ಶಹಾಪುರ: ಬಸವಾದಿ ಶರಣರ ತತ್ವಗಳಿಗೆ ಜಾತಿಬೇಧವಿಲ್ಲ. ಅವನ್ನು ಯಾರಾದರೂ ಪಾಲಿಸಬಹುದು. ಶರಣರ ವಿಚಾರಗಳನ್ನು ಯಾರು ಪರಿಪಾಲಿಸುತ್ತಾರೊ ಅವರು ಮನುಷ್ಯರಾಗುತ್ತಾರೆ ಎಂದು ಮಾಜಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಗುಂಡಣ್ಣ ತುಂಬಗಿ ಹೇಳಿದರು.
ನಗರದ ಶ್ರೀ.ಬಾಪುಗೌಡ ದರ್ಶನಾಪುರ ವಾಣಿಜ್ಯ ಪದವಿ ಪೂರ್ವ ಕಾಲೇಜಿನಲ್ಲಿ ಸಹಮತ ವೇದಿಕೆ ಏರ್ಪಡಿಸಿದ್ದ ಮತ್ತೆ ಕಲ್ಯಾಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಲಿಂಗಾಯತವೆಂಬುದು ಜಾತಿಯಲ್ಲ. ಅದೊಂದು ತತ್ವ, ಸಿದ್ಧಾಂತ. ವಚನಗಳನ್ನು ಅರಿತು ನಡೆದರೆ ಬಾಳೆ ಬಂಗಾರವಾಗುತ್ತದೆ. ಶಾಲೆಯ ಪಠ್ಯ ಆರ್ಥಿಕ ಶಕ್ತಿಯನ್ನು ತಂದುಕೊಂಡರೆ, ವಚನ ಸಾಹಿತ್ಯದ ಅಧ್ಯಯನ ಜೀವನದಲ್ಲಿ ಚೈತನ್ಯವನ್ನು ಮೂಡಿಸುತ್ತದೆ ಎಂದವರು ತಿಳಿಸಿದರು. ಬಸವ ಎಂಬ ಮೂರಕ್ಷರ ಬೆರಗು ಹುಟ್ಟಿಸುತ್ತವೆ. ಅಜ್ಞಾನ ಅಂಧಕಾರ ಕಗ್ಗತ್ತಲಿನಲ್ಲಿ ಸೂರ್ಯ ಹುಟ್ಟಿದಂತೆ ಹುಟ್ಟಿಬಂದವರು. ಬಡವರ ದೀನರ ದಲಿತರ ಹಾಗೂ ಮಹಿಳೆಯರ ಬಾಳಿಗೆ ಬಸವವಾದಿ ಶರಣರ ವಚನಗಳು ದಾರಿದೀಪವಾಗಿವೆ ಎಂದು ಸಹಮತ ವೇದಿಕೆಯ ವಿಚಾರವಾದಿ ವಿಶ್ವಾರಾಧ್ಯ ಸತ್ಯಂಪೇಟೆ ಅಭಿಪ್ರಾಯಪಟ್ಟರು.
ದೇವರು ಧರ್ಮ ಎಂಬ ಕರ್ಮಸಿದ್ಧಾಂತವನ್ನು ಒರೆಗಲ್ಲಿಗೆ ಹಚ್ಚಿ ಸಾಮಾನ್ಯರಲ್ಲಿ ವಚನಗಳ ಮೂಲಕ ಬೆಳಕು ಹೊತ್ತಿಸಿದ ಜ್ಯೋತಿ ಬಸವಣ್ಣನವರಾಗಿದ್ದರು. ಸರ್ವರ ಹುಟ್ಟು ಮತ್ತು ಸಾವು ಒಂದೇ ಇರುವಾಗ ನಮ್ಮ ನಮ್ಮ ನಡುವೆ ಭೇದವನ್ನು ಸೃಷ್ಟಿಸಿ ಅದರ ಫಲವನ್ನು ಯಥೇಚ್ಛವಾಗಿ ಉಣ್ಣುತ್ತಿರುವ ಪುರೋಹಿತಶಾಹಿಯ ವಿರುದ್ಧ ಗುಡುಗಿದವರು ಬಸವಣ್ಣನವರು ಎಂದು ಬಣ್ಣಿಸಿದರು. ಅತಿವೃಷ್ಟಿ – ಅನಾವೃಷ್ಟಿಯಿಂದ ಕಂಗಾಲಾದ ಸಂದರ್ಭದಲ್ಲಿ ಯಾವ ದೇವರೂ ನಮ್ಮನ್ನು ಕಾಯಲಿಲ್ಲ, ದೇವರ ದಲ್ಲಾಲಿಗಳಾದ ಪುರೋಹಿತ, ಪಾದ್ರಿ, ಮುಲ್ಲಾಗಳೂ ಸುಮ್ಮನೆ ಗಪ್ ಚುಪ್ ಕುಳಿತರ್ಯಾಕೆ ? ಎಂದು ಮಾರ್ಮಿಕವಾಗಿ ಪ್ರಶ್ನಿಸಿದರು.
