ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಇತ್ತೀಚೆಗೆ ಸುರಿದ ಭಾರೀ ಮಳೆಯಿಂದ ಸಂಕಷ್ಟಕ್ಕೆ ಸಿಲುಕಿದ್ದ ನಗರ ಪ್ರದೇಶದ ಕೊಳಗೇರಿಗಳ ನಿವಾಸಿಗಳಿಗೆ ಫ್ಲಿಪ್ ಕಾರ್ಟ್ ನೆರವಿನ ಹಸ್ತ ಚಾಚಿದೆ. ಗೀವ್ ಫೌಂಡೇಶನ್, ಡಾಕ್ಟರ್ ಫಾರ್ ಯು ಮತ್ತು ಆ್ಯಕ್ಷನ್ ಏಯ್ಡ್ ಸಂಸ್ಥೆಗಳ ಸಹಯೋಗದಲ್ಲಿ ಫ್ಲಿಪ್ ಕಾರ್ಟ್ ಸಂಕಷ್ಟಕ್ಕೆ ಸಿಲುಕಿದ್ದ ಜನರ ನೆರವಿಗೆ ಧಾವಿಸಿದೆ.
ಭಾರೀ ಮಳೆಯಿಂದ ನೀರು ತುಂಬಿದ್ದ ತಗ್ಗು ಪ್ರದೇಶಗಳ ಕೊಳಗೇರಿ ನಿವಾಸಿಗಳಿಗೆ ಫ್ಲಿಪ್ ಕಾರ್ಟ್ ಆಹಾರ ಮತ್ತು ಪರಿಹಾರದ ಕಿಟ್ ಗಳನ್ನು ವಿತರಿಸಿದೆ. ಮಳೆಯಿಂದಾಗಿ ಅನೇಕ ಕುಟುಂಬಗಳ ಮನೆಗಳಲ್ಲಿದ್ದ ಆಹಾರ, ಬಟ್ಟೆ ಮತ್ತು ಇತರೆ ಗೃಹೋಪಯೋಗಿ ವಸ್ತುಗಳು ನಾಶಗೊಂಡಿದ್ದವು. ಇದರ ಪರಿಣಾಮ ನಿವಾಸಿಗಳು ಕೆಲದಿನಗಳವರೆಗೆ ತಾತ್ಕಾಲಿಕ ವ್ಯವಸ್ಥೆಯಲ್ಲಿ ವಾಸಿಸಬೇಕಾಯಿತು.
ಫ್ಲಿಪ್ ಕಾರ್ಟ್ ಕಂಪನಿಯು ಸೆಪ್ಟಂಬರ್ 2022 ರಿಂದ ಎರಡು ತಿಂಗಳ ಕಾಲ ಬೆಂಗಳೂರಿನ ಸಂಕಷ್ಟಕ್ಕೆ ಸಿಲುಕಿದ್ದ ಇಂತಹ ಜನರ ನೆರವಿಗಾಗಿ 13 ಲಕ್ಷ ರೂಪಾಯಿಗಳ ದೇಣಿಗೆ ನೀಡಿದೆ ಮತ್ತು ಈ 569 ಆಹಾರ ಕಿಟ್ ಗಳು, 579 ಶೈಕ್ಷಣಿಕ ಕಿಟ್ ಗಳು, 256 ವಾಶ್ ಕಿಟ್ ಗಳು ಮತ್ತು 50 ಶೆಲ್ಟರ್ ಕಿಟ್ ಗಳನ್ನು ವಿತರಣೆ ಮಾಡಿದೆ. ಫ್ಲಿಪ್ ಕಾರ್ಟ್ ನ ಈ ಉಪಕ್ರಮದಿಂದ 300 ಕ್ಕೂ ಹೆಚ್ಚು ಕುಟುಂಬಗಳಿಗೆ ಪ್ರಯೋಜನವಾಗಿದ್ದು, 1500 ಕ್ಕೂ ಹೆಚ್ಚು ಜನರಿಗೆ ಅನುಕೂಲವಾಗಿದೆ.
ವಿತರಣೆ ಮಾಡಿದ ಶೆಲ್ಟರ್ ಕಿಟ್ ಗಳಿಂದಾಗಿ ನಿವಾಸಿಗಳು ತಕ್ಷಣವೇ ಮನೆಗಳನ್ನು ಪುನರ್ನಿರ್ಮಾಣ ಮಾಡಿಕೊಳ್ಳಲು ಸಾಧ್ಯವಾಗಿದೆ. ಫ್ಲಿಪ್ ಕಾರ್ಟ್ ಮತ್ತು ಇತರೆ ಪಾಲುದಾರ ಸ್ವಯಂ ಸೇವಾ ಸಂಘಗಳ ಈ ಕಾರ್ಯಕ್ಕೆ ಫಲಾನುಭವಿ ಕುಟುಂಬಗಳು ಧನ್ಯವಾದಗಳನ್ನು ಅರ್ಪಿಸಿವೆ.