ಅಮ್ಮನ ಭಾವಕ್ಕೆ ಸಾಟಿಯಾದ ಶಬ್ದವಿಲ್ಲ | ಸೇಡಂನಲ್ಲಿ ಅಮ್ಮ ಪ್ರಶಸ್ತಿ ಪ್ರದಾನ

0
13

ಸೇಡಂ: ಅಮ್ಮ ಎನ್ನುವ ಶಬ್ದದಲ್ಲಿ ಇರುವ ಭಾವಕ್ಕೆ ಮತ್ತೊಂದು ಪದದ ಸಾಟಿಯೇ ಇಲ್ಲ ಎಂದು ಹಿರಿಯ ಲೇಖಕಿಯೂ ಆಗಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಾಜಿ ಸಚಿವರಾದ ಶ್ರೀಮತಿ ಲೀಲಾದೇವಿ ಆರ್.ಪ್ರಸಾದ್ ಹೇಳಿದರು.

ಸೇಡಂನ ಐತಿಹಾಸಿಕ ಶ್ರೀ ಪಂಚ ಲಿಂಗೇಶ್ವರ ದೇವಾಲಯದ ಶಾಂಭವಿ ರಂಗಮಂಟಪದಲ್ಲಿ ಶನಿವಾರ ಆಯೋಜಿ ಸಿದ್ದ ಮಾತೋಶ್ರೀ ಮಹಾ ದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನವು ಕೊಡ ಮಾಡುವ `ಅಮ್ಮ ಪ್ರಶಸ್ತಿ’ ಪ್ರದಾನ ಸಮಾರಂಭದಲ್ಲಿ ಐವರು ಲೇಖಕರಿಗೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, ಯಾವ ಸಾಹಿತಿಯೂ ಅಮ್ಮನ ಭಾವಕ್ಕೆ ಪರ್ಯಾಯ ಶಬ್ದ ಬರೆದಿಲ್ಲ. ಯಾಕೆಂದರೆ, ಅಮ್ಮನ ಭಾವಕ್ಕೆ ಸಾಟಿಯಾದ ಬೇರೆ ಯಾವುದೇ ಶಬ್ದ ಬಹುಶಃ ಜಗತ್ತಿನಲ್ಲಿ ಇಲ್ಲ ಎಂದರು. ನಮ್ಮ ಬದುಕು, ನಮ್ಮ ಸಂಸ್ಕೃತಿ ಇರುವುದೇ ಸಾಹಿತ್ಯದಲ್ಲಿ. ಸಾಹಿತ್ಯ, ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಬದುಕಿನಲ್ಲಿ ಅಳವಡಿಸಿಕೊಂಡಲ್ಲಿ ಮಾತ್ರ ಬದುಕಿನ ಸಾರ್ಥಕತೆ ಇದೆ ಎಂದರು.

Contact Your\'s Advertisement; 9902492681

ತಾಯಿಯಲ್ಲಿ ಇರುವಂತಹ ಗುಣಗಳು ಪ್ರಪಂಚದಲ್ಲಿ ಬೇರೆಲ್ಲೂ ಸಿಗಲಿಕ್ಕಿಲ್ಲ. ತಾಯಿ ಎನ್ನುವ ಶಬ್ದದಲ್ಲಿ ಎಲ್ಲಕ್ಕೂ ಮಿಗಿಲಾದ ಶಕ್ತಿಯಿದೆ. ತಾಯಿಯನ್ನು ನಿಕೃಷ್ಟವಾಗಿ ಕಾಣುವುದು ಸಾಮಾನ್ಯವಾಗಿದೆ ಎಂದು ಖೇದ ವ್ಯಕ್ತಪಡಿಸಿದರು. ಆಧುನಿಕತೆಯ ಬೆನ್ನು ಹತ್ತಿ ಸ್ವಾಭಿಮಾನದ ಬದುಕನ್ನು ಮರೆಯುತ್ತಿದ್ದೇವೆ. ನಿಮ್ಮ ತಂದೆ ತಾಯಿಯವರನ್ನು ಪ್ರೀತಿಯಿಂದ ಹಾಗು ಉಪವಾಸವಿರದಂತೆ ನೋಡಿಕೊಳ್ಳಿ. ಹಾಗಾದಾಗ ಮಾತ್ರ ನೀವು ಪಡೆದ ಪ್ರಶಸ್ತಿಗೆ ಅರ್ಥ ಬರುವುದು ಎಂದು ಪ್ರಶಸ್ತಿ ಪುರಸ್ಕೃತರಿಗೆ ಕಿವಿ ಮಾತು ಹೇಳಿದರು.

