ಕಲಬುರಗಿ: ಜವಳಿ ಉದ್ಯಮದ ರಾಣಿ ಎಂದು ಕರೆಸಿಕೊಳ್ಳುವ ರೇಷ್ಮೆ ಕುರಿತು ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಪರಿಚಯಿಸುವ “ರೇಷ್ಮೆ ಕೃಷಿ ಉದ್ದಿಮೆ ಪ್ರವಾಸ” ವಿನೂತನ ಪ್ರಯತ್ನಕ್ಕೆ ರೇಷ್ಮೆ ಇಲಾಖೆ ಮುಂದಾಗಿದೆ.
ಭವಿಷ್ಯದ ದೃಷ್ಠಿಯಿಂದ ವಿಧ್ಯಾಭ್ಯಾಸದ ನಂತರ ಸ್ವಯಂ ಉದ್ಯೋಗಕ್ಕೆ ನೆರವಾಗಲೆಂದು ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಪ್ರತಿ ಶನಿವಾರ ರೇಷ್ಮೆ ಉದ್ದಿಮೆ ಕುರಿತು ಪ್ರವಾಸ ಕೈಗೊಳ್ಳುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ್ ಡಿ. ಬದೋಲೆ ಅವರು ರೇಷ್ಮೆ ಇಲಾಖೆಯ ಸೂಚನೆ ನೀಡಿದ ಪರಿಣಾಮ ಪ್ರವಾಸ ಏರ್ಪಾಟುಗೊಂಡಿದೆ.
ರೇಷ್ಮೆ ಉದ್ಯಮದಲ್ಲಿ ಮಣ್ಣಿನಿಂದ ಹಿಡಿದು ರೇಷ್ಮೆ ಧಾರಾ ತೆಗೆಯುವವರೆಗೆ ವಿವಿಧ ಹಂತಗಳಾದ ಹಿಪ್ಪು ನೇರುಳೆ, ಬೇಸಾಯ, ಚಾಕಿ ಹುಳು. ಸಾಕಾಣಿಕೆ ಮತ್ತು ವಿತರಣೆ ಹಾಗೂ ಕೊನೆಯ ಹಂತದ ಹುಳು ಸಾಕಾಣಿಕೆ, ಮಾರುಕಟ್ಟೆ ರೇಷ್ಮೆ ಬಿತ್ತನೆ ಕೋಠಿ ಮತ್ತು ನೂಲು ಬಿಚ್ಚಾಣಿಕೆ ಕೇಂದ್ರಗಳಿಗೆ ಭೇಟಿ ನೀಡಿ ರೇಷ್ಮೆ ಉದ್ದಿಮೆ ಕುರಿತು ವಿದ್ಯಾರ್ಥಿಗಳಿಗೆ ಪರಿಚಿಸುವುದು ಇದರ ಉದ್ದೇಶವಾಗಿದೆ.
ಕಳೆದ ಡಿ.3 ರಂದು ಕಲಬುರಗಿ ನಗರದ ಬಿದ್ದಾಪೂರ ಕಾಲೋನಿಯ ಪೂರ್ಣ ಜ್ಞಾನ ಆಂಗ್ಲ ಮಾಧ್ಯಮ ಶಾಲೆಯ 40 ವಿದ್ಯಾರ್ಥಿಗಳನ್ನು ರೇಷ್ಮೆ ಇಲಾಖೆ ಅಧಿಕಾರಿಗಳು ಇಟಗಾ, ಖಣದಾಳ ಮತ್ತು ಕಲಬುರಗಿ ರೇಷ್ಮೆ ಮಾರುಕಟ್ಟೆ ವೀಕ್ಷಣೆಗೆ ವ್ಯವಸ್ಥೆ ಮಾಡಿದ್ದರು. ರೇಷ್ಮೆ ಕೃಷಿಯ ವಿವಿಧ ಚಟುವಟಿಕೆಗಳನ್ನು ಶಾಲಾ ಮಕ್ಕಳು ಕುತೂಹಲದಿಂದ ವೀಕ್ಷಿಸಿದರು.
ಶರಣಸಿರಸಗಿಯ ಹುಳು ಸಾಕಾಣಿಕೆಗೂ ಭೇಟಿ:ಇನ್ನೂ ಡಿ.10 ರಂದು ಕಲಬುರಗಿ ದಕ್ಷಿಣ ವಲಯ ಡಾಲ್ ಪಿನ್ ಆಂಗ್ಲ ಮಾಧ್ಯಮ ಶಾಲೆಯ 40 ವಿದ್ಯಾರ್ಥಿಗಳು ಹಾಗೂ ಉತ್ತರ ವಲಯದ ಖಾಜಾ ಬಂದೇ ನವಾಜ್ ವಿಶ್ವವಿದ್ಯಾಲಯದಲ್ಲಿ ಬಿ.ಎಸ್.ಸಿ ಪದವಿ ಓದುತ್ತಿರುವ 25 ವಿದ್ಯಾರ್ಥಿಗಳು ಕಲಬುರಗಿ ತಾಲೂಕಿನ ಶರಣಸಿರಸಿಗಿಯ ಶ್ರೀ ಸಮರ್ಥ ಖಾಸಗಿ ಸಾಕಾಣಿಕಾ ಕೇಂದ್ರಕ್ಕೆ ಭೇಟಿ ನೀಡಿ ಚಾಕಿ ಹುಳು ಸಾಕಾಣಿಕೆ ಕುರಿತು ಮಾಹಿತಿ ಪಡೆದರು.
ನಂತರ ಕೊಳ್ಳೂರು ಗ್ರಾಮದ ರೇಷ್ಮೆ ಬೆಳೆಗಾರ ರಾಜೇಶ ಗುತ್ತೇದಾರ ಇವರ ತೋಟದಲ್ಲಿ ಹಿಪ್ಪು ನೇರಳೆ ಬೇಸಾಯ ಹಾಗೂ ಕೊನೆಯ ಹಂತದ ರೇಷ್ಮೆ ಹುಳು ಸಾಕಾಣಿಕೆ ಕುರಿತು ವಿವರ ಪಡೆದರು. ಪ್ರವಾಸದಲ್ಲಿ ರೇಷ್ಮೆ ಉಪನಿರ್ದೇಶಕ ಎನ್.ಎ. ಬಿರಾದಾರ, ಸಹಾಯಕ ನಿರ್ದೇಶಕ ನಯೀಮ್ ಚೌಧರಿ ಅವರು ವಿದ್ಯಾರ್ಥಿಗಳಿಗೆ ರೇಷ್ಮೆ ಕೃಷಿ ಕುರಿತು ಸಮಗ್ರ ಮಾಹಿತಿ ನೀಡಿದರು. ರೇಷ್ಮೆ ನಿರೀಕ್ಷಕ ಬಸಪ್ಪ ನಾಟೀಕರ್, ರೇಷ್ಮೆ ಪ್ರದರ್ಶಕ ರಾಯಿಸುದ್ದಿನ್ ಪ್ರವಾಸದ ತಂಡದಲ್ಲಿ ಇದ್ದರು.