ಸುರಪುರ: ಸ್ಥಳೀಯ ನಗರಸಭೆ ವ್ಯಾಪ್ತಿಯ ವಣಕಿಹಾಳ ಸೀಮಾಂತರದ ಸರ್ವೆ ನಂ 186 ಹಾಗೂ ಖಾನಾಪುರ ಎಸ್.ಎಚ್.ಸೀಮಾಂತರ ವೆಂಕಟಾಪುರ ಹತ್ತಿರ ಸರ್ವೆ ನಂ 95 ಮತ್ತು 96ರಲ್ಲಿ 1997-98ರಲ್ಲಿ ನಿವೇಶನ ರಹಿತ ಫಲಾನುಭವಿಗಳಿಗೆ ಹಕ್ಕುಪತ್ರ ನೀಡಲಾಗಿದ್ದು ಕೂಡಲೇ ಈ ಎಲ್ಲಾ ಫಲಾನುಭವಿಗಳಿಗೆ ನಿವೇಶನಗಳನ್ನು ಒದಗಿಸಬೇಕು ಎಂದು ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಒತ್ತಾಯಿಸಿದ್ದಾರೆ.
ಈ ಕುರಿತು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿರುವ ಅವರು ಸರ್ವೆ ನಂ 186ರಲ್ಲಿ 180 ಹಾಗೂ ಸರ್ವೆ ನಂ 95 ಮತ್ತು 96ರಲ್ಲಿ 300 ಫಲಾನುಭವಿಗಳು ಸೇರಿದಂತೆ ಪುರಸಭೆ ವತಿಯಿಂದ ಒಟ್ಟು 480ಫಲಾನುಭವಿಗಳಿಗೆ 1997-98ರಲ್ಲಿ ಹಕ್ಕುಪತ್ರ ನೀಡಲಾಗಿತ್ತು.
ಆದರೆ ಈ ಫಲಾನುಭವಿಗಳಿಗೆ ನಿವೇಶನ ಒದಗಿಸಿಲ್ಲ ಆದರೆ ಈಗ ನಗರಸಭೆಯವರು ಇದೇ ಸರ್ವೆ ನಂಬರಗಳಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ಫಲಾನುಭವಿಗಳಿಗೆ ನಿವೇಶನಗಳ ಹಕ್ಕುಪತ್ರ ನೀಡಿ ಮನೆಗಳನ್ನು ಕಟ್ಟಲು ಹೊರಟಿರುವುದು ಸರಿಯಲ್ಲ ಕೂಡಲೇ ಈ ಹಿಂದೆ 1997-98ರಲ್ಲಿ ಹಕ್ಕುಪತ್ರ ವಿತರಿಸಿದ ಹಳೆಯ ಫಲಾನುಭವಿಗಳಿಗೆ ಮೊದಲು ನಿವೇಶನ ಒದಗಿಸಿ ನಂತರ ಉಳಿದ ಹೊಸ ಫಲಾನುಭವಿಗಳಿಗೆ ನಿವೇಶನ ನೀಡಬೇಕು.
ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿ ಒಂದು ವಾರದೊಳಗಾಗಿ ಹಿಂದೆ ಹಕ್ಕುಪತ್ರ ವಿತರಿಸಿದ ಫಲಾನುಭವಿಗಳಿಗೆ ನಿವೇಶನ ಒದಗಿಸಬೇಕು ಇಲ್ಲವಾದಲ್ಲಿ ನಗರಸಭೆ ಕಾರ್ಯಾಲಯದ ಮುಂದುಗಡೆ ನಿವೇಶನ ರಹಿತ ಫಲಾನುಭವಿಗಳೊಂದಿಗೆ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿಗಳಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.