ಪಂಚರತ್ನ ರಥಯಾತ್ರೆಯಿಂದ ಕಾಂಗ್ರೆಸ್, ಬಿಜೆಪಿಗೆ ನಡುಕ: ಹೆಚ್.ಡಿ.ಕುಮಾರಸ್ವಾಮಿ

0
30

ಬೆಂಗಳೂರು: ನನ್ನ ಪಂಚರತ್ನ ರಥಯಾತ್ರೆ ನಂತರ ಎರಡು ರಾಷ್ಟ್ರೀಯ ಪಕ್ಷಗಳಲ್ಲಿ ನಡುಕ ಉಂಟಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದರು.

ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ನನ್ನ ಅಭಿಪ್ರಾಯದಲ್ಲಿ ರಥಯಾತ್ರೆ ಆರಂಭ ಆದ ನಂತರ ಬಿಜೆಪಿ, ಕಾಂಗ್ರೆಸ್ ಪಕ್ಷಗಳಲ್ಲಿ ಗಲಿಬಿಲಿ ಪ್ರಾರಂಭ ಆಗಿದೆ. ಈಗ ಬರುತ್ತಿರುವ ಸಮೀಕ್ಷೆಗಳಲ್ಲಿ ಇವೆರಡೂ ಪಕ್ಷಗಳಿಗಿಂತ ಹೆಚ್ಚು ಸ್ಥಾನಗಳನ್ನು ಜೆಡಿಎಸ್ ಗೆಲ್ಲಲಿದೆ ಎಂದು ಗೊತ್ತಾಗಿದೆ ಎಂದರು.

Contact Your\'s Advertisement; 9902492681

ಹಾಗೆಯೇ, ನಾಳೆ ಶ್ರೀನಿವಾಸ ಕಲ್ಯಾಣ ಮುಗಿದ ನಂತರ ದೇವರ ಅನುಗ್ರಹ ಪಡೆದು 97 ರಿಂದ 116 ಸಂಭವನೀಯ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಅವರು ಇದೇ ವೇಳೆ ಪ್ರಕಟಿಸಿದರು.

ಕಾಂಗ್ರೆಸ್ ಪಕ್ಷದ ಶಕ್ತಿ 1994ರಿಂದ ವಿಶ್ಲೇಷಣೆ ಮಾಡಿದರೆ ಈ ಚುನಾವಣೆಯಲ್ಲಿ 65 ರಿಂದ 70 ಸ್ಥಾನ ಗಳಿಸಬಹುದು. ಬಿಜೆಪಿ ಕೂಡ 50 ರಿಂದ 60 ಕ್ಷೇತ್ರ ಗೆಲ್ಲಬಹುದು. ಇದರಲ್ಲೂ ಯಾವುದೇ ಅಚ್ಚರಿ ಇಲ್ಲ ಎಂದರು ಅವರು.

ನಮ್ಮ ಅಭ್ಯರ್ಥಿಗಳು ರಣರಂಗದಲ್ಲಿ ಇದ್ದಾರೆ. ಕಾಂಗ್ರೆಸ್, ಬಿಜೆಪಿಯಲ್ಲಿ ಇನ್ನೂ ಯಾವ ಪರಿಸ್ಥಿತಿ ಎಂದು ನಾನು ನೋಡುತ್ತಿದ್ದೇನೆ. ಪಾಪ, ಕಾಂಗ್ರೆಸ್ ಅಧ್ಯಕ್ಷರು ಹೇಳಿದ್ದಾರೆ. 15 ರಿಂದ 20 ಜನ ಪಕ್ಷಕ್ಕೆ ಬರುತ್ತಾರೆ ಎಂದು. ಅವರ ಪಕ್ಷದಿಂದ ಯಾರು ಯಾರು ಹೊರಗೆ ಹೋಗುತ್ತಾರೆ ಎನ್ನುವ ಪಟ್ಟಿ ನನ್ನ ಹತ್ರ ಇದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವರಿಗೆ ಕುಮಾರಸ್ವಾಮಿ ಅವರು ಟಾಂಗ್ ನೀಡಿದರು.

ಕೆಲವರು ನಮಗೆ ಶಾಕ್ ಕೋಡೋಕೆ ಹೋಗಿ ಅವರಿಗೆ ಶಾಕ್ ಹೊಡೆಸಿಕೊಳ್ಳಬಹುದು. ಯಾರು ಯಾರ ಜತೆ ಟಚ್ ನಲ್ಲಿ ಇದ್ದಾರೆ ಎನ್ನುವುದು ಮುಂದಿನ ದಿನಗಳಲ್ಲಿ ಗೊತ್ತಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಅವರು ಹೇಳಿದರು.

ನನಗೆ ಕಾಂಗ್ರೆಸ್-ಬಿಜೆಪಿ ಮನೆ ಬಾಗಿಲಿಗೆ ಹೋಗುವ ಸ್ಥಿತಿಯನ್ನು ಜನರು ತರಲ್ಲ. ಕಾಂಗ್ರೆಸ್ ಅವರು ಏನೇ ಮಾಡಿದರೂ ನಮ್ಮ ಭದ್ರಕೋಟೆ ಒಡೆಯಲು ಸಾಧ್ಯವಿಲ್ಲ. ಏನೇ ಕಾರ್ಯತಂತ್ರ, ಜಾತಿವಾರು ಸಭೆ – ಸಮಾವೇಶ ಮಾಡಿದರೂ ಅಸಾಧ್ಯ. ಎರಡೂ ರಾಷ್ಟ್ರೀಯ ಪಕ್ಷಗಳನ್ನು ಈ ಬಾರಿ ಜನರು ದೂರ ಇಡುತ್ತಾರೆ ಎಂದು ಅವರು ನೇರ ಮಾತುಗಳಲ್ಲಿ ಹೇಳಿದರು.

1992ರಲ್ಲಿ ಜೆಡಿಎಸ್ ಇಬ್ಭಾಗ ಆಗಿದ್ದರಿಂದ ಕಾಂಗ್ರೆಸ್ ಅಧಿಕಾರಕ್ಕೆ ಬಂತು. 2008ರಲ್ಲಿ ನಾವು ಬಿಜೆಪಿ ನಡುವೆ ವಿಚಾರಕ್ಕೆ 89 ಸ್ಥಾನ ಕಾಂಗ್ರೆಸ್ ಗೆ ಬಂತು. 2013ರಲ್ಲಿ ಕೆಜೆಪಿ, BSR ಪಕ್ಷ ಸ್ಥಾಪನೆ ಆಗಿದ್ದಕ್ಕೆ ಕಾಂಗ್ರೆಸ್ ಅಧಿಕಾರಕ್ಕೆ ಬಂತು. 2018ರಲ್ಲಿ ಅವರು ದೊಡ್ಡ ಅಭಿವೃದ್ಧಿ ಮಾಡಿದ್ದೀನಿ ಅಂದರು, ಕೊನೆಗೆ ಎಷ್ಟು ಸ್ಥಾನ ಬಂತು? ಎಂದು ಕಾಂಗ್ರೆಸ್ ಪಕ್ಷಕ್ಕೆ ಚಾಟಿ ಬೀಸಿದರು.

ಡಿ.ಕೆ.ಶಿವಕುಮಾರ್ ಅವರು ಕಾಂಗ್ರೆಸ್ ಗೆ 130 ಸ್ಥಾನ ಬರುತ್ತೆ ಅಂತಾರೆ. ಹಾಗಾದರೆ ಯಾಕೆ ಜೆಡಿಎಸ್ ನಿಂದ ಬಿಜೆಪಿಯಿಂದ ಶಾಸಕರು ಬರುತ್ತಾರೆ ಅಂತಾರೆ ಅವರು? ಅವರ ಬಳಿ ಗೆಲ್ಲುವ ಅಭ್ಯರ್ಥಿಗಳಿಗೆ ಗತಿ ಇಲ್ಲ ಎಂದರ್ಥ ಅಲ್ಲವೇ? ಅವರ ಬಳಿ ನಂಬರ್ ಇದ್ದರೆ ಯಾಕೆ ಬೇರೆ ಅವರು ಬರ್ತಾರೆ ಅಂತ ಹೇಳ್ತಿದ್ದಾರೆ ಎಂದು ಡಿಕೆಶಿ ವಿರುದ್ದ ಕುಮಾರಸ್ವಾಮಿ ಕಿಡಿಕಾರಿದರು.

ಅಭ್ಯರ್ಥಿಗಳಿಗೆ ಕಿವಿಮಾತು: ಪಕ್ಷದ ಕಚೇರಿಯಲ್ಲಿಂದು ಹಾಕಿ ಶಾಸಕರು ಹಾಗೂ ಸಂಭವನೀಯ ಅಭ್ಯರ್ಥಿಗಳ ಸಭೆ ನಡೆಸಲಾಯಿತು. ಚುನಾವಣೆ ನಡೆಸುವ ಬಗೆ, ಸಾಮಾಜಿಕ ಜಾಲತಾಣಗಳ ಬಳಕೆ, ಪಂಚರತ್ನಗಳ ಪ್ರಚಾರ ಸೇರಿದಂತೆ ಇನ್ನು ಚುನಾವಣೆ ತನಕ ಹೇಗೆಲ್ಲಾ ಕೆಲಸ ಮಾಡಬೇಕು ಎಂಬ ಬಗ್ಗೆ ಕೆಲ ಮಹತ್ವದ ಮಾಹಿತಿ ಹಂಚಿಕೊಂಡಿದ್ದೇನೆ. ನಿಧಾನ ಗತಿಯಲ್ಲಿ ಕೆಲಸ ಮಾಡುತ್ತಿರುವ ಕೆಲವರಿಗೆ ಸ್ವಲ್ಪ ಖಾರವಾಗಿಯೇ ಕಿವಿಮಾತು ಹೇಳಿದ್ದೇನೆ ಎಂದು ಕುಮಾರಸ್ವಾಮಿ ಅವರು ತಿಳಿಸಿದರು.

ಈ ಸಭೆಯಲ್ಲಿ ಅಗತ್ಯಬಿದ್ದರೆ ಕೊನೆಯ ಕ್ಷಣದಲ್ಲಿ ಅಭ್ಯರ್ಥಿಗಳನ್ನು ಬದಲಾವಣೆ ಮಾಡುತ್ತೇವೆ ಅಂತ ಎಚ್ಚರಿಕೆ ನೀಡಿದ್ದೇವೆ. ಈಗಾಗಲೇ ಮಾಜಿ ಪ್ರಧಾನಿ ದೇವೇಗೌಡರು ಕೂಡ ಇದೇ ಮಾತನ್ನು ಹೇಳಿದ್ದಾರೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.

ರಾಮನಗರದಲ್ಲಿ ಶ್ರೀನಿವಾಸ ಕಲ್ಯಾಣ ಮಹೋತ್ಸವ ಹಮ್ಮಿಕೊಂಡಿದ್ದೇವೆ. ಕಲ್ಯಾಣೋತ್ಸವ ಮುಗಿದ ನಂತರ 97 ರಿಂದ 116 ಸಂಭವನೀಯ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುತ್ತೇವೆ. ದೇವರ ಆಶೀರ್ವಾದ ಪಡೆದು ಪಟ್ಟಿಯನ್ನು ಬಿಡುಗಡೆ ಮಾಡುತ್ತವೆ ಎಂದು ಕುಮಾರಸ್ವಾಮಿ ಅವರು ತಿಳಿಸಿದರು.

ಪಂಚರತ್ನ ರಥಯಾತ್ರೆ ಯಶಸ್ವಿಯಾಗಿ ಸಾಗುತ್ತಿದೆ. ಈಗಾಗಲೇ ಯಾತ್ರೆ ಮಾಡಿರುವ 19 ಕ್ಷೇತ್ರದಲ್ಲಿ ನಾವು 17 ಕ್ಷೇತ್ರದಲ್ಲಿ ಗೆಲ್ಲುತ್ತೇವೆ. ಇನ್ನು ಎರಡು ಕ್ಷೇತ್ರಗಳಲ್ಲಿ ಗೆಲ್ಲುವ ವಿಶ್ವಾಸ ಇದೆ ಎಂದರು ಅವರು.

ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಜಿ.ಟಿ.ದೇವೇಗೌಡರು, ಮಾಜಿ ಉಪ ಸ್ಪೀಕರ್ ಎಂ.ಕೃಷ್ಣಾರೆಡ್ಡಿ, ಶಾಸಕ ಲಿಂಗೀಶ್, ಜೆಡಿಎಸ್ ಯುವ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ವಿಧಾನ ಪರಿಷತ್ ಸದಸ್ಯರಾದ ಬಿ.ಎಂ.ಫಾರೂಕ್, ಭೋಜೆಗೌಡ, ಜಿ.ಡಿ.ಹರೀಶ್ ಗೌಡ ಮುಂತಾದವರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here