ಬಸವಮಾರ್ಗ ಪ್ರತಿಷ್ಠಾನದ ಶಿವಣ್ಣ ಇಜೇರಿ ಮಾತನಾಡಿ, ಯಾರೊಬ್ಬರು ಪಾದಗಳಿಂದ, ತಲೆಯಿಂದ, ಹೊಕ್ಕುಳದಿಂದ ಹುಟ್ಟಲಿಲ್ಲ. ಎಲ್ಲರೂ ತಾಯಿಯ ಉದರದಲ್ಲಿಯೇ ಹುಟ್ಟಿದವರು. ಸನಾತವೆಂಬ ಕರ್ಮಸಿದ್ಧಾಂತ ನಮ್ಮನ್ನು ಹಾಳು ಮಾಡಿದೆ. ಕರ್ಮಠತನದಿಂದ ಹೊರಬರಬೇಕಾದರೆ ವಚನ ಸಾಹಿತ್ಯವೇ ಮದ್ದು ಎಂದು ಒತ್ತಿ ಹೇಳಿದರು. ಮತ್ತೆ ಕಲ್ಯಾಣವೆಂದರೆ, ಬಸವಕಲ್ಯಾಣಕ್ಕೆ ಹೋಗುವುದಲ್ಲ. ನಮ್ಮ ನಮ್ಮ ಕಲ್ಯಾಣ ನಮ್ಮಿಂದ ಮಾತ್ರ ಸಾಧ್ಯ ಎಂದು ಅರಿತುಕೊಳ್ಳುವುದು. ನಮ್ಮೊಳಗೆ ಮಹಾಘನವಾದ ತತ್ವವೇ ಇದೆ ಇದನ್ನು ಬಗೆದುನೋಡುವ ಅವಶ್ಯಕತೆ ಎಂದಿಗಿಂತಲು ಇಂದು ಹೆಚ್ಚಾಗಿದೆ ಎಂದವರು ವಿದ್ಯಾರ್ಥಿಗಳಿಗೆ ತಿಳಿಸಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಎಂ.ಪಿ.ಸಾಸನೂರ ಮಾತನಾಡಿ ಪ್ರಾದೇಶಿಕ ಕಾಣವಾಗಿ ಭಾರತದಲ್ಲಿ ವಾಸಿಸುವ ನಾವೆಲ್ಲರೂ ಹಿಂದುಗಳೆ. ಹಿಂದು ಎಂಬುದು ಒಂದು ಧರ್ಮ ಅಲ್ಲವೇ ಅಲ್ಲ. ಅದೊಂದು ಜೀವನ ವಿಧಾನ. ಕಂದಾಚಾರ ಮೌಢ್ಯಗಳ ಹುದುಲಲ್ಲಿ ಸಿಕ್ಕು ಹೋಗಿರುವ ಭಾರತದ ಬಿಡುಗಡೆ ಮಾಡಲು ಯುವಕರಿಂದ ಮಾತ್ರ ಸಾಧ್ಯ ಎಂದು ಅಭಿಪ್ರಾಯ ಪಟ್ಟರು. ಪೂಜೆಯಿಂದ, ಪ್ರಾರ್ಥನೆಯಿಂದ, ಕಾಯಿ, ಕರ್ಪೂರ, ನೈವೇಧ್ಯ ಕೊಡುವುದರಿಂದ ದೇವರು ವರ ಕೊಡುತ್ತಾನೆ ಎಂಬುದು ನಮ್ಮ ಭ್ರಮೆ. ನಮ್ಮ ಬಡತನ ಸಿರಿತನಕ್ಕೆ ಕಾರಣ ದೇಶದ ಸಾಮಾಜಿಕ ವ್ಯವಸ್ಥೆಯೆ ಹೊರತು ದೇವರು ಕಾರಣ ಅಲ್ಲವೇ ಅಲ್ಲ ಎಂದು ಸ್ಪಷ್ಟಪಡಿಸಿದರು.
ಕು.ರೇಣುಕಾ ವಚನ ಪ್ರಾರ್ಥನೆ ಮಾಡಿದರು. ಚಂದಪ್ಪ ಸರ್ ಸ್ವಾಗತಿಸಿದರು. ಶಿವತೇಜ ಕಾರ್ಯಕ್ರಮ ನಿರ್ವಹಿಸಿದರು. ಕೊನೆಗೆ ಸಂಗಣ್ಣ ದಿಗ್ಗಿ ವಂದನಾರ್ಪಣೆ ಮಾಡಿದರು.