃಷ್ಟಿಯಿಂದ ಗ್ರಾಮದಲ್ಲಿ ೨೦೧೬ರಲ್ಲಿ ಈ ಆಸ್ಪತ್ರೆಯ ಕಟ್ಟಡ ಉದ್ಘಾಟನೆ ಕೈಗೊಳ್ಳಲಾಗಿದೆ. ೨೦೧೭ರಿಂದ ಕಾರ್ಯ ನಿರ್ವಹಿಸುತ್ತ ಬರಲಾಗಿದೆ. ಹೊಸ ಕಟ್ಟಡ ಮಧ್ಯ ಭಾಗದ ಛತ್ತ ದುರಾವ್ಯವಸ್ಥೆಯಿಂದ ಕೂಡಿದ್ದರಿಂದ ಸಂಬಂಧಿತರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮದ ಯುವಕ ದಸ್ತಗೀರ ನದಾಫ್, ಲಕ್ಷ್ಮೀಪುತ್ರ, ಶರಣು ಗಣಜಲಖೇಡ ಸೇರಿದಂತೆ ಇನ್ನಿತರ ಗ್ರಾಮಸ್ಥರು ದೂರಿದ್ದಾರೆ.
ಕಟ್ಟಡ ಅವ್ಯವಸ್ಥೆಗೆ ಸರಿಪಡಿಸುವಂತೆ ಈ ಕುರಿತು ಗ್ರಾಪಂ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಯಾವುದೇ ಕ್ರಮ ಕೈಗೊಂಡಿಲ್ಲ. ಕಟ್ಟಡ ಕಳಪೆಮಟ್ಟದಿಂದ ಕೂಡಿದೆ ತಕ್ಷಣವೇ ದುರಸ್ಥಿ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.