ಬೆಂಗಳೂರು: ಕರ್ನಾಟಕ ರಾಜ್ಯವು ಅನೇಕ ಶ್ರೇಷ್ಠ ಕ್ರೀಡಾ ಪಟುಗಳನ್ನು ಸಮಾಜಕ್ಕೆ ನೀಡಿದೆ. ವಿಶ್ವ ಮಟ್ಟದಲ್ಲಿ ರಾಜ್ಯ ಮತ್ತು ದೇಶಕ್ಕೆ ಕೀರ್ತಿ ತಂದ ಆಟಗಾರರಿಂದ ಸ್ಫೂರ್ತಿ ಪಡೆದು ಯುವಪೀಳಿಗೆ ಮುನ್ನಡೆಯಬೇಕು ಎಂದು ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರು ಕರೆ ನೀಡಿದರು.
ರಾಜಭವನದ ಗಾಜಿನಮನೆಯಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಮಂಗಳವಾರ ಆಯೋಜಿಸಲಾಗಿದ್ದ 2021ನೇ ಸಾಲಿನ ಏಕಲವ್ಯ, ಜೀವಮಾನ ಸಾಧನೆ, ಕರ್ನಾಟಕ ಕ್ರೀಡಾ ರತ್ನ ಹಾಗೂ 2022-23ನೇ ಸಾಲಿನ ಕ್ರೀಡಾ ಪೋಷಕ ಪ್ರಶಸ್ತಿ, 36ನೇ ರಾಷ್ಟ್ರೀಯ ಕ್ರೀಡಾ ಕೂಟದ ಪದಕ ವಿಜೇತ ಕ್ರೀಡಾಪಟುಗಳಿಗೆ ನಗದು ಪುರಸ್ಕಾರ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿಗಳನ್ನು ಪ್ರದಾನ ಮಾಡಿ ಮಾತನಾಡಿದರು.
ಕರ್ನಾಟಕ ಸರ್ಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ವಿವಿಧ ಕ್ರೀಡೆಗಳಲ್ಲಿ ಸಾಧನೆ ಮಾಡಿದ ಪ್ರತಿಭಾವಂತ ಆಟಗಾರರಿಗೆ ಹಾಗೂ ಕ್ರೀಡಾ ಸಂಸ್ಥೆಗಳಿಗೆ ಏಕಲವ್ಯ ಪ್ರಶಸ್ತಿ, ಜೀವಮಾನ ಸಾಧನೆ ಪ್ರಶಸ್ತಿ, ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿ ನೀಡುತ್ತಿರುವುದು ಸಂತಸದ ವಿಷಯ ಎಂದರು.
ಜಾರ್ಜಿಯಾದಲ್ಲಿ ನಡೆದ ವಿಶ್ವ ಕೆಡೆಟ್ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ 8 ವರ್ಷದೊಳಗಿನವರ ವಿಭಾಗದಲ್ಲಿ ಭಾಗವಹಿಸಿ ಚಿನ್ನದ ಪದಕ ಗೆದ್ದಿದ್ದಕ್ಕಾಗಿ ಚಾರ್ವಿ ಅವರನ್ನು ಸನ್ಮಾನಿಸಲಾಯಿತು. ಈ ಕಾರ್ಯಕ್ಕಾಗಿ ನಾನು ಕರ್ನಾಟಕ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ ಮತ್ತು ಪ್ರಶಸ್ತಿಯನ್ನು ಪಡೆದ ಎಲ್ಲಾ ತರಬೇತುದಾರರಿಗೆ ಮತ್ತು ಆಟಗಾರರಿಗೆ ಅಭಿನಂದನೆಗಳು ತಿಳಿಸುತ್ತಾ ಅವರಿಗೆ ಉಜ್ವಲ ಭವಿಷ್ಯಕ್ಕಾಗಿ ಹಾರೈಸುತ್ತೇನೆ ಎಂದರು.
ಕ್ರೀಡಾ ಚಟುವಟಿಕೆಗಳ ಮಹತ್ವ ನಮಗೆ ಚೆನ್ನಾಗಿ ತಿಳಿದಿದೆ. ದೇಶದ ಪ್ರಧಾನ ಮಂತ್ರಿಗಳು ತಮ್ಮ ದೈನಂದಿನ ಜೀವನದಲ್ಲಿ ಕ್ರೀಡೆ ಮತ್ತು ಆಟಗಳಿಗೆ ಆದ್ಯತೆ ನೀಡುವಂತೆ ಅನೇಕ ಬಾರಿ ಕರೆ ನೀಡಿದ್ದಾರೆ. ಫಿಟ್ ಇಂಡಿಯಾ ಆಂದೋಲನ ಮತ್ತು ಖೇಲೋ ಇಂಡಿಯಾ ಕಾರ್ಯಕ್ರಮವು ಭಾರತದ ಗೌರವಾನ್ವಿತ ಪ್ರಧಾನ ಮಂತ್ರಿಯವರ ಕನಸಿನ ಕಾರ್ಯಕ್ರಮದ ಭಾಗವಾಗಿದೆ. ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ ಅತಿದೊಡ್ಡ ವಿಶ್ವವಿದ್ಯಾನಿಲಯ ಮಟ್ಟದ ಕ್ರೀಡಾ ಸ್ಪರ್ಧೆಯಾಗಿದೆ.
