ಕಲಬುರಗಿ: ಅಮ್ಮ, ಅವ್ವ ಎಂದು ವಿವಿಧ ಹೆಸರುಗಳಿಂದ ಕರೆಯಲ್ಪಡುವ ತಾಯಿಗೆ ಅಗಾಧವಾದ ಶಕ್ತಿ ಇದೆ. ಯಾರು ತನ್ನ ಹೆತ್ತ ತಂದೆ ತಾಯಿಗೆ ಗೌರವ ನೀಡುತ್ತಾರೋ ಅವರು ಜೀವನದಲ್ಲಿ ಯಶಸ್ಸನ್ನು ಕಾಣುತ್ತಾರೆ ಎಂದು ಮಾತೋಶ್ರೀ ಡಾ.ದಾಕ್ಷಾಯಿಣಿ. ಎಸ್. ಅವ್ವಾಜಿ ಅವರು ಆಶೀರ್ವಚನ ನೀಡಿದರು.
ಶ್ರೀ ಗುರು ಸಂಗಮೇಶ್ವರ ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆ ವತಿಯಿಂದ ನಗರದ ಹುಮನಾಬಾದ ರಿಂಗ್ ರಸ್ತೆಯ ರಾಮನಗರದಲ್ಲಿರುವ ಶ್ರೀ ಗುರು ಸಂಗಮೇಶ್ವರ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ಹಮ್ಮಿಕೊಂಡಿದ್ದ “ತಾಯಿ ತುತ್ತು ” ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಆಶೀರ್ವಚನ ನೀಡಿದರು.
ಸಂಸ್ಥೆಯು 8 ವರ್ಷಗಳಿಂದ ತಾಯಿ ತುತ್ತು ಕಾರ್ಯಕ್ರಮ ಮಾಡುತ್ತಿರುವುದು ಸಂತೋಷದ ವಿಷಯವಾಗಿದೆ. ಮುಂದಿನ ದಿನಗಳಲ್ಲಿ ಇದೇ ರೀತಿ ಸ್ಪೂರ್ತಿದಾಯಕವಾದ ಕಾರ್ಯಕ್ರಮಗಳು ಮತ್ತು ಶೈಕ್ಷಣಿಕ ಮಟ್ಟದಲ್ಲಿ ಶಿಖರದ ಎತ್ತರಕ್ಕೆ ಮುನ್ನುಗ್ಗಲಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಸದಸ್ಯ ಶಿವಜ್ಯೋತಿ ಬಿ. ಚೆಂಗಟಿ ಅಧ್ಯಕ್ಷೆ ವಹಿಸಿದ್ದರು. ಸಂಸ್ಥೆಯ ಕನ್ನಡ ಮತ್ತು ಆಂಗ್ಲ ಮಾಧ್ಯಮದ ಮುಖ್ಯೋಪಾದ್ಯಯರಾದ ಪ್ರತಿಭಾ ಆರ್ ಕಣಜಿಕರ್, ಸೌಭಾಗ್ಯ ಎಮ್. ಗೌಡಪ್ಪಗೋಳ್, ಶರಣು ವ್ಹಿ. ದಸ್ತಾಪೂರ್, ಸಂದೀಪ್ ಎಸ್. ಪಾಟೀಲ್ ಹಾಗೂ ಸಹ ಶಿಕ್ಷಕರು ಪಾಲ್ಗೊಂಡಿದ್ದರು. ಅಶ್ವಿನಿ ಆರ್. ಪವಾರ್ ಮತ್ತು ಅರ್ಪಿತಾ ಪಾಟೀಲ್ ಅವರು ನಿರೂಪಿಸಿದರು.