ನೌಕರರಿಗೆ 50 ಲಕ್ಷ ರೂ. ಅಪಘಾತ ವಿಮೆ ಒಡಂಬಡಿಕೆಗೆ ಸಹಿ | ಮಾರ್ಚ್ ಒಳಗೆ ನೇಮಕಾತಿ ಪ್ರಕ್ರಿಯೆ ಪೂರ್ಣ

0
9

ಕಲಬುರಗಿ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ 140 ಬ್ಯಾಕಲಾಗ್ ಹುದ್ದೆ ಸೇರಿದಂತೆ 2020 ರಲ್ಲಿ ಕರೆಯಲಾದ 1,619 ಚಾಲಕ, ಚಾಲಕ-ಕಂ-ನಿರ್ವಾಹಕ ಹುದ್ದೆಗಳ ನೇಮಕಾತಿಗೆ ಇಂದು ದಾಖಲಾತಿ ಪರಿಶೀಲನೆ ನಡೆಯುತ್ತಿದೆ. ನೇಮಕಾತಿ ಸಂಪೂರ್ಣ ಪಾರ್ದರ್ಶಕವಾಗಿ ನಡೆಯುತ್ತಿದ್ದು, ಯಾರಿಗೂ ದುಡ್ಡು ಕೊಡಬೇಕಿಲ್ಲ. ಇಲ್ಲಿ ಶಿಫಾರಸ್ಸು ಸಹ ನಡೆಯಲ್ಲ ಎಂದು ಕೆ.ಕೆ.ಆರ್.ಟಿ.ಸಿ. ಸಂಸ್ಥೆಯ ಅಧ್ಯಕ್ಷ ರಾಜಕುಮಾರ ಪಾಟೀಲ ತೇಲ್ಕೂರ ಹೇಳಿದರು.

ಬುಧವಾರ ಕಲಬುರಗಿ ನಗರದ ಕೆ.ಕೆ.ಆರ್.ಟಿ.ಸಿ ಸಂಸ್ಥೆಯ ಕಲಬುರಗಿ ವಿಭಾಗ-1ರ ವಿಭಾಗೀಯ ಕಾರ್ಯಾಗಾರದಲ್ಲಿ ಸಂಸ್ಥೆಯ ಅಧಿಕಾರಿ-ನೌಕರರಿಗೆ ಕಾಪೆರ್Çೀರೇಟ್ ಸ್ಯಾಲರಿ ಪ್ಯಾಕೇಜ್ ಯೋಜನೆಯಡಿ ಎಸ್.ಬಿ.ಐ. ಬ್ಯಾಂಕಿನೊಂದಿಗೆ ರಸ್ತೆ ಅಪಘಾತದಲ್ಲಿ ಮರಣ ಹೊಂದುವ ನೌಕರರಿಗೆ 50 ಲಕ್ಷ ರೂ. ಅಪಘಾತ ವಿಮೆ ಮತ್ತು ಹೆಚ್.ಪಿ.ಸಿ.ಎಲ್. ಸಂಸ್ಥೆಯಿಂದ ನಿಗಮದ ವಿವಿಧ ಸ್ಥಳದಲ್ಲಿ ಬಾಡಿಗೆ ಆಧಾರದ ಮೇಲೆ ಪೆಟ್ರೋಲ್ ಬಂಕ್ ಸ್ಥಾಪನೆಗೆ ಒಡಂಬಡಿಕೆಗಳನ್ನು ವಿನಿಮಯ ಮಾಡಿಕೊಂಡು ಮಾತನಾಡಿದ ಅವರು, 371ಜೆ ನಿಯಮದಂತೆ ಶೇ.80ರಷ್ಟು ಸ್ಥಳೀಯರಿಗೆ ಉದ್ಯೋಗ ನೀಡಲಾಗುತ್ತಿದೆ. ನೇಮಕಾತಿ ಪ್ರಕ್ರಿಯೆ ಕಂಪ್ಯೂಟರ್ ಆಧಾರಿತವಾಗಿ ನಡೆಯುತ್ತಿದ್ದು, ಎಲ್ಲವು ವಿಡಿಯೋ ಮಾಡಲಾಗುತ್ತಿದೆ ಎಂದರು.

