ಸುರಪುರ: 1857ರ ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಸೇನಾನಿ ನಾಲ್ವಡಿ ರಾಜಾ ವೆಂಕಟಪ್ಪ ನಾಯಕರವರ ಕಂಚಿನ ಮೂರ್ತಿ ನಿರ್ಮಾಣದ ಅಡಿಗಲ್ಲು ಕಾರ್ಯಕ್ರಮಕ್ಕೆ ನಮ್ಮ ಸಗರ ನಾಡಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಆಗಮಿಸುತ್ತಿರುವುದು ಸಂತಸದ ಸಂಗತಿಯಾಗಿದ್ದು ಸಂಸ್ಥಾನದ ವತಿಯಿಂದ ಅವರನ್ನು ಹಾರ್ದಿಕವಾಗಿ ಸ್ವಾಗತಿಸುವುದಾಗಿ ಅರಸು ವಂಶಸ್ಥ ಡಾ:ರಾಜಾ ಕೃಷ್ಣಪ್ಪ ನಾಯಕ ಹೇಳಿದರು.
ನಗರದ ದರಬಾರ ಹಾಲ್‍ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ,ನಾರಾಯಣಪೂರ ಜಲಾಶಯದ ಕಾಲುವೆಗಳ ಸ್ಕ್ವಾಡಾ ಗೇಟ್ ಲೋಕಾರ್ಪಣೆ, ಅಮೃತ ಜಲಾಧಾರೆ ಹಾಗೂ ಜಲಜೀವನ ಮಿಷನ್ ಯೋಜನೆ ಅಡಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆಗಾಗಿ ಆಗಮಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ.
ಇಂದು ಸ್ಕಾಡಾ ಗೇಟ್‍ಗಳ ಉದ್ಘಾಟನೆಗೆ ಆಗಮಿಸುತ್ತಿರುವ ನಾರಾಯಣಪುರ ಜಲಾಶಯಕ್ಕೆ ಕ್ರಿ.ಶ. 1715 ರಲ್ಲಿ ರಾಜಾ ಪೀತಾಂಬರಿ ಬಹರಿ ಪಿಡ್ಡನಾಯಕ ಅವರ ಆಡಳಿತಾವಧಿಯಲ್ಲಿ ಶಂಕುಸ್ಥಾಪನೆ ಮಾಡಲಾಗಿತ್ತು ಆದರೆ ರಾಜಕೀಯ ಕಾರಣಾಂತರಗಳಿಂದ ನಿರ್ಮಾಣ ಕಾರ್ಯವು ವಿಳಂಬವಾಯಿತು. ನಂತರ 1964 ರಲ್ಲಿ ಅಂದಿನ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರೀ ಅವರು ನಾರಾಯಣಪುರ ಜಲಾಶಯಕ್ಕೆ ಅಡಿಗಲ್ಲು ನೆರವೇರಿಸಿದ ಸಮಾರಂಭದಲ್ಲಿ ಕ್ಷೇತ್ರದ ಅಂದಿನ ಶಾಸಕರಾಗಿದ್ದ ನಮ್ಮ ತಾತಾನವರಾದ ರಾಜಾ ಪಿಡ್ಡ ನಾಯಕ ಅಧ್ಯಕ್ಷತೆ ವಹಿಸಿದ್ದರು.
ಸುಮಾರು 12 ವರ್ಷ ಜಲಾಶಯ ನಿರ್ಮಾಣ ಕಾಮಗಾರಿ ನಡೆದು ಪೂರ್ಣಗೊಳ್ಳುವವರೆಗೆ ಅವರೇ ಶಾಸಕರಾಗಿದ್ದದ್ದು ಹೆಮ್ಮೆಯ ವಿಷಯ ಎಂದ ಅವರು, ಸುಮಾರು 300ವರ್ಷಗಳ ಹಿಂದೆಯೇ ಸುರಪುರ ಸಂಸ್ಥಾನದ ಅರಸರ ಆಳ್ವಿಕೆಯಲ್ಲಿ ಜಲಾಶಯ ನಿರ್ಮಾಣದ ಯೋಜನೆಯ ರೂಪುರೇಷೆಗಳು ಪ್ರಾರಂಭಗೊಂಡಿದ್ದು ಸ್ವಾತಂತ್ರ್ಯ ನಂತರ ಸಂಸ್ಥಾನದ ವಂಶಸ್ಥರು ಶಾಸಕರಾಗಿದ್ದಾಗ ನಿರ್ಮಾಣ ಕೆಲಸ ಆರಂಭಗೊಂಡು ನಂತರ ಯೋಜನೆ ಪೂರ್ಣಗೊಂಡಿತು. ಈ ಡ್ಯಾಂ ನಿರ್ಮಾಣದಿಂದ ಸಗರನಾಡಿಗೆ ನೀರಾವರಿ ಭಾಗ್ಯ ದೊರೆಯಿತು ಎಂದು ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿರವರ ಅಮೃತಹಸ್ತದಿಂದ ನಾರಾಯಣಪೂರ ಜಲಾಶಯದ ಮುಂದುಗಡೆ ಸ್ವಾತಂತ್ರ್ಯ ಸೇನಾನಿ ನಾಲ್ವಡಿ ರಾಜಾ ವೆಂಕಟಪ್ಪ ನಾಯಕರ ಅಶ್ವಾರೂಢ ಪ್ರತಿಮೆಗೆ ಶಂಕುಸ್ಥಾಪನೆಯನ್ನು ನೆರವೇರಿಸುತ್ತಿರುವುದು ಸಗರನಾಡಿನ ಸೌಭಾಗ್ಯ ಎಂದು ಹರ್ಷ ವ್ಯಕ್ತಪಡಿಸಿದರು.ಅಲ್ಲದೆ ಪ್ರಧಾನ ಮಂತ್ರಿಗಳನ್ನು ಕರೆದುಕೊಂಡು ಬರುತ್ತಿರುವ ಶಾಸಕರಾದ ರಾಜುಗೌಡ ಅವರಿಗೆ ಅಭಿನಂಧನೆ ಸಲ್ಲಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ರಾಜಾ ಲಕ್ಷ್ಮೀನಾರಾಯಣ ನಾಯಕ, ವಿಜಯ ರಾಘವನ್, ಶ್ರೀಹರಿರಾವ ಆದೋನಿ, ಶಿವಕುಮಾರ ಮಸ್ಕಿ, ಜಾವೇದ ಹುಸೇನ್ ಇದ್ದರು.