ಕಲಬುರಗಿ: ಜಿಲ್ಲೆಯ ಪೌರ ಸಂಸ್ಥೆಗಳಲ್ಲಿ ಖಾಯಂಯಾಗಿ ಕಾರ್ಯನಿರ್ವಹಿಸುತ್ತಿರುವ ಮನೆರಹಿತ ಪೌರಕಾರ್ಮಿಕರಿಗೆ “ಗೃಹ ಭಾಗ್ಯ” ಯೋಜನೆಯಡಿ ಮನೆ ಒದಗಿಸಲು ಕೂಡಲೇ ಒಂದು ವರದಿ ನೀಡಬೇಕು ಎಂದು ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ ಅಧಿಕಾರಿಗಳಿಗೆ ಸೂಚಿಸಿದರು.
ಗುರುವಾರ ತಮ್ಮ ಕಚೇರಿಯಲ್ಲಿ ಜಿಲ್ಲಾ ಮಟ್ಟದ ಮ್ಯಾನುವೆಲ್ ಸ್ಕ್ಯಾವೆಂಜರ್ ನೇಮಕಾತಿ ಪ್ರತಿಬಂಧಕ ಮತ್ತು ಪುನರ್ ವಸತಿ ಅಧಿನಿಯಮ-2013ರ ಅನುಷ್ಠಾನದ ಜಿಲ್ಲಾ ಮಟ್ಟದ ಜಾಗೃತ ಮತ್ತು ಮೇಲುಸ್ತುವಾರಿ ಸಮಿತಿ ಸಭೆ ನಡೆಸಿದ ಅವರು, ಕಲಬುರಗಿ ಪಾಲಿಕೆಯ ಪೌರಕಾರ್ಮಿಕರಿಗೆ ಈಗಾಗಲೆ “ಗೃಹ ಭಾಗ್ಯ” ಯೋಜನೆಯಡಿ ಮನೆ ಒದಗಿಸುವ ಪ್ರಕ್ರಯೆ ಜಾರಿಯಲ್ಲಿರುವುದರಿಂದ ಇವರನ್ನು ಹೊರತುಪಡಿಸಿ ಉಳಿದ ಸ್ಥಳೀಯ ಸಂಸ್ಥೆಗಳಲ್ಲಿರುವ ಪೌರಕಾರ್ಮಿಕರೊಂದಿಗೆ ಖುದ್ದಾಗಿ ಸಭೆ ನಡೆಸಿ ಮನೆ ಇಲ್ಲದಿರುವ ಕುರಿತು ಖಾತ್ರಿ ಮಾಡಿಕೊಂಡು ಅದರ ವಿಸ್ತøತ ವರದಿ ನೀಡಬೇಕೆಂದು ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಶರಣಬಸಪ್ಪ ಬೆಣ್ಣೂರು ಅವರಿಗೆ ನಿರ್ದೇಶನ ನೀಡಿದರು.
ಪೌರಕಾರ್ಮಿಕರಿಗೆ ಸ್ವಚ್ಛತಾ ಕೆಲಸಕ್ಕೆ ಬೇಕಾಗುವ ಗುಣಮಟ್ಟದ ಪರಿಕರಗಳನ್ನು, ಬಟ್ಟೆಗಳನ್ನು ಪೂರೈಸಬೇಕು. ಆಗಾಗ ಆರೋಗ್ಯ ತಪಾಸಣೆ ಮಾಡಿಸಬೇಕು. ಬೆಳಗಿನ ಹೊತ್ತು ಉಪಹಾರ ನೀಡಬೇಕು. ಪ್ರತಿ ಮಾಹೆ ವೇತನ ಪಾವತಿಯಾಗುವಂತೆ ನೋಡಿಕೊಳ್ಳಬೇಕು. ಇ.ಎಸ್.ಐ., ಪಿ.ಎಫ್. ಕಡಿತವಾಗುತ್ತಿರುವ ಬಗ್ಗೆ ಪೌರ ಸಂಸ್ಥೆಗಳ ಮುಖ್ಯಸ್ಥರು ನಿಗಾ ವಹಿಸಬೇಕು ಎಂದರು.
ಪ್ರತಿ ಪೌರ ಸಂಸ್ಥೆಗಳಲ್ಲಿ ಸಕ್ಕಿಂಗ್, ಜಕಿಂಗ್ ಯಂತ್ರವನ್ನು ಬಳಸಿ ಶೌಚಾಲಯ ಪಿಟ್ ಸ್ವಚ್ಛತೆಗೆ ಸಶರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು. ಮ್ಯಾನುವೆಲ್ ಸ್ಕ್ಯಾವೆಂಜರ್ ಸಮೀಕ್ಷೆ ಕುರಿತು ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗವು ಪ್ರತಿ ಸಭೆಯಲ್ಲು ಪ್ರಸ್ತಾಪ ಮಾಡುತ್ತಿರುವ ಕಾರಣ ಈ ಕುರಿತು ಅಧಿಕಾರಿಗಳು ನಿಖರ ಮಾಹಿತಿ ಸಂಗ್ರಹಿಸಬೇಕು ಎಂದರು.
ಸಭೆಯಲ್ಲಿ ಡಿ.ಸಿ.ಪಿ. ಅಡ್ಡೂರು ಶ್ರೀನಿವಾಸಲು, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಪಿ.ಶುಭ, ಸಮಿತಿ ಸದಸ್ಯರಾದ ಅನಿಲಕುಮಾರ, ಭೀಮಾಶಂಕರ ಶಂಕರರಾವ, ಸವಿತಾ ಗುಂಡಪ್ಪ, ಕಲಬುರಗಿ ಮಹಾನಗರ ಪಾಲಿಕೆಯ ಎಇಇ ಮುನಾಫ್ ಪಟೇಲ್ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.