ಕಲಬುರಗಿ: ಜೇವರಗಿ ತಾಲೂಕಿನ ಜೇರಟಗಿ ಗ್ರಾಮ ಪಂಚಾಯಿತಿಯ ಯಾತನೂರ ಗ್ರಾಮದ ಸರ್ವೇ ನಂ. 1ರಲ್ಲಿ ನಿಂಗಣ್ಣ ಸಿದ್ದಪ್ಪ ಎಂಬುವವರ 30 ಗುಂಟೆ ಜಮೀನಿನಲ್ಲಿ ನಿರ್ಮಾಣ ಮಾಡಿಕೊಂಡಿರುವ ಟೀನ್‍ಶೆಡ್ ಮುಂದೆ ಸಾರ್ವಜನಿಕ ಶೌಚಾಲಯ ನಿರ್ಮಾಣಕ್ಕೆ ನ್ಯಾಯಾಲಯ ತಡೆಯಾಜ್ಞೆ ನೀಡಿದ್ದರೂ ಅದನ್ನು ಉಲ್ಲಂಘಿಸಿರುವ ಪಿಡಿಓ ಹಾಗೂ ಜೆಇ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಸೈಬಣ್ಣಾ ಜಮಾದಾರ ಆಗ್ರಹಿಸಿದರು.
ಸರ್ವೇ ನಂ. 1ರಲ್ಲಿರುವ 30 ಗುಂಟೆ ಜಮೀನಿನಲ್ಲಿ ನಿಂಗಣ್ಣ ಮತ್ತವರ ಸಹೋದರು ಸಮನಾಗಿ ಭಾಗಿಯಾಗಿದ್ದು, 30ಗುಂಟೆಯಲ್ಲಿ 7ಗುಂಟೆ ಜಮೀನು ರಸ್ತೆಗಾಗಿ ಬಿಟ್ಟುಕೊಡಲಾಗಿದ್ದರೂ ಆ ಜಮೀನಿನಲ್ಲಿ ಶೆಡ್ ನಿರ್ಮಿಸಿ ಮಕ್ಕಳೊಂದಿಗೆ ಬದುಕು ನಡೆಸುತ್ತಿರುವ ನಿಂಗಣ್ಣ ಮತ್ತವರ ಪತ್ನಿ ಶರಣಮ್ಮ ಅವರನ್ನು ಗ್ರಾ.ಪಂ. ಸದಸ್ಯರು ಹೆದರಿಸಿ ಬೆದರಿಸಿ ಉದ್ದೇಶಪೂರ್ವಕವಾಗಿ ಶೆಡ್ ಮುಂದೆ ಜಾಗ ಬಿಡದೆ ಸಾರ್ವಜನಿಕ ಶೌಚಾಲಯ ನಿರ್ಮಿಸಿ ಕುಟುಂಬಕ್ಕೆ ತೊಂದರೆ ಕೊಡುತ್ತಾರೆಂದು ದೂರಿದರು.
ನ್ಯಾಯಾಲಯದ ತಡೆಯಾಜ್ಞೆಯನ್ನು ಉಲ್ಲಂಘಿಸಿರುವ ಪಿಡಿಓ ಮತ್ತು ಗುತ್ತಿಗೆದಾರನ ವಿರುದ್ಧ ಕಾನೂನು ಕ್ರಮ ಜರುಗಿಸಿ ರೈತರಿಗೆ ಮತ್ತು ಸರಕಾರಕ್ಕಾದ ಹಾನಿಯನ್ನು ಪಿಡಿಓ ಸಂಬಳದಿಂದ ಭರಿಸಲು ಆಗ್ರಹಿಸಿದ ಸೈಬಣ್ಣಾ ಅವರು ವಾರದೊಳಗೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಶರಣಮ್ಮ, ಶಿವಪುತ್ರ ಗರೂರು, ಸಂಜು ಹೊಡಲ್ಕರ್, ಹನೀಫ್ ಶೇಖ್ ಇದ್ದರು.
ನಾವು ಬಡವರ ನಮಗೆ ಯಾರು ಕೇಳೋರಿಲ್ಲವೆಂದು ನಮ್ಮ ಮೇಲೆ ಗ್ರಾಮಸ್ಥರೆಲ್ಲರೂ ಸೇರಿ ನಮಗೆ ಭಯವನ್ನುಂಟು ಮಾಡಿ ನಮ್ಮ ಜಾಗದಲ್ಲಿ ಶೌಚಾಲಯ ನಿರ್ಮಿಸಿ ತೊಂದರೆ ಕೊಡುತ್ತಿದ್ದಾರೆ. ಅಲ್ಲದೆ ಈ ಕುರಿತು ನೆಲೋಗಿ ಠಾಣೆಗೆ ದೂರು ನೀಡಲು ಹೋದರೂ ದೂರು ಸ್ವೀಕರಿಸುತ್ತಿಲ್ಲ ಪಿಡಿಓ ಅವರಿಗೆ ಮನವಿ ಮಾಡಿದರೆ ಕೇಳುತ್ತಿಲ್ಲ. -ನಿಂಗಣ್ಣ, ನೊಂದ ಕುಟುಂಬಸ್ಥ