ಕಾಳಗಿ: ಕನ್ನಡ ಭಾಷೆ ನಮ್ಮ ಬದುಕನ್ನು ಸುಂದರಗೊಳಿಸುತ್ತದೆ, ಬದುಕನ್ನು ಕಟ್ಟಿಕೊಡುತ್ತದೆ. ಸ್ವಾವಲಂಬಿಗಳಾಗಲು ಸ್ವತಂತ್ರವಾಗಿ ಬದುಕಲು ಉತ್ತಮ ಮಾರ್ಗದರ್ಶನ ನೀಡುತ್ತದೆ ಎಂದು ಮಾಜಿ ಶಾಸಕ ವಿಶ್ವನಾಥ ಪಾಟೀಲ ಹೆಬ್ಬಾಳ ಅಭಿಪ್ರಾಯಪಟ್ಟರು.
ತಾಲೂಕಿನ ಹೊಸ ಹೆಬ್ಬಾಳದ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಜರುಗಿದ ಕನ್ನಡ ಸಾಹಿತ್ಯ ಪರಿಷತ್ತಿನ ಹೆಬ್ಬಾಳ ಹೋಬಳಿ ಘಟಕದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಮ್ಮ ಕನ್ನಡ ನಾಡು-ನುಡಿ, ಭಾಷೆ, ನೆಲ-ಜಲ ಸಂರಕ್ಷಣೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯ ಅಮೋಘವಾದುದು ಎಂದು ಹೇಳಿದರು.
ಸಮಾರಂಭ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ, ನಮ್ಮ ಭಾರತೀಯ ಸಂಸ್ಕøತಿಯಲ್ಲಿ ಕನ್ನಡ ಭಾಷೆಗೆ ತನ್ನದೇ ಆದ ಸ್ಥಾನವಿದೆ ಕನ್ನಡ ಭಾಷೆಯು ಸಾಮಾನ್ಯವಾದುದದಲ್ಲ ಅದು ಅತ್ಯಂತ ಸಮೃದ್ಧವಾದ ಹೃದಯ ಶ್ರೀಮಂತಿಕೆಯಿಂದ ಕೂಡಿದ ಭಾಷೆಯಾಗಿದೆ. ಇಂದಿನ ಆಧುನಿಕ ಕಾಲದಲ್ಲೂ ಅನೇಕ ಹೊಸ ಹೊಸ ತಂತ್ರಜ್ಞಾನಗಳ ಅವಿಷ್ಕಾರದಿಂದಾಗಿ ಕನ್ನಡ ಭಾಷೆಯ ಮೇಲೆ ಪ್ರಭಾವ ಬೀರಿದ್ದರೂ ಕೂಡ ಇಂದು ಅನೇಕ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಸಾಹಿತಿಗಳು ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವಲ್ಲಿ ಈಗಾಗಲೇ ಪಣತೊಟ್ಟಿದ್ದಾರೆ ಎಂದು ಮಾರ್ಮಿಕವಾಗಿ ಹೇಳಿದರು.
ಟೆಂಗಳಿ ಶ್ರೀ ಶಾಂತೇಶ್ವರ ಹಿರೇಮಠದ ಶ್ರೀ ಡಾ.ಶಾಂತಸೋಮನಾಥ ಶಿವಾಚಾರ್ಯರು ದಿವ್ಯ ಸಾನಿಧ್ಯ ವಹಿಸಿದ್ದರು. ಕಸಾಪ ತಾಲೂಕಾಧ್ಯಕ್ಷ ಸಂತೋಷ ಕುಡಳ್ಳಿ, ಹೆಬ್ಬಾಳ ಹೋಬಳಿ ಅಧ್ಯಕ್ಷ ಶಿವರಾಜ ಚೇಂಗಟಾ, ಜಿಲ್ಲಾ ಕಸಾಪ ದ ಶಿವರಾಜ ಅಂಡಗಿ, ಸಿದ್ಧಲಿಂಗ ಬಾಳಿ, ರವೀಂದ್ರಕುಮಾರ ಭಂಟನಳ್ಳಿ, ವಿನೋದ ಜೇನವೇರಿ, ಪ್ರಮುಖರಾದ ಬಸವರಾಜ ಶಿವಗೋಳ, ಮಲ್ಲಿನಾಥ ಪಾಟೀಲ, ನಾಗರಾಜ ದಿವಟಗಿ, ಶರಣಮ್ಮ ಎಸ್.ಟೆಂಗಳಿ, ಉಮೇಶ ಪಂಚಾಳ, ಅಂಬಿಕಾ ಭಜಂತ್ರಿ, ಮಲ್ಕಣ್ಣಗೌಡ ಪಾಟೀಲ, ನವೀನ್ ಕಲಬುರಗಿ, ಯಲ್ಲಾಲಿಂಗ ಪಾಟೀಲ, ಸತೀಶ ಸುಲೇಪೇಟ್, ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಮುಖಂಡರು ಭಾಗವಹಿಸಿದ್ದರು.
ಹೆಬ್ಬಾಳದ ವರಕವಿವೆಂದೇ ಹೆಸರುವಾಸಿಯಾದ ದಿ.ಗುರುಪಾದಪ್ಪ ಎಸ್.ಚೇಂಗಟಿ ಅವರ ಕುರಿತಾದ ಪುಸ್ತಕವನ್ನೂ ಇದೇ ಸಂದರ್ಭದಲ್ಲಿ ಬಿಡುಗಡೆಗೊಳಿಸಲಾಯಿತು.
ವಿವಿಧ ಕ್ಷೇತ್ರದ ಪ್ರಮುಖರಾದ ಜಯಪ್ರಕಾಶ, ಜಗದೀಶ್ವರಯ್ಯಾ ತಂಬೂರಿ, ಡಾ.ಶರಣಬಸಪ್ಪ ಸಂಗೋಳಗಿ, ರಾಜಶೇಖರ ತಮ್ಮಾಣಿ ಅವರನ್ನು ವಿಶೇಷವಾಗಿ ಸತ್ಕರಿಸಲಾಯಿತು.
ಕನ್ನಡ ಸಾಹಿತ್ಯ ಪರಿಷತ್ತಿನ ಸೇವೆ ಗ್ರಾಮದ ಮೂಲೆ-ಮೂಲೆಗಳಲ್ಲೂ ತಲುಪಿಸುವುದು ಆದ್ಯ ಕರ್ತವ್ಯವಾಗಿದ್ದು, ಈ ನಿಟ್ಟಿನಲ್ಲಿ ತಾಲೂಕು ಮತ್ತು ಹೋಬಳಿ ಮಟ್ಟದಲ್ಲೂ ಕನ್ನಡ ಕಟ್ಟುವ ಕಾರ್ಯ ಇದೇ ಮೊದಲ ಬಾರಿಗೆ ಇಷ್ಟೊಂದು ಕ್ರಿಯಾಶೀಲವಾಗಿ ಕಾರ್ಯ ನಿರ್ವಹಿಸುತ್ತಿದೆ. ಪ್ರತಿಯೊಂದು ಗ್ರಾಮದಲ್ಲೂ ಘಟಕಗಳನ್ನು ರಚಿಸಿ, ಜನಸಾಮಾನ್ಯರಲ್ಲೂ ಸಾಹಿತ್ಯಾಸಕ್ತಿ ಮೂಡಿಸುವ ಗುರಿ ಹೊಂದಿದ್ದೇವೆ. – ವಿಜಯಕುಮಾರ ತೇಗಲತಿಪ್ಪಿ, ಅಧ್ಯಕ್ಷ, ಜಿಲ್ಲಾ ಕಸಾಪ.