ಕಲಬುರಗಿ: ಮದ್ಯ ಸೇವನೆಯಿಂದ ವ್ಯಕ್ತಿಯ ಆರೋಗ್ಯದ ಜೊತೆಗೆ ಕುಟುಂಬ ಹಾಗೂ ಸಮಾಜದ ಆರೋಗ್ಯ ಹಾಳಾಗುತ್ತದೆ ಎಂದು ಪತ್ರಕರ್ತ-ಲೇಖಕ ಡಾ. ಶಿವರಂಜನ ಸತ್ಯಂಪೇಟೆ ಅಭಿಪ್ರಾಯಪಟ್ಟರು.
ತಾಲೂಕಿನ ಮಹಾಗಾಂವ ಕ್ರಾಸ್ ಬಳಿ ಇರುವ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಯುವ ಜಾಗೃತಿ ಪರಿಷತ್ ಬೆಂಗಳೂರು ಹಾಗೂ ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ವತಿಯಿಂದ ಹಮ್ಮಿಕೊಂಡ ಮಧ್ಯಪಾನ ದುಶ್ಚಟ ಕುರಿತು ಅರಿವು ಮೂಡಿಸುವ ಅಭಿಯಾನ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಮಾತನಾಡಿದ ಅವರು, ಹೆಂಡ ಸಾರಾಯಿ ಸಹವಾಸ ಹೆಂಡತಿ-ಮಕ್ಕಳ ಉಪವಾಸ ಎನ್ನುವಂತೆ ಕುಡಿತಕ್ಕೆ ಅಂಟಿಕೊಂಡವರನ್ನು ವ್ಯಸನಮುಕ್ತಗೊಳಿಸುವುದಕ್ಕಿಂತ ಯುವಕರಿಗೆ ಕುಡಿತದ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುವುದು ಅಗತ್ಯವಿದೆ ಎಂದು ತಿಳಿಸಿದರು.
ವಿಶ್ವ ಆರೋಗ್ಯ ಸಂಸ್ಥೆ ಇತ್ತೀಚಿನ ವರದಿ ಪ್ರಕಾರ ಮದ್ಯಪಾನ ವ್ಯಸನದಿಂದಾಗಿ 200ಕ್ಕೂ ಹೆಚ್ಚಿನ ಕಾಯಿಲೆಗಳು ಬರುವ ಸಾಧ್ಯತೆಗಳಿದ್ದು, ಪ್ರಪಂಚದಾದ್ಯಂತೊಟ್ಟು ಶೇ. 3.2 ರಷ್ಟು ಸಾವುಗಳು ಪ್ರತಿವರ್ಷ ಮದ್ಯಪಾನದಿಂದ ಆಗುತ್ತಿವೆ. ಕುಡಿತ ಮನುಷ್ಯನನ್ನು ಮತ್ತಷ್ಟು ಬಲಹೀನವನ್ನಾಗಿಸುತ್ತದೆ. ಕುಡಿತದಿಂದ ದೂರವಿದ್ದರೆ ಸ್ವಾಸ್ಥ್ಯ ಹಾಗೂ ಸದೃಢ ಸಮಾಜ ನಿರ್ಮಿಸಲು ಸಾಧ್ಯ ಎಂದು ಹೇಳಿದರು.
ಯುವಬಲ ಜಾಗೃತಿ ಪರಿಷತ್ ಅಧ್ಯಕ್ಷೆ ಪ್ರಾಚಿ ಗೌಡ ಮಾತನಾಡಿ, ನೈಂಟಿ ಹೊಡೆದರೆ ಜೀವನದಲ್ಲಿ ಪಲ್ಟಿ ಹೊಡೆಯುವುದು ಗ್ಯಾರಂಟಿ. ಕುಡಿತ, ಸಿಗರೇಟ್, ಚರಸ್, ಹೆರಾಯಿನ್, ಗಾಂಜಾ ಮುಂತಾದ ಕೆಟ್ಟ ಚಟಗಲೀಮದ ಯುವಕರು ದೂರವಿದ್ದರೆ ಮಾತ್ರ ಗುರಿ ಸಾಧನೆ ಸಾಧ್ಯ ಎಂದರು.
ಪ್ರೊ.ಬಸವರಾಜ ಕೊಂಬಿನ್ ಅಧ್ಯಕ್ಷತೆ ವಹಿಸಿದ್ದರು. ಕಸಾಪ ತಾಲೂಕು ಅಧ್ಯಕ್ಷ ಸುರೇಶ ಲೇಂಗಟಿ, ಡಾ. ಅಣ್ಣಾರಾಯ ಪಾಟೀಲ, ಶ್ರೀಕಾಂತ ಪಾಟೀಲ, ಸುಜಾತಾ ದೊಡ್ಡಮನಿ, ರೇಣುಕಾ ಜಿತ್ರಿ, ಡಾ. ವಿಠಲರಾವ ಮುಕರಂಬಾ, ಶಿವಕುಮಾರ, ಭಾರತಿ ಭೂಸಾರೆ, ಡಾ.ಶರಣಪ್ಪ ಚಕ್ರವರ್ತಿ, ಡಾ.ಶಾಂತಕುಮಾರ ಸಲಗರ, ಚಂದ್ರಕಾಂತ ಇದ್ದರು.
ಶಿವಕುಮಾರ ಸ್ವಾಗತಿಸಿದರು. ಶ್ರೀಕಾಂತ ನಿರೂಪಿಸಿದರು, ಡಾ. ಶಾಮಲಾ ಸ್ವಾಮಿ ವಂದಿಸಿದರು. ಇದಕ್ಕೂ ಮುನ್ನ ಸರ್ಕಾರಿ ಪದವಿಪೂರ್ವ ಕಾಲೇಜು ಹಾಗೂ ಮಹಾಂತೇಶ್ವರ ಪ್ರೌಢಶಾಲೆಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಜಯಶ್ರೀ ಪಾಟೀಲ, ರೇವಣಸಿದ್ದಪ್ಪ ನಿಂಬಾಜಿ ಇತರರಿದ್ದರು.