ನೇತಾಜಿ ಕನಸಿಗೆ ವಿರುದ್ಧವಾಗಿದೆ ಭಾರತದ ಆಡಳಿತ; ಸುಭಾಶ್ಚಂದ್ರ ಬೋಸ್ ಭಾವಚಿತ್ರ ಮೆರವಣಿಗೆ

0
7

ವಾಡಿ: ಸ್ವಾತಂತ್ರ್ಯ ಭಾರತದ ಸರ್ಕಾರಗಳು ನೇತಾಜಿ ಸುಭಾಶ್ಚಂದ್ರ ಬೋಸ್ ಅವರ ಕನಸ್ಸಿಗೆ ವಿರುದ್ಧವಾದ ಆಡಳಿತ ನೀಡುತ್ತ ಶೋಷಣೆ, ಬಡತನ, ಭ್ರಷ್ಟಾಚಾರ, ಅಸಮಾನತೆಯನ್ನು ಪೋಷಿಸಿಕೊಂಡು ಬಂದಿವೆ ಎಂದು ಆಲ್ ಇಂಡಿಯಾ ಡೆಮಾಕ್ರೇಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ (ಎಐಡಿಎಸ್‍ಒ) ಜಿಲ್ಲಾಧ್ಯಕ್ಷ ಹಣಮಂತ ಎಸ್.ಎಚ್ ಹೇಳಿದರು.

ಪಟ್ಟಣದಲ್ಲಿ ಸೋಮವಾರ ಎಐಡಿಎಸ್‍ಒ, ಎಐಡಿವೈಒ ಹಾಗೂ ಎಐಎಂಎಸ್‍ಎಸ್ ಸಂಘಟನೆಗಳ ವತಿಯಿಂದ