ಹೆತ್ತವರನ್ನು ಪ್ರೀತಿಯಿಂದ ನೋಡಿಕೊಳ್ಳುವ ಸಂಸ್ಕೃತಿ ನಮ್ಮದು. ಆದರೆ ವೃದ್ಧಾಶ್ರಮಗಳು ಹೆಚ್ಚಾಗುತ್ತಿವೆ ಎಂದು ವಿಷಾದಿಸಿದರು.

ಅಮ್ಮನ ಹೆಸರಿನಲ್ಲಿ ಕೊಡಮಾಡುತ್ತಿರುವ ಪ್ರಶಸ್ತಿ ಕನ್ನಡ ಸಾಹಿತ್ಯದ ಸಂದರ್ಭದಲ್ಲಿ ಅತ್ಯಂತ ಶ್ರೇಷ್ಠ ಪ್ರಶಸ್ತಿಯಾಗಿದೆ ಎಂದು ಶ್ಲಾಘಿಸಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಮಾಜಿ ಸಚಿವರಾದ ಡಾ.ಶರಣಪ್ರಕಾಶ ಪಾಟೀಲ ಮಾತನಾಡಿ, ಅಮ್ಮ ಪ್ರಶಸ್ತಿ ಪ್ರತಿವರ್ಷ ಬದ್ಧತೆಯಿಂದ ಮಾಡುತ್ತಿದ್ದು, ಇಡೀ ಕನ್ನಡ ನಾಡು ಸೇಡಂನ ಕಡೆಗೆ ಗಮನಹರಿಸುವಂತೆ ಮಾಡಿದೆ ಎಂದು ಹೇಳಲು ಹೆಮ್ಮೆ ಎನಿಸುತ್ತದೆ ಎಂದರು. ಮಾತೃವಾತ್ಸಲ್ಯ ಮತ್ತು ಅಮ್ಮನಿಗೆ ಸರಿಸಾಟಿ ಯಾವುದೂ ಇಲ್ಲ. ತಂದೆ ತಾಯಿಗೆ ಗೌರವದಿಂದ ಕಾಣಬೇಕು ಎಂದರು.

ಸೇಡಂನ ಶ್ರೀ ಕೊತ್ತಲ ಬಸವೇಶ್ವರ ದೇವಾಲಯದ ಪೂಜ್ಯರಾದ ಶ್ರೀ ಸದಾಶಿವ ಮಹಾಸ್ವಾಮಿಗಳು ಸಾನಿಧ್ಯ ವಹಿಸಿದ್ದರು.

ಮಾಜಿ ಉಪಸಭಾಪತಿ ಚಂದ್ರಶೇಖರರೆಡ್ಡಿ ದೇಶಮುಖ ಮದನಾ, ನಿವೃತ್ತ ಪ್ರಾಂಶುಪಾಲರಾದ ಪ್ರೊ.ಹಾಶರೆಡ್ಡಿ ಮನ್ನೆ, ಪ್ರತಿಷ್ಠಾನದ ಸಂಚಾಲಕಿ ರತ್ನಕಲಾ ಮಹಿಪಾಲರೆಡ್ಡಿ ವೇದಿಕೆಯ ಮೇಲಿದ್ದರು. ಅಮ್ಮನ ಕುರಿತು ವಿದ್ಯಾರ್ಥಿನಿ ಹಫೀಜಾ ಶಬ್ಬೀರ ಮಾತನಾಡಿದಳು.

ಅಮ್ಮ ಪ್ರಶಸ್ತಿ ಸಂಸ್ಥಾಪಕ ಸಂಚಾಲಕ ಮಹಿಪಾಲರೆಡ್ಡಿ ಮುನ್ನೂರು ಕಾರ್ಯಕ್ರಮ ನಿರೂಪಿಸಿದರು. ಅಮ್ಮನ ಕುರಿತಾದ ಹಾಡುಗಳನ್ನು ಗಾಯಕ ವೀರೇಂದ್ರ ಭಂಟನಳ್ಳಿ ಹಾಡಿದರು. ಸಿದ್ದಪ್ರಸಾದರೆಡ್ಡಿ ಸ್ವಾಗತಿಸಿದರು. ನಿರ್ವವಣೆ ರಾಜುರೆಡ್ಡಿ, ಮಹಾದೇವರೆಡ್ಡಿ, ಕಾರ್ತಿಕರೆಡ್ಡಿ, ದೀಪಕ್ ತಡಕಲ್. ವಿಜಯಭಾಸ್ಕರರೆಡ್ಡಿ ವಂದಿಸಿದರು.

