ಪ್ರವಾಹ ಹಿನ್ನೀರಿನಿಂದ ಒಟ್ಟು 31 ಗ್ರಾಮಗಳು ಬಾಧಿತ: ಜಿಲ್ಲಾಧಿಕಾರಿ

0
103

ಕಲಬುರಗಿ: ಮಹಾರಾಷ್ಟ್ರದ ಉಜನಿ ಜಲಾಶಯ ಮತ್ತು ವೀರಾ ನದಿಯಿಂದ 2.85 ಲಕ್ಷ ಕ್ಯೂಸೆಕ್ಸ್ ನೀರು ಭೀಮಾ ನದಿಗೆ ಬಿಟ್ಟಿರುವುದರಿಂದ ಜಿಲ್ಲೆಯ ಅಫಜಲಪುರ ತಾಲೂಕಿನ 17, ಜೇವರ್ಗಿ ತಾಲೂಕಿನ 8, ಕಲಬುರಗಿ ತಾಲೂಕಿನ 5 ಹಾಗೂ ಚಿತ್ತಾಪುರ ತಾಲೂಕಿನ ಒಂದು ಗ್ರಾಮ ಸೇರಿದಂತೆ ಒಟ್ಟು 31 ಗ್ರಾಮಗಳು ಪ್ರವಾಹ ಹಿನ್ನೀರಿನಿಂದ ಬಾಧಿತವಾಗಲಿವೆ ಎಂದು ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ ಅವರು ತಿಳಿಸಿದ್ದಾರೆ.

ಭೀಮಾ ನದಿ ಪಾತ್ರದಲ್ಲಿರುವ 4 ತಾಲೂಕಿನ 31 ಗ್ರಾಮಗಳ ಗ್ರಾಮಸ್ಥರು ಎಚ್ಚರಿಕೆಯಿಂದಿರಲೂ ಮತ್ತು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಅವರು ಮನವಿ ಮಾಡಿದ್ದಾರೆ.

Contact Your\'s Advertisement; 9902492681

ಅಫಜಲಪೂರ ತಾಲೂಕಿನ ಘತ್ತರಗಾ, ಹಿಂಚಗೇರಾ, ಗೂಳನೂರ, ಕಲ್ಲೂರ, ಮಣ್ಣೂರ, ಕೂಡಿಗನೂರ, ಶಿವೂರ, ಹಿರಿಯಾಳ, ಭೋಸಗಾ, ದುದ್ದಣಗಿ, ಅಳ್ಳಗಿ(ಬಿ), ಶಿರವಾಳ, ಭಂಕಲಗಾ, ಶೇಷಗಿರಿ, ತೆಗ್ಗೆಳ್ಳಿ, ಟಾಕಳಿ ಹಾಗೂ ಬಂದರವಾಡ. ಜೇವರ್ಗಿ ತಾಲೂಕಿನ ರದ್ದೆವಾಡಗಿ, ಹೋತಿನಮಡು, ನರಿಬೋಳ, ರಾಜವಾಳ, ಅಂಕಲಗಾ, ಮಾಹೂರ, ಇಟಗಾ ಮತು ಬಳ್ಳೂಂಡಗಿ ಗ್ರಾಮಗಳು. ಚಿತ್ತಾಪುರ ತಾಲೂಕಿನ ಕಡಬೂರ ಹಾಗೂ ಕಲಬುರಗಿ ತಾಲೂಕಿನ ಹಾಗರಗುಂಡಗಿ, ಸರಡಗಿ(ಬಿ), ಫಿರೋಜಾಬಾದ, ಹಸನಾಪುರ ಹಾಗೂ ಸೋಮನಾಥಹಳ್ಳಿ ಗ್ರಾಮಗಳು ಪ್ರವಾಹಕ್ಕೀಡಾಗುವ ಸಾಧ್ಯತೆಗಳಿವೆ.

ನದಿ ಪಾತ್ರದ ಗ್ರಾಮಸ್ಥರು ಹಾಗೂ ಜಾನುವಾರುಗಳನ್ನು ರಕ್ಷಿಸಲು ಜಿಲ್ಲಾಡಳಿತದಿಂದ ಎಲ್ಲಾ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ನೈಸರ್ಗಿಕ ವಿಪತ್ತು ನಿರ್ವಹಣೆ ಉಸ್ತುವಾರಿಗಾಗಿ ಪ್ರತಿ ತಾಲೂಕಿಗೆ ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳನ್ನು ನೋಡಲ್ ಅಧಿಕಾರಿಯನ್ನಾಗಿ ನಿಯೋಜಿಸಲಾಗಿದೆ. ಸಂಬಂಧಪಟ್ಟ ಗ್ರಾಮ ಲೆಕ್ಕಾಧಿಕಾರಿ ಮತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ನದಿ ಪಾತ್ರದ ಗ್ರಾಮಗಳಲ್ಲಿ ಇದ್ದು, ರಕ್ಷಣಾ ಕಾರ್ಯದಲ್ಲಿ ಸಕ್ರೀಯರಾಗುವಂತೆ ಸೂಚನೆ ನೀಡಲಾಗಿದೆ.