Contact Your\'s Advertisement; 9902492681

ಸಂಸ್ಥೆ ಒಂದು ಕುಟುಂಬವಿದ್ದಂತೆ. ಕುಟುಂಬ ಸದಸ್ಯರಾದ ನೌಕರರ ಹಿತ ಕಾಪಾಡುವುದು ನಮ್ಮ ಕರ್ತವ್ಯ. ಹೀಗಾಗಿ ದೇಶಕ್ಕೆ ಮಾದರಿಯಾದ 50 ಲಕ್ಷ ರೂ. ವೈಯಕ್ತಿಕ ಅಪಘಾತ ವಿಮೆ ಯೋಜನೆ ಜಾರಿಗೆ ಇಂದು ಸಹಿ ಹಾಕಿದ್ದೇವೆ. ಎಸ್.ಬಿ.ಐ. ಬ್ಯಾಂಕಿನಲ್ಲಿ ಸ್ಯಾಲರಿ ಪ್ಯಾಕೇಜ್ ಖಾತೆ ಹೊಂದಿದ ನೌಕರರಿಗೆ ಇದು ಅನ್ವಯವಾಗಲಿದೆ. ಈ ಯೋಜನೆ ಲಾಭ ಪಡೆಯಲು ನೌಕರರು ಒಂದು ರೂ. ಸಹ ವಂತಿಗೆ, ಪ್ರೀಮಿಯಮ್ ಕಟ್ಟಬೇಕಿಲ್ಲ. ರಸ್ತೆ ಅಪಘಾತವಾಗಿ ಶಾಶ್ವತ ಅಂಗವೈಕಲ್ಯವಾದಲ್ಲಿ ಅಂತಹ ನೌಕರರ ಆಸ್ಪತ್ರೆ ವೆಚ್ಚ ಪಾವತಿ ಮಾಡುವುದಲ್ಲದೆ 20 ಲಕ್ಷ ರೂ., ಭಾಗಶ ಅಂಗವೈಕಲ್ಯ ಹೊಂದಿದಲ್ಲಿ 10 ಲಕ್ಷ ರೂ. ನೆರವು ನೀಡಲಾಗುತ್ತಿದೆ. ಇದಲ್ಲದೆ ಅಪಘಾತದಲ್ಲಿ ಮೃತ ನೌಕರರ ಮಕ್ಕಳ ಉನ್ನತ ಶಿಕ್ಷಣ, ಮದುವೆಗೂ ಆರ್ಥಿಕ ಸೌಲಭ್ಯ ಒಳಗೊಂಡ ಕಲ್ಯಾಣ ಯೋಜನೆ ಇದಾಗಿದೆ ಎಂದರು.

ಸಂಸ್ಥೆಗೆ ಹೊಸದಾಗಿ 610 ಸಾರಿಗೆ ಬಸ್, 50 ಸ್ಲೀಪರ್ ಬಸ್ ಖರೀದಿಗೆ ಟೆಂಡರ್ ಕರೆಯಲಾಗಿದೆ. ಶೀಘ್ರವೇ ಕಾರ್ಯಾದೇಶ ನೀಡಲಿದ್ದೇವೆ. ಇದಲ್ಲದೆ ಕೆ.ಕೆ.ಆರ್.ಡಿ.ಬಿ. 45 ಕೋಟಿ ರೂ. ನೆರವಿನೊಂದಿಗೆ 165 ಬಸ್ ಖರೀದಿಗೂ ಚಾಲನೆ ನೀಡಲಾಗಿದೆ. ಮುಂದಿನ ಮಾರ್ಚ್ ಒಳಗೆ 810 ಬಸ್ ಖರೀದಿಸಿ ಸಂಸ್ಥೆಯನ್ನು ಮತ್ತಷ್ಟು ಸಶಕ್ತವನ್ನಾಗಿಸುವ ಗುರಿ ಹೊಂದಲಾಗಿದೆ ಎಂದು ರಾಜಕುಮಾರ ಪಾಟೀಲ ತೇಲ್ಕೂರ ಹೇಳಿದರು.

