ಕಲಬುರಗಿ : ರಾಜ್ಯದ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಅವರು ಕಲ್ಯಾಣ ಭಾಗದ ವಿಭಾಗೀಯ ಕರ್ನಾಟಕ ಕೇಂದ್ರವಾದ ಕಲಬುರಗಿಗೆ ಭೇಟಿ ನೀಡಿ, ಇಲ್ಲಿನ ಕಾರ್ಮಿಕರ ಸಮಸ್ಯೆಗಳನ್ನು ಅರಿಯಬೇಕು ಎಂದು ನವ ಕಲ್ಯಾಣ ಕರ್ನಾಟಕ ಕಟ್ಟಡ ಕಾರ್ಮಿಕರ ಸಂಘದ ಸದಸ್ಯರು ಗುರುವಾರ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿ ಕಚೇರಿಯ ಅಧಿಕಾರಿಗೆ ಮನವಿ ಸಲ್ಲಿಸಿದರು.
ಜಿಲ್ಲೆಯಲ್ಲಿ 3 ಲಕ್ಷಕ್ಕೂ ಅಧಿಕ ಕಾರ್ಮಿಕ ಫಲಾನುಭವಿಗಳು ಇದ್ದು, ಯೋಜನೆಗಳಿಂದ ಸರ್ಕಾರದ ವಂಚಿತರಾಗುತ್ತಿದ್ದಾರೆ. ಅಧಿಕಾರಿಗಳು ಸರಿಯಾದ ಮಾಹಿತಿ ಕೊಡದೆ, ನಿರ್ಲಕ್ಷ ವಹಿಸುತ್ತಿದ್ದಾರೆ.
ಕಾರ್ಮಿಕ ಸಚಿವರು ಬೆಂಗಳೂರಿಗೆ ಸೀಮಿತವಾಗದೆ, ಎಲ್ಲಾ ಜಿಲ್ಲೆಗಳಿಗೆ ಭೇಟಿ ಕೊಟ್ಟು, ಅಲ್ಲಿನವರ ಸಮಸ್ಯೆಗಳಿಗೆ ಕಿವಿಯಾಗಬೇಕು ಎಂದು ಒತ್ತಾಯಿಸಿದರು. ಇಲ್ಲಿನ ಕಾರ್ಮಿಕರ ವಿಭಾಗೀಯ ಕಚೇರಿಯಲ್ಲಿ ಅವ್ಯವಹಾರ ನಡೆಯುತ್ತಿದೆ. ಆಯುಕ್ತರು ಹಾಗೂ ಸಹಾಯಕ ಆಯುಕ್ತರು ಯಾವುದೇ ರೀತಿಯ ಕ್ರಮಗಳನ್ನು ತೆಗೆದುಕೊಳ್ಳದೆ ಬೇಕಾಬಿಟ್ಟಿಯಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಕಾರ್ಮಿಕ ಸಚಿವರು ನಮ್ಮ ಮನವಿ ಯನ್ನು ಗಂಭೀರವಾಗಿ ತೆಗೆದುಕೊಂಡು ಜಿಲ್ಲೆಗೆ ಭೇಟಿ ಕೊಡಬೇಕು ಎಂದು ಆಗ್ರಹಿಸಿದರು. ಸಂಘದ ಅಧ್ಯಕ್ಷ ಭೀಮರಾಯ ಎಂ.ಕಂದಳ್ಳಿ, ಎಚ್. ಕಾರ್ಯದರ್ಶಿ ಮರೆಪ್ಪ ಮುಖಂಡರಾದ ರೊಟ್ಟನಡಗಿ, ಬಾಬುರಾವ ದೇವರಮನಿ, ಶರಣಪ್ಪ, ಶರಣು ಬಳಿಚಕ್ರ, ದೇವಿಂದ್ರ ಇದ್ದರು.