ಕಲಬುರಗಿ: ರೈತರ ಜೀವನಾಡಿಯಾಗಿರುವ ರೇಷ್ಮೆ ಇಲಾಖೆ ಮತ್ತು ತೋಟಗಾರಿಕೆ ಇಲಾಖೆಯನ್ನು ಕೃಷಿ ಇಲಾಖೆಗೆ ವಿಲೀನಗೊಳಿಸುತ್ತಿರುವ ಸರಕಾರದ ಕ್ರಮ ರೈತ ವಿರೋಧಿಯಾಗಿದೆ. ಇಂತಹ ರೈತ ವಿರೋಧಿ ನೀತಿಯನ್ನು ಕೂಡಲೇ ಸರಕಾರ ಹಿಂಪಡೆಯಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಅಧ್ಯಕ್ಷ ಶರಣಬಸಪ್ಪಾ ಮಮಶೆಟ್ಟಿ ಆಗ್ರಹಿಸಿದ್ದಾರೆ.
ರೇಷ್ಮೆ ಕೃಷಿಯು ನಮ್ಮ ದೇಶದ ಗ್ರಾಮೀಣ ಆರ್ಥಿಕತೆಯ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುವ ಕೃಷಿಯಾಧಾರಿತ ಉದ್ಯಮವಾಗಿದೆ. ಹೆಚ್ಚಿನ ಉದ್ಯೋಗಾವಕಾಶ ನಿಗಧಿತ ಆದಾಯ ಮಹಿಳಾ ಸ್ನೇಹಿಯೂ ಆಗಿರುವುದರಿಂದ ನಿರುದ್ಯೋಗಿ ವಿದ್ಯಾವಂತ ಯುವಜನತೆ ಸಹ ಹೆಚ್ಚಿನ ಸಂಖ್ಯೆಯಲ್ಲಿ ರೇಷ್ಮೆ ಬೆಳೆಯನ್ನು ಅವಲಂಬಿಸಿ, ಜೀವನ ನಡೆಸುತ್ತಿದ್ದಾರೆ. ರೇಷ್ಮೆ ಉತ್ಪಾದನೆಯಲ್ಲಿ ದೇಶದಲ್ಲಿ ಕರ್ನಾಟಕ ರಾಜ್ಯ ಪ್ರಥಮ ಸ್ಥಾನ ಪಡೆದಿದೆ.
ದೇಶದ ರೇಷ್ಮೆ ಉತ್ಪಾದನೆಯಲ್ಲಿ ಕರ್ನಾಟಕದ ಪಾಲು ಶೇಕಡಾ 60 ರಷ್ಟು ಇದೆ. ರಾಜ್ಯದ ರೇಷ್ಮೆ ಇಲಾಖೆ ಮುಚ್ಚುವುದರಿಂದ 2346 ಹುದ್ದೆಗಳು ರದ್ದಾಗಲಿವೆ. ಇದು ಸರಕಾರದ ಮೂರ್ಖತನದ ಕೆಲಸವಾಗಿದೆ. ಇದರಿಂದ ರೇಷ್ಮೆ ಮತ್ತು ತೋಟಗಾರಿಕೆ ಇಲಾಖೆ ಮೇಲೆ ಅವಲಂಬಿಸಿರುವ ಕುಟುಂಬಗಳು ಬಿದಿಗೆ ಬಿಳಲಿವೆ. ರೇಷ್ಮೆ ಉತ್ಪಾದನೆಯಲ್ಲಿ ತೊಡಗಿರುವ ರೇಷ್ಮೆ ಬೆಳೆಗಾರರ ಬದುಕು ಶೋಚನೀಯವಾಗಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಉತ್ತರ ಕರ್ನಾಟಕ ಭಾಗದಲ್ಲಿ ರೇಷ್ಮೆ ವಿಸ್ತರಣೆ ಆಗುತ್ತಿರುವಾಗ ಇಡೀ ಇಲಾಖೆಯನ್ನೇ ಮುಚ್ಚುತ್ತಿರುವುದು ಈ ಭಾಗದ ಜನರಿಗೆ ಅನ್ಯಾಯ ಮಾಡಿದಂತಾಗುತ್ತದೆ. ತೋಟಗಾರಿಕೆ ವ್ಯವಸಾಯದಲ್ಲಿ ತರಕಾರಿ ವ್ಯಾಪಾರ, ಹೂವು ಮಾರಾಟ ಸೇರಿದಂತೆ ವಿವಿಧ ರೀತಿಯ ಹಸಿ ತರಕಾರಿ ಬೆಳೆದು ರೈತರು ತಮ್ಮ ಬದುಕಿನ ಬಂಡಿ ಸಾಗಿಸುತ್ತಿದ್ದಾರೆ. ಆದರೆ ಸರಕಾರ ಇಲಾಖೆಯನ್ನು ಏಕಾಏಕಿ ಮುಚ್ಚುವದರಿಂದ ತೋಟಗಾರಿಕೆ ಸಿಬ್ಬಂದಿಗಳು, ರೈತರು, ತರಕಾರಿ, ವ್ಯಾಪಾರಸ್ಥರು ಅವಲಂಬಿಸಿರುವ ಕಸಬು ಕೂಡ ಕಳೆದುಕೊಂಳ್ಳುತ್ತಾರೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯಲ್ಲಿ ತೊಗರಿ ಬೆಳೆಗೆ ನೆಟೆ ರೋಗ ಬಂದು ತೊಗರಿ ಬೆಳೆಗಾರರು ಸಂಕಷ್ಟಕ್ಕೆ ತುತ್ತಾಗಿದ್ದಾರೆ. ಈ ಬಾರಿ ಇಳುವರಿ ಕೂಡ ಕಡಿಮೆ ಬರುವುದೆಂದು ಅಂದಾಜಿಸಲಾಗಿದೆ. ಇದರಿಂದ ಸರಕಾರ ತೊಗರಿ ಬೆಳೆಗಾರರ ಸಂರಕ್ಷಣೆಗೆ ಮುಂದಾಗಬೇಕು. ಬೆಂಬಲ ಬೆಲೆ ನೀಡಬೇಕು. ಬೆಳೆದ ಎಲ್ಲ ತೊಗರಿ ಸರಕಾರ ಖರೀದಿಸಬೇಕು ಮತ್ತು ರೇಷ್ಮೆ ಮತ್ತು ತೋಟಗಾರಿಕೆ ಇಲಾಖೆ ಕೃಷಿ ಇಲಾಖೆಯಲ್ಲಿ ವಿಲೀನ ಮಾಡುವುದನ್ನು ಕೈಬಿಡಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಹೋರಾಟ ಮಾಡಬೇಕಾಗುತ್ತದೆ ಎಂದು ಸಂಘದ ಜಿಲ್ಲಾ ಕಾರ್ಯದರ್ಶಿ ಸಾಯಬಣ್ಣಾ ಗುಡುಬಾ ಎಚ್ಚರಿಕೆ ನೀಡಿದ್ದಾರೆ.