ಸುರಪುರ: ಕೃಷ್ಣಾ ನದಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿಬಿಡಲಾಗಿದ್ದರಿಂದ ತಾಲ್ಲೂಕಿನ ಅನೇಕ ಗ್ರಾಮಗಳಲ್ಲಿ ನೆರೆ ಹಾವಳಿಯಿಂದಾಗಿ ಅನೇಕ ಕುಟುಂಬಗಳನ್ನು ಗಂಜಿ ಕೇಂದ್ರಗಳಿಗೆ ಸೇರಿಸಲಾಗಿದೆ.ಅದರಂತೆ ತಾಲ್ಲೂಕಿನ ಶೆಳ್ಳಿಗಿ ಗ್ರಾಮದ ನದಿ ದಂಡೆಯಲ್ಲಿದ್ದ ಅನೇಕ ಕುಟುಂಬಗಳು ನೆರೆಯಿಂದಾಗಿ ಸಂತ್ರಸ್ತಗೊಂಡ ಕುಟುಂಬಗಳನ್ನು ನಗರದ ಎಪಿಎಂಸಿ ಗಂಜಿನಲ್ಲಿ ತೆರೆಯಲಾದ ಗಂಜಿ ಕೇಂದ್ರದಲ್ಲಿ ಆಶ್ರಯ ನೀಡಲಾಗಿದೆ.
ಗಂಜಿ ಕೇಂದ್ರದಲ್ಲಿ ಆಶ್ರಯ ಪಡೆದ ಕುಟುಂಬಗಳ ಮಕ್ಕಳು ಶಿಕ್ಷಣ ಕಲಿಕೆಯಿಂದ ವಂಚಿತರಾಗಬಾರದೆಂದು ತಹಸೀಲ್ದಾರ ಸುರೇಶ ಅಂಕಲಗಿ ಕಾಳಜಿವಹಿಸಿ ಮಕ್ಕಳಿಗೆ ಗಂಜಿ ಕೇಂದ್ರದಲ್ಲಿಯೆ ಕಲಿಕೆಗೆ ವ್ಯವಸ್ಥೆ ಕಲ್ಪಿಸುವ ಮೂಲಕ ಜವಬ್ದಾರಿ ಮೆರೆದಿದ್ದಾರೆ.
ಗಂಜಿ ಕೇಂದ್ರದಲ್ಲಿ ನೆಲೆಸಿರುವ ಶೆಳ್ಳಿಗಿ ಗ್ರಾಮದ ಸುಮಾಅರ ಹದಿನೈದು ಮಕ್ಕಳಿಗೆ ಕುಂಬಾರಪೇಟೆ ಶಾಲೆಯ ದೇವಿಂದ್ರಪ್ಪ ನಾಯಕ ಮತ್ತು ರೇವಣಸಿದ್ದಪ್ಪ ಎಂಬ ಶಿಕ್ಷಕರನ್ನು ನಿಯೋಜಿಸಿ ಮಕ್ಕಳಿಗೆ ಪಾಠ ಕಲಿಯಲು ಅನುಕೂಲ ಕಲ್ಪಿಸಿದ್ದು,ಮಕ್ಕಳ ಪೋಷಕರು ತಹಸೀಲ್ದಾರರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸ್ವತ ತಹಸೀಲ್ದಾರ ಸುರೇಶ ಅಂಕಲಗಿಯವರೆ ಗಂಜಿ ಕೇಂದ್ರದಲ್ಲಿದ್ದು ಮಕ್ಕಳ ಕಲಿಕೆಯನ್ನು ಗಮನಿಸಿದರು.ಈ ಸಂದರ್ಭದಲ್ಲಿ ವಿಎ ಪ್ರದೀಪ ನಾಲ್ವಡೆ ತಹಸೀಲ್ ಸಿಬ್ಬಂದಿಗಳಾದ ರವಿ ನಾಯಕ,ಶಿವಕುಮಾರ,ಭೀಮು ಯಾದವ,ಶ್ರೀನಿವಾಸ ಕುಲಕರ್ಣಿ ಇತರರಿದ್ದರು.