ಅಮ್ಮ ಪ್ರಶಸ್ತಿಗೆ ಭಾಜನರಾದವರಿಗೆ ಶಾಲು ಹೊದಿಸಿ ಸತ್ಕಾರ, ಮೊಮೆಂಟೋ, ಅಭಿನಂದನಾ ಗೌರವದ ಪತ್ರ, ಐದು ಸಾವಿರ ನಗದು ಪುರಸ್ಕಾರ ನೀಡಿದ್ದಲ್ಲದೇ, ಈ ನೆಲದ ಸಿರಿಧಾನ್ಯ ಎನಿಸಿರುವ ತೊಗರಿ ಬೇಳೆಯನ್ನು ಪ್ರತಿವರ್ಷದಂತೆ ಈ ಸಲವೂ ಕೊಡುವ ಮೂಲಕ ಉಡಿ ತುಂಬಿದ್ದು ವಿಶೇಷವಾಗಿತ್ತು.

ಸ್ವಾವಲಂಬಿ ಜೀವನ ನಡೆಸುವುದಕ್ಕಾಗಿ ಇಬ್ಬರು ಮಹಿಳೆಯರಿಗೆ ಎರಡು ಹೊಲಿಗೆ ಯಂತ್ರಗಳನ್ನು ನೀಡಲಾಯಿತು. ಯಲ್ಲಮ್ಮ ತಳವಾರ ಮತ್ತು ನಿರ್ಮಲಾ ಮಲಶೆಟ್ಟಿ ಅವರಿಗೆ ವಿತರಿಸಲಾಯಿತು. ಕಳೆದ ೧೫ ವರ್ಷಗಳಿಂದ ದಿ.ನಾಗಪ್ಪ ಮಾಸ್ಟರ್ ಅವರ ಸ್ಮರಣಾರ್ಥ ಸೊಸೆ ರತ್ನಕಲಾ ರೆಡ್ಡಿ ಅವರು ಹೊಲಿಗೆ ಯಂತ್ರಗಳನ್ನು ನೀಡುತ್ತಿದ್ದಾರೆ.

ಅಮ್ಮನ ಹೆಸರಿನಲ್ಲಿ ಕೊಡಮಾಡುತ್ತಿರುವ ಈ ಪ್ರಶಸ್ತಿ ಕನ್ನಡ ಸಾಹಿತ್ಯದ ಸಂದರ್ಭದಲ್ಲಿ ಅತ್ಯಂತ ಶ್ರೇಷ್ಠ ಪ್ರಶಸ್ತಿಯಾಗಿದೆ.- ಲೀಲಾದೇವಿ ಆರ್.ಪ್ರಸಾದ್, ಮಾಜಿ ಸಚಿವರು

ಸೇಡಂ ನೆಲವು ಕನ್ನಡದ ಬಹುಮುಖ ಪ್ರತಿಭೆಗಳನ್ನು `ಅಮ್ಮ ಪ್ರಶಸ್ತಿ’ಯ ಮೂಲಕ ಸೆಳೆಯುತ್ತಿದೆ. ಇದು ಅಮ್ಮ ಎನ್ನುವ ಪದಕ್ಕೆ ಮತ್ತು ಬದ್ದತೆಯಿಂದ ಮಾಡಿಕೊಂಡು ಬರುತ್ತಿ ರುವ ಅಮ್ಮ ಪ್ರತಿಷ್ಠಾನದ ಮೌಲ್ಯವನ್ನು ಸಾಕ್ಷಿಕರಿಸುತ್ತಿದೆ.- ಡಾ.ಶರಣಪ್ರಕಾಶ ಪಾಟೀಲ, ಮಾಜಿ ಸಚಿವರು.

`ತಾಯಿಯ ಋಣವನ್ನು ನೆನಪಿಸಿಕೊಳ್ಳುವಂತೆ ಮಾಡಿದ್ದು ಅಮ್ಮ ಪ್ರಶಸ್ತಿಯ ಈ ಜೀವಕಾರುಣ್ಯದ ಪ್ರೀತಿ. ತಾರತಮ್ಯವಿಲ್ಲದ ಭಾವವನ್ನು ಬೆಳೆಸುವ ಅಮ್ಮ, ಲೋಕ ತಪ್ಪು ಮಾತನಾಡಿದಾಗ ತಿದ್ದುವ ಭಾವ ಮತ್ತು ತಾಯಿ ನೋಟದಿಂದ ನೋಡಬೇಕಿದೆ. – ಡಾ.ಸಬಿತಾ ಬನ್ನಾಡಿ, ಅಮ್ಮ ಪ್ರಶಸ್ತಿ ಸ್ವೀಕರಿಸಿದ ಸಂದರ್ಭ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here