ಒಂದೆಡೆ ಪ್ರವಾಹ, ಇನ್ನೊಂದೆಡೆ ಬರ: ಎರಡನ್ನು ಸಮರ್ಥವಾಗಿ ಎದುರಿಸಲು ಜಾಧವ ಸೂಚನೆ

0
73

ಕಲಬುರಗಿ: ಮಹಾರಾಷ್ಟ್ರದ ಉಜನಿ ಜಲಾಶಯ ಮತ್ತು ವೀರಾ ನದಿಯಿಂದ ಅಪಾರ ಪ್ರಮಾಣದ ನೀರು ಬಿಟ್ಟಿರುವುದರಿಂದ ಜಿಲ್ಲೆಯ ೪ ತಾಲೂಕುಗಳು ಪ್ರವಾಹಕ್ಕೆ ಸಿಲುಕುವ ಸಾಧ್ಯತೆಗಳಿದ್ದರೆ, ಉಳಿದ ತಾಲೂಕಿನಲ್ಲಿ ಕುಡಿಯುವ ನೀರಿಗೆ ಬರದ ಪರಿಸ್ಥಿತಿ ಎದುರಿಸುವಂತಾಗಿದೆ. ಅಧಿಕಾರಿಗಳನ್ನು ಎರಡನ್ನು ಸಮರ್ಥವಾಗಿ ನಿಭಾಯಿಸಬೇಕಾಗಿದೆ ಎಂದು ಕಲಬುರಗಿ ಲೋಕಸಭಾ ಸದಸ್ಯ ಡಾ.ಉಮೇಶ ಜಾಧವ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅವರು ಶುಕ್ರವಾರ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪ್ರವಾಹ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದರು. ೨.೮೫ ಲಕ್ಷ ಕ್ಯೂಸೆಕ್ಸ್ ನೀರು ಭೀಮಾ ನದಿಗೆ ಬಿಟ್ಟಿರುವುದರಿಂದ ನದಿ ಪಾತ್ರದಲ್ಲಿ ಪ್ರವಾಹದ ಸ್ಥಿತಿ ಉಂಟಾಗಲಿದ್ದು, ರಕ್ಷಣಾ ಕಾರ್ಯಕ್ಕೆ ನಿಯೋಜಿಸಲಾದ ನೋಡಲ್ ಅಧಿಕಾರಿಗಳು, ತಾಲೂಕು ಮಟ್ಟದ ಅಧಿಕಾರಿಗಳು ಗ್ರಾಮದಲ್ಲಿಯೆ ಇದ್ದು ಪರಿಹಾರ ಕಾರ್ಯದ ಉಸ್ತುವಾರಿ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಜಿಲ್ಲೆಯ ಆಳಂದ ಸೇರಿದಂತೆ ಜಿಲ್ಲೆಯ ಕೆಲವು ಗ್ರಾಮಗಳಲ್ಲಿ ಇನ್ನೂ ಕುಡಿಯುವ ನೀರಿನ ಸಮಸ್ಯೆಯಿದ್ದು, ನೀರು ಪೂರೈಸುವ ಟ್ಯಾಂಕರ್ ಸ್ಥಗಿತಗೊಳಿಸಲಾಗಿದೆ ಎಂದು ಸಾರ್ವಜನಿಕರಿಂದ ದೂರು ಕೇಳಿಬರುತ್ತಿದೆ. ನೀರಿನ ಸಮಸ್ಯೆ ಇರುವ ಕಡೆ ನಿರಂತರ ಟ್ಯಾಂಕರ್ ಮೂಲಕ ನೀರು ಪೂರೈಸಬೇಕು ಎಂದರು.

Contact Your\'s Advertisement; 9902492681

ಪ್ರವಾಹಕ್ಕೆ ತುತ್ತಾಗುವ ಗ್ರಾಮಗಳಿಗೆ ರಕ್ಷಣಾ ಕಾರ್ಯಕ್ಕೆ ನಿಯೋಜನೆಗೊಂಡಿರುವ ಅಧಿಕಾರಿಗಳು ಸ್ಥಳದಲ್ಲಿದ್ದು ಪರಿಹಾರ ಕಾರ್ಯ ಕೈಗೊಳ್ಳಬೇಕು. ಸಾಂಕ್ರಾಮಿಕ ರೋಗ ತಡೆಗೆ ಅಗತ್ಯ ವೈದ್ಯಕೀಯ ತಂಡ, ಜಾನುವಾರಗಳ ರಕ್ಷಣೆಗೆ ಪಶು ಇಲಾಖೆಯಿಂದ ವ್ಯಾಕ್ಸಿನ್ ನೀಡಲು ತಂಡ ರಚಿಸಬೇಕು. ಪ್ರವಾಹದ ಸಂದರ್ಭದಲ್ಲಿ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚು ತಲೆದೋರುವ ಸಾಧ್ಯತೆ ಇರುವುದರಿಂದ ಅಧಿಕಾರಿಗಳು ಈ ನಿಟ್ಟಿನಲ್ಲಿಯೂ ಶುದ್ಧ ಕುಡಿಯುವ ನೀರು ಪೂರೈಸುವತ್ತ ಆದ್ಯತೆ ನೀಡಬೇಕು ಎಂದರು. ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳಿದ್ದರು, ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಈ ಘಟಕಗಳಿಂದ ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವುದರ ಕುರಿತು ಹೆಚ್ಚಿನ ಗಮನಹರಿಸಬೇಕು ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯನಿರ್ವಾಹಕ ಅಭಿಯಂತ ರೇವಣಸಿದ್ದಯ್ಯ ಅವರಿಗೆ ಸೂಚನೆ ನೀಡಿದರು.

ಸಭೆಯಲ್ಲಿ ಶಾಸಕರಾದ ಎಂ.ವೈ.ಪಾಟೀಲ, ಬಸವರಾಜ ಮತ್ತಿಮೂಡ, ಸುಭಾಷ್ ಗುತ್ತೇದಾರ, ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಪಿ.ರಾಜಾ, ಎಸ್.ಪಿ. ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ಸಹಾಯಕ ಆಯುಕ್ತ ರಾಹುಲ ಪಾಂಡ್ವೆ, ಕರ್ನಾಟಕ ನೀರಾವರಿ ನಿಗಮ ನಿಯಮಿತದ ಕಲಬುರಗಿ ವಲಯದ ಮುಖ್ಯ ಇಂಜಿನೀಯರ್ ಜಗನ್ನಾಥ ಹಲಿಂಗೆ, ಭೀಮಾ ಏತ ನೀರಾವರಿ ಯೋಜನೆಯ ಸೊನ್ನ ಬ್ಯಾರೇಜಿನ ಕಾರ್ಯನಿರ್ವಾಹಕ ಅಭಿಯಂತರ ಮಲ್ಲಿಕಾರ್ಜುನ ಜಾಕಾ ಸೇರಿದಂತೆ ಇನ್ನಿತರರು ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here