ಪ್ರವಾಹದ ಭೀತಿ ಎದುರಿಸುತ್ತಿರುವ ನದಿ ಮಟ್ಟದಿಂದ ಕೆಳಗಡೆಯಿರುವ ಗ್ರಾಮದ ಗ್ರಾಮಸ್ಥರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಸೂಕ್ತ ಏರ್ಪಾಡು ಮಾಡಲಾಗಿದೆ. ಆಗ್ನಿಶಾಮಕ, ಜೆಸ್ಕಾಂ, ಪೊಲೀಸ್, ನೀರಾವರಿ ಮತ್ತು ಕಂದಾಯ ಇಲಾಖೆಗಳ ಅಧಿಕಾರಿ-ಸಿಬ್ಬಂದಿಗಳನ್ನು ೨೪ ಗಂಟೆ ಕರ್ತವ್ಯ ನಿರ್ವಹಿಸಲು ನಿರ್ದೇಶನ ನೀಡಲಾಗಿದ್ದು, ಈ ಇಲಾಖೆಗಳು ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸುತ್ತಿವೆ.

ರಕ್ಷಣಾ ಕಾರ್ಯಕ್ಕಾಗಿ ೭೫ ಲೈಫ್ ಜಾಕೇಟ್ಸ್, ೧೦೦೦ ಮೀಟರ್ ಹಗ್ಗಗಳು, ೫ ಸರ್ಚ್ ಲೈಟ್ಸ್‌ಗಳು ಹಾಗೂ ೫ ರಬ್ಬರ್ ಬೋಟ್ಸ್‌ಗಳನ್ನು ಭೀಮಾ ನದಿ ತೀರದ ಗ್ರಾಮಗಳಿಗೆ ಬಾದಿತ ಜನರಿಗೆ ಸಂರಕ್ಷಿಸುವ ಹಿನ್ನೆಲೆಯಲ್ಲಿ ಕಳುಹಿಸಿಕೊಡಲಾಗಿದೆ. ಜನರಿಗೆ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಅನುಕೂಲವಾಗುವಂತೆ ಹೈದ್ರಾಬಾದ್‌ದಿಂದ ಭಾರತೀಯ ಸೈನ್ಯದ ಸೇವೆಯನ್ನು ಪಡೆಯಲಾಗಿದ್ದು, ೧೦೦ ಸೈನಿಕರು ಮತ್ತು ೫ ಜನ ಸೇನಾಧಿಕಾರಿಗಳು ಕಲಬುರಗಿ ಆಗಮಿಸಿದ್ದು, ಸೇನಾ ತುಕಡಿಯನ್ನು ಮೂರು ತಂಡಗಳಾಗಿ ವಿಂಗಡಿಸಿ ನದಿ ಪಾತ್ರದ ಪ್ರದೇಶಕ್ಕೆ ರಕ್ಷಣಾ ಕಾರ್ಯಕ್ಕೆ ಕಳುಹಿಸಲಾಗಿದೆ. ಪ್ರವಾಹ ಹಿನ್ನೀರಿನಿಂದ ಬಾಧಿತವಾಗುವ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿ ಆಹಾರ ಪೂರೈಸಲು ಗಂಜಿ ಕೇಂದ್ರಗಳನ್ನು ತೆರೆಯಲು ಹಾಗೂ ಜಾನುವಾರುಗಳ ರಕ್ಷಣೆಗೆ ಜಾನುವಾರು ಸಂರಕ್ಷಣಾ ಕೇಂದ್ರ ತೆರೆಯಲು ಸಹ ಕ್ರಮ ವಹಿಸಲಾಗಿದೆ ಎಂದು ಡಿ.ಸಿ. ವೆಂಕಟೇಶ ಕುಮಾರ ತಿಳಿಸಿದ್ದಾರೆ.

ಪ್ರವಾಹದಿಂದ ಉಂಟಾಗಲಿರುವ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ತಜ್ಞ ವೈದ್ಯರುನ್ನೊಳಗೊಂಡಂತೆ ವೈದ್ಯ ತಂಡ ರಚಿಸಿ ಔಷಧೋಪಚಾರದೊಂದಿಗೆ ಭಾಧಿತ ಸ್ಥಳಗಳಿಗೆ ತೆರಳಲು ಸೂಚಿಸಲಾಗಿದೆ. ಪ್ರವಾಹ ನೀರಿನಿಂದ ಉಂಟಾಗಲಿರುವ ಸೊಳ್ಳೆ, ವಿಷ ಜಂತ್ತುಗಳ ನಿಯಂತ್ರಣಕ್ಕಾಗಿ ಸಾಕಷ್ಟು ಪ್ರಮಾಣದ ಫಾಗಿಂಗ್ ಮಶೀನ್ ಮತ್ತು ವಿಷ ಜಂತ್ತುಗಳ ನಿರೋಧಕ ಔಷಧಗಳನ್ನು ಪೂರೈಸಲು ಡಿಹೆಚ್‌ಓ ಅವರಿಗೆ ನಿರ್ದೇಶನ ನೀಡಿದೆ.

ಜನರು ಯಾವುದೇ ರೀತಿಯ ಭಯ ಭೀತರಾಗುವ ಅವಶ್ಯಕತೆ ಇರುವುದಿಲ್ಲ. ಯಾವುದೇ ಸಂದರ್ಭದಲ್ಲಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವ ಸೈನ್ಯ ಸದಾ ಸಿದ್ಧವಾಗಿದೆ. ಜನರು ಯಾವುದೇ ತೊಂದರೆ ಉಂಟಾದಲ್ಲಿ ತಾಲೂಕು ನಿಯಂತ್ರಣ ಕೊಠಡಿ ಹಾಗೂ ಜಿಲ್ಲಾಧಿಕಾರಿಗಳ ಕಚೇರಿ ನಿಯಂತ್ರಣ ಕೊಠಡಿಗಳಿಗೆ ಸಂಪರ್ಕಿಸಬೇಕೆಂದು ಅವರು ಮನವಿ ಮಾಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here