ಈ ಆಟಗಳ ಉದ್ದೇಶವು ಒಲಿಂಪಿಕ್ ಮತ್ತು ಏಷ್ಯನ್ ಕ್ರೀಡಾಕೂಟಗಳಿಗೆ ಕ್ರೀಡಾಪಟುಗಳನ್ನು ಗುರುತಿಸುವುದು ಮತ್ತು ತರಬೇತಿ ನೀಡುವುದು ಮತ್ತು ವಾರ್ಷಿಕ ಆಟಗಳು ಮತ್ತು ಸ್ಪರ್ಧೆಗಳಲ್ಲಿ ಯುವಕರ ಸಾಮೂಹಿಕ ಭಾಗವಹಿಸುವಿಕೆಯನ್ನು ಉತ್ತೇಜಿಸುವುದು, ಹಾಗೆಯೇ ಎಲ್ಲರಿಗೂ ಕ್ರೀಡೆ ಮತ್ತು ಶ್ರೇಷ್ಠತೆಗಾಗಿ ಕ್ರೀಡೆಗಳನ್ನು ಉತ್ತೇಜಿಸುವುದು ಎಂದು ತಿಳಿಸಿದರು.
ಟೋಕಿಯೊ ಒಲಿಂಪಿಕ್-2020 ಕ್ರೀಡಾಕೂಟದಲ್ಲಿ, ಭಾರತವು ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಗರಿಷ್ಠ 7 ಪದಕಗಳನ್ನು ಗೆದ್ದಿದೆ. ಪ್ಯಾರಾಲಿಂಪಿಕ್ ಕ್ರೀಡಾಕೂಟದ ಇತಿಹಾಸದಲ್ಲಿ, ಭಾರತೀಯ ಪ್ಯಾರಾ ಕ್ರೀಡಾಪಟುಗಳು ಈ ಬಾರಿ 19 ಪದಕಗಳನ್ನು ಗೆದ್ದಿದ್ದಾರೆ, ಇದು ಅತ್ಯುತ್ತಮ ಪ್ರದರ್ಶನವಾಗಿದೆ. ಅಂಗವಿಕಲ ಆಟಗಾರರನ್ನು ಕ್ರೀಡೆಯಲ್ಲಿ ಪ್ರೋತ್ಸಾಹಿಸಲು ದಿವ್ಯಾಂಗಜನ ಕ್ರೀಡಾ ಕೇಂದ್ರಗಳನ್ನು ದೇಶದಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು.
ಕರ್ನಾಟಕ ಸರ್ಕಾರವು ವಿವಿಧ ಯೋಜನೆಗಳ ಮೂಲಕ ಕ್ರೀಡಾ ಚಟುವಟಿಕೆಗಳನ್ನು ಉತ್ತೇಜಿಸುತ್ತಿದೆ. ವಿವಿಧ ಹಂತಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಆಟಗಾರರಿಗೆ ಪ್ರಶಸ್ತಿ ನೀಡುವುದರೊಂದಿಗೆ ಅಂತಾರಾಷ್ಟ್ರೀಯ ಮಟ್ಟದ ಆಧುನಿಕ ಕ್ರೀಡಾ ಸೌಲಭ್ಯಗಳನ್ನು ಆಟಗಾರರಿಗೆ ಒದಗಿಸಲಾಗುತ್ತಿದೆ. ಕರ್ನಾಟಕ ರಾಜ್ಯವನ್ನು “ಇಂಟರ್ನ್ಯಾಷನಲ್ ಹಬ್ ಆಫ್ ಸ್ಪೋರ್ಟ್ಸ್” ಮಾಡುವ ನಿಟ್ಟಿನಲ್ಲಿ ಸರ್ಕಾರ ಕೆಲಸ ಮಾಡುತ್ತಿದೆ. ಕರ್ನಾಟಕದಲ್ಲಿ “ಹೊಸ ಶಿಕ್ಷಣ ನೀತಿ” ಯನ್ನು ಪರಿಚಯಿಸುವುದರೊಂದಿಗೆ, “ಕ್ರೀಡೆ” ಯನ್ನು “ಕಡ್ಡಾಯ ಪಠ್ಯಕ್ರಮ” ದ ಒಂದು ಭಾಗವನ್ನಾಗಿ ಮಾಡಲಾಗಿದೆ ಎಂದು ತಿಳಿಸಿದರು.
ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯವು, ರಾಜ್ಯ ಸರ್ಕಾರ ಭಾರತದಲ್ಲಿ ಕ್ರೀಡೆಗಳನ್ನು ಉತ್ತೇಜಿಸಲು ಅನೇಕ ಪರಿಣಾಮಕಾರಿ ಯೋಜನೆಗಳನ್ನು ಮಾಡಿದೆ ಮತ್ತು ಜಾರಿಗೊಳಿಸಿದೆ. ಕ್ರೀಡಾಪಟುಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಸನ್ಮಾನ್ಯ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವರಾದ ನಾರಾಯಣ ಗೌಡ, ಶಾಸಕರಾದ ರಿಜ್ವಾನ್ ಅರ್ಷದ್, ಎಂಎಲ್ ಸಿ ಡಾ.ಕೆ ಗೋವಿಂದರಾಜು, ಅಪರ ಮುಖ್ಯ ಕಾರ್ಯದರ್ಶಿಗಳಾದ ಶಾಲಿನಿ ರಜನೀಶ್, ಪ್ರಧಾನ ಕಾರ್ಯದರ್ಶಿಗಳಾದ ಮಂಜುನಾಥ್ ಪ್ರಸಾದ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಆಯುಕ್ತರಾದ ಮುಲ್ಲೈ ಮುಹಿಲನ್ ಎಂ ಪಿ ಸೇರಿದಂತೆ ಮುಂತಾದ ಗಣ್ಯರು ಉಪಸ್ಥಿತರಿದ್ದರು.