ಕಲಬುರಗಿ: ಬರುವ ದಿನಾಂಕ 19 ಸೋಮವಾರದಿಂದ ಆರಂಭವಾಗಲಿರುವ ಬೆಳಗಾವಿ ಅದಿವೇಶದದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶದ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆಯಾಗಿ ಪರಿಹಾರ ಸಿಗುವ ನಿಟ್ಟಿನಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶದ ಜನಪ್ರತಿನಿಧಿಗಳು ಬದ್ಧತೆ ಮತ್ತು ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸಲು ಕಲ್ಯಾಣ ಕರ್ನಾಟಕ ಜನಪರ ಸಂಫರ್ಷ ಸಮಿತಿಯ ಸಂಸ್ಥಾಪಕ ಅಧ್ಯಕ್ಷರಾದ ಲಕ್ಷ್ಮಣ ದಸ್ತಿ ಯವರು ಅಗ್ರಹಿಸಿದ್ದಾರೆ.
371ನೇ ಕಲಂ ವಿಶೇಷ ಸ್ಥಾನಮಾನದಂತೆ ನಮ್ಮ ಪಾಲಿನ ಸಹಸ್ರಾರು ಹುದ್ದೆಗಳ ನೇಮಕಾತಿ, ವಿಶೇಷ ಸ್ಥಾನಮಾನದ ಪರಿಣಾಮಕಾರಿ ಅನುಷ್ಠಾನಕ್ಕೆ ಪ್ರತ್ಯೇಕ ಮಂತ್ರಾಲಯ ಸ್ಥಾಪನೆ, ಕೃಷ್ಣ ಮೂರನೇ ಹಂತದ ಕಾಮಗಾರಿಗಳ ಬಗ್ಗೆ,ರೈತರ ಸಮಸ್ಯೆ,ಬೀದರದಲ್ಲಿ ಆರು ತಿಂಗಳುಗಳಿಂದ ನಡೆಯುತ್ತಿರುವ ಕಾರಂಜಾ ಸಂತ್ರಸ್ತರ ಹೋರಾಟಕ್ಕೆ ಸ್ಪಂದಿಸುವ ನಿಟ್ಟಿನಲ್ಲಿ ಕಲ್ಯಾಣ ಕರ್ನಾಟಕದ ಶಾಸಕರು ವಿಶೇಷ ಆಸಕ್ತಿ ವಹಿಸಿ ಬೆಳಗಾವಿ ಅದಿವೇಶದದಲ್ಲಿ ಪರಿಹಾರ ಕಂಡುಕೊಳ್ಳುವುದು ಅತಿ ಅವಶ್ಯವಾಗಿದೆ ಎಂದು ತಿಳಿಸಿದ್ದಾರೆ.
ಉತ್ತರ ಕರ್ನಾಟಕದ ಸಮಸ್ಯೆಗಳ ನಿವಾರಣೆಗೆಂದೆ ಆರಂಭವಾಗಿರುವ ಬೆಳಗಾವಿ ಅದಿವೇಶನ ಕಲ್ಯಾಣ ಕರ್ನಾಟಕ ಮತ್ತು ಕಿತ್ತೂರು ಕರ್ನಾಟಕದ ಜ್ವಲಂತ ಸಮಸ್ಯೆಗಳ ನಿವಾರಣೆಗೆ ಸೀಮಿತವಾಗಿರಬೇಕು.ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರವರು ಈ ಬಗ್ಗೆ ಗಂಭೀರವಾಗಿ ಪರಿಗಣಿಸಿ ನಮ್ಮ ಭಾಗದ ಜ್ವಲಂತ ಸಮಸ್ಯೆಗಳ ನಿವಾರಣೆಗೆ ವಿಶೇಷ ಬದ್ಧತೆ ಪ್ರದರ್ಶಿಸಲು ಸಮಿತಿ ಒತ್ತಾಯಿಸಿದ್ದಾರೆ.