130 ಕೋಟಿ ರೂ. ಮಧ್ಯಂತರ ಪರಿಹಾರ ಬಿಡುಗಡೆ: 2025ಕ್ಕೆ ಸಂಸ್ಥೆ ರಜತ ಮಹೋತ್ಸವಕ್ಕೆ ಅಣಿಯಾಗುತ್ತಿದೆ. ಈ ಹೊತ್ತಿನಲ್ಲಿ ಸರ್ಕಾರದತ್ತ ಮುಖ ಮಾಡದೆ ಸ್ವಾವಲಂಬಿಯಾಗಿ ಸಂಸ್ಥೆ ಮುನ್ನೆಡೆಯಬೇಕೆಂಬ ಅಭಿಲಾಷೆ ಹೊಂದಿದ್ದೇವೆ. ಪ್ರತಿ ದಿನದ ಸಂಸ್ಥೆಯ ನಷ್ಟ 1 ಕೋಟಿ ರೂ. ಇದನ್ನು ದೂರ ಮಾಡಲು ಸಂಸ್ಥೆಯ ಆಸ್ತಿಗಳನ್ನು ವಾಣಿಜ್ಯ ಕೇಂದ್ರಗಳನ್ನಾಗಿ ಪರಿವರ್ತಿಸಿ ಎಸೆಟ್ ಮ್ಯಾನೇಜ್‍ಮೆಂಟ್‍ಗಾಗಿ ಆರ್ಥಿಕ ಲಾಭ ಗಳಿಸಲು ಗ್ಲೋಬಲ್ ಟೆಂಡರ್ ಕರೆಯಲಾಗಿದೆ. ಅಲ್ಲದೆ 40-50 ಕಡೆ ನಿಗಮದ ಸ್ಥಳದಲ್ಲಿ ಬಾಡಿಗೆ ಅಧಾರದ ಮೇಲೆ ಪೆಟ್ರೋಲ್ ಬಂಕ್ ಸ್ಥಾಪಿಸಲು ಹೆಚ್.ಪಿ.ಸಿ.ಎಲ್ ಸಂಸ್ಥೆ ಮುಂದೆ ಬಂದಿದ್ದು, ಇದರಿಂದ ಸಂಸ್ಥೆಗೆ 4-5 ಕೋಟಿ ರೂ. ಲಾಭವಾಗಲಿದೆ ಎಂದ ಅವರು, ಸಂಸ್ಥೆ ಮತ್ತು ಕಾರ್ಮಿಕರ ಕಲ್ಯಾಣಕ್ಕೆ ರಾಜ್ಯ ಸರ್ಕಾರ ಇತ್ತೀಚೆಗೆ 130 ಕೋಟಿ ರೂ. ಮಧ್ಯಂತರ ಪರಿಹಾರ ಸಹ ಬಿಡುಗಡೆ ಮಾಡಿದೆ ಎಂದರು.

ನೌಕರರೊಂದಿಗೆ ಸಂವಾದ: ಕಾರ್ಮಿಕರ ಶ್ರಮದಿಂದಲೇ ಸಂಸ್ಥೆ ಬೆಳೆಯಲು ಸಾಧ್ಯ. ಕಾರ್ಮಿಕರ ನೋವು ನಲಿವುಗಳಿಗೆ ಸ್ಪಂದಿಸಲು ಮತ್ತು ಅವರ ಕುಂದುಕೊರತೆ ಆಲಿಸಲು ಒಂದು ದಿನ ಮುಕ್ತವಾಗಿ ನಿಮ್ಮೊಂದಿಗೆ ಸಂವಾದ ಮಾಡುವೆ ಎಂದ ನೆರೆದ ಕಾರ್ಮಿಕ ಬಂಧುಗಳಿಗೆ ತಿಳಿಸಿದ ಅಧ್ಯಕ್ಷ ರಾಜಕುಮಾರ ಪಾಟೀಲ ತೇಲ್ಕೂರ, ವೇತನ ತಾರತಮ್ಯ ಸೇರಿದಂತೆ ನೌಕರರ ಹಲವು ಬೇಡಿಕೆಗಳನ್ನು ಮುಕ್ತವಾಗಿ ಚರ್ಚೆ ಮಾಡಿ ಬಗೆಹರಿಸಲಾಗುವುದು ಎಂದರು.

10 ಲಕ್ಷ ರೂ. ಪರಿಹಾರ ವಿತರಣೆ: ಆಳಂದ ಘಟಕದಲ್ಲಿ ಚಾಲಕ-ಕಂ- ನಿರ್ವಾಹಕರಾಗಿದ್ದ ದಿ.ಪ್ರಭುಲಿಂಗ ತಂದೆ ಮಾಪಣ್ಣ ನಿಧನ ಹಿನ್ನೆಲೆಯಲ್ಲಿ ಇವರ ಪತ್ನಿ ಹೇಮಲತಾ ಉರ್ಫ್ ಲಲಿತಾಬಾಯಿ ಅವರಿಗೆ ಇದೇ ಸಂದರ್ಭದಲ್ಲಿ ಆಂತರಿಕ ಗುಂಪು ವಿಮೆ ಯೋಜನೆಯಡಿ 10 ಲಕ್ಷ ರೂ. ಪರಿಹಾರವನ್ನು ರಾಜಕುಮಾರ ಪಾಟೀಲ ತೇಲ್ಕೂರ ವಿತರಿಸಿದರು.

ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ರಾಚಪ್ಪ ಪ್ರಸ್ತಾವಿಕವಾಗಿ ಮಾತನಾಡಿ, ಸಂಸ್ಥೆಯ ನೌಕರರ ಹಿತದೃಷ್ಠಿಯಿಂದ ದೇಶದಲ್ಲಿಯೆ ಮಾದರಿಯಾದ 50 ಲಕ್ಷ ರೂ. ರಸ್ತೆ ಅಪಘಾತ ವಿಮೆಗೆ ಇಂದು ಸಹಿ ಹಾಕಲಾಗಿದೆ. ಆಂತರಿಕ ಗುಂಪು ವಿಮೆ 3 ರಿಂದ 10 ಲಕ್ಷ ರೂ. ಗಳಿಗೆ ಹೆಚ್ಚಿಸಿದೆ. ಮುಂದಿನ ಜನವರಿಯಲ್ಲಿ ಹುಮನಾಬಾದನಲ್ಲಿ ಟೆಸ್ಟ್ ಟ್ರ್ಯಾಕ್ ಚಾಲನೆ ನೀಡಲಾಗುತ್ತಿದೆ. ಕಲಬುರಗಿ ಜಿಲ್ಲೆಯ ತೇಲ್ಕೂರ ಗ್ರಾಮದ 20 ಎಕರೆ ಪ್ರದೇಶದಲ್ಲಿ 15 ಕೋಟಿ ರು. ವೆಚ್ಚ ಮಾಡಿ ಚಾಲಕರ ತರಬೇತಿ ಕೇಂದ್ರ ಸ್ಥಾಪಿಸಲಾಗುತ್ತಿದೆ. ಪ್ರತಿ ತಿಂಗಳ ಮೊದಲನೇ ದಿನದಂದೇ ನೌಕರರಿಗೆ ವೇತನ ನೀಡಲಾಗುತ್ತಿದೆ. ಕಾರ್ಗೋ ಸೇವೆ ಮತ್ತಷ್ಟು ಉತ್ತಮಗೊಳಿಸುವ ಯೋಚನೆ ಇದೆ ಎಂದು ಸಂಸ್ಥೆಯ ಸಾಧನೆಯ ಚಿತ್ರಣವನ್ನು ತೆರೆದಿಟ್ಟರು.

ಕಾರ್ಯಕ್ರಮದಲ್ಲಿ ಕಲಬುರಗಿ ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್, ಮಾತನಾಡಿ, ಸಂಸ್ಥೆಯ ನೌಕರರರಿಗೆ 50 ಲಕ್ಷ ರೂ. ರಸ್ತೆ ಅಪಘಾತ ವಿಮೆ ಯೋಜನೆ ಜಾರಿಗೆ ತಂದಿದು ಶ್ಲಾಘನೀಯ. ನೌಕರರ ಮಕ್ಕಳ ಉನ್ನತ ಶಿಕ್ಷಣಕ್ಕೂ ಸಂಸ್ಥೆ ಮುಂದಾಗಬೇಕು ಎಂದರು.
ಇದೇ ಸಂದರ್ಭದಲ್ಲಿ ಉತ್ತಮ ಕೆ.ಎಂ.ಪಿ.ಎಲ್. ಸಾಧನೆಗೈದ ಚಾಲನಾ ಸಿಬ್ಬಂದಿ, ಡಿಪೋ ಮ್ಯಾನೇಜರ್‍ಗಳಿಗೆ ನಗದು ಬಹುಮಾನ ಮತ್ತು ಪ್ರಶಂಸನಾ ಪತ್ರ ನೀಡಿ ಸತ್ಕರಿಸಲಾಯಿತು.

ಆರೋಗ್ಯ ಶಿಬಿರ: ನಗರದ ಯೂನೈಟೆಡ್ ಆಸ್ಪತ್ರೆಯವರು ಕಾರ್ಮಿಕ ವರ್ಗದವರಿಗೆ ಉಚಿತ ಆರೋಗ್ಯ ಶಿಬಿರ ಸಹ ಆಯೋಜಿಸಿದ್ದರು. ಶಿಬಿರಿದ ಕುರಿತು ಮಾತನಾಡಿದ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ವೀಣಾ ಸಿದ್ದಾರೆಡ್ಡಿ ಅವರು ಸಂಸ್ಥೆಯ ಕಾರ್ಮಿಕರಿಗೆ ತಮ್ಮ ಆಸ್ಪತ್ರೆಯಲ್ಲಿ ಓ.ಪಿ.ಡಿ. ಸೇವೆ ಉಚಿತವಾಗಿ ನೀಡಲು ಆರೋಗ್ಯ ಕಾರ್ಡ್ ನೀಡಲಾಗುತ್ತಿದೆ. ಒಂದು ವರ್ಷದ ಅವಧಿಗೆ ಕಾರ್ಡ್ ಚಾಲ್ತಿಯಲ್ಲಿರುತ್ತದೆ. ಇದಲ್ಲದೆ ಸಿ.ಟಿ.ಸ್ಕ್ಯಾನ್, ಎಕ್ಸ್ರೇ ಪರೀಕ್ಷೆಗೆ ಶೇ.50ರಷ್ಟು ಮೊತ್ತ ರಿಯಾಯಿತಿ ನೀಡಲಾಗುತ್ತಿದೆ. ಇದರ ಸೌಲ;ಭ್ಯ ಪಡೆದುಕೊಳ್ಳುವಂತೆ ತಿಳಿಸಿದರು.

ಎಸ್.ಬಿ.ಐ. ಬ್ಯಾಂಕಿನ ಎ.ಜಿ.ಎಂ ವಿಕ್ರಮ್, ಹೆಚ್.ಪಿ.ಸಿ.ಎಲ್ ಸಂಸ್ಥೆಯ ಚೀಫ್ ಡಿಪೋ ಮ್ಯಾನೇಜರ್ ವಿಪಿನ್, ಮಾರಾಟ ಪ್ರತಿನಿಧಿ ವಂಶಿರೆಡ್ಡಿ, ಕೆ.ಕೆ.ಆರ್.ಟಿ.ಸಿ. ಸಂಸ್ಥೆಯ ಸಿ.ಟಿ.ಎಂ. ಸಂತೋಷ ಸೇರಿದಂತೆ ಇನ್ನಿತರ ಹಿರಿಯ ಅಧಿಕಾರಿಗಳು, ಡಿಪೋ ಮ್ಯಾನೇಜರ್ಸ್, ಸಂಸ್ಥೆಯ ಕಾರ್ಮಿಕ ವೃಂದದವರು, ಕಾರ್ಮಿಕ ಸಂಘಟನೆಗಳ ಮುಖಂಡರು ಇದ್ದರು.

ವಿಭಾಗೀಯ ನಿಯಂತ್ರಣಾಧಿಕಾರಿ ಎಸ್.ಜಿ.ಗಂಗಾಧರ ಸ್ವಾಗತಿಸಿದರು. ಮುಖ್ಯ ಕಾರ್ಮಿಕ ಕಲ್ಯಾಣಾಧಿಕಾರಿ ಶ್ರೀದೇವಿ ಜಿ.ಎಸ್. ವಂದಿಸಿದರು. ವೆಂಕಟೇಶ ಜನಾದ್ರಿ ನಿರೂಪಿಸಿದರು. ಪ್ರಭು ಲೋಣಿ ಪ್ರಾರ್ಥನಾ ಗೀತೆ ಹಾಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here