ಶಹಾಬಾದ: ಕರ್ನಾಟಕ ರಾಜ್ಯ ಬುಡಕಟ್ಟು ಸಂರಕ್ಷಣಾ ಸಮಿತಿಯ ಅಧ್ಯಕ್ಷ ಹಾಗೂ ತಳವಾರ ಸಮಾಜದ ಹೋರಾಟಗಾರ ಅಮರೇಶ ಕಾಮನಕೇರಿ ಅವರ ಮೇಲಿನ ಹಲ್ಲೆ ಖಂಡಿಸಿ ಶನಿವಾರ ನಗರ ಹಾಗೂ ಗ್ರಾಮೀಣ ತಳವಾರ ಹೋರಾಟ ಸಮಿತಿ ವತಿಯಿಂದ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ನಗರ ಹಾಗೂ ಗ್ರಾಮೀಣ ತಳವಾರ ಹೋರಾಟ ಸಮಿತಿ ಅಧ್ಯಕ್ಷ ಬೆಳೆಪ್ಪ ಖಣದಾಳ ಮಾತನಾಡಿ, ಯಾದಗಿರಿ ಜಿಲ್ಲೆಯಲ್ಲಿ ತಳವಾರ ಸಮಾಜಕ್ಕೆ ಎಸ್ಟಿ ಪ್ರಮಾಣ ಪತ್ರ ನೀಡದೆ ತೊಂದರೆ ಮಾಡುತ್ತಿರುವ ಅಧಿಕಾರಿಗಳನ್ನು ಕೇಳಲು ಯಾದಗಿರಿ ಜಿಲ್ಲೆಯ ಹುಣಸಗಿ ತಹಶೀಲ್ದಾರ್ ಕಚೇರಿಗೆ ಹೋದ ಸಂದರ್ಭದಲ್ಲಿ ಅಮರೇಶ ಕಾಮನಕೇರಿ ಅವರ ಮೇಲೆ ಮಾರಣಾಂತಿಕ ಹಲ್ಲೆ ಮಾಡಲಾಗಿದೆ. ಹಲ್ಲೆ ಮಾಡಿದ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.ಕೇಂದ್ರ ಸರ್ಕಾರ ತಳವಾರ ಸಮಾಜವನ್ನು ಎಸ್ಟಿಗೆ ಸೇರಿಸಿ ರಾಜ್ಯಕ್ಕೆ ಆದೇಶ ಕಳುಹಿಸಿದೆ. ರಾಜ್ಯ ಸರ್ಕಾರ ಅಕ್ಟೋಬರ್ 29ರಂದು ಹಿಂದುಳಿದ ವರ್ಗದಿಂದ ತಳವಾರ ತೆಗೆದು ಎಸ್ಟಿ ಪ್ರಮಾಣಪತ್ರ ನೀಡಲು ಅಧಿಕೃತ ಆದೇಶ ಹೊರಡಿಸಿದೆ. ಆದರೆ ಯಾದಗಿರಿಯಲ್ಲಿ ಪ್ರಮಾಣಪತ್ರ ನೀಡದೆ ತೊಂದರೆ ಮಾಡುತ್ತಿರುವ ಅಧಿಕಾರಿಗಳ ವಿರುದ್ಧ ಮತ್ತೆ ಹೋರಾಟ ಮಾಡುವ ಅನಿವಾರ್ಯತೆ ಇದೆ ಎಂದರು.
ಹಾಲುಮತ ಸಮಾಜದ ಮುಖಂಡ ಬಸವರಾಜ ಮದ್ರಿಕಿ ಮಾತನಾಡಿ, ಅಮರೇಶ ಕಾಮನಕೇರಿ ಅವರ ಮೇಲೆ ಹಲ್ಲೆ ಮಾಡಿರುವುದನ್ನು ಖಂಡಿಸುತ್ತೇವೆ ಎಂದರು. ನಂತರ ಉಪತಹಶೀಲ್ದಾರ್ ಮಲ್ಲಿಕಾರ್ಜುನರೆಡ್ಡಿ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸಿದ್ದು.ಡಿ.ತಳವಾರ, ಮಂಜುನಾಥ ಇಟಗಿ, ವಿಶ್ವನಾಥ ತಳವಾರ, ಚಿದಾನಂದ.ಪಿ.ತಳವಾರ, ಶಂರ ನಾಟೇಕಾರ,ಅಭಿಷೇಕ ಧರ್ಮಾಪೂರ ಸೇರಿದಂತೆ ಅನೇಕರು ಇದ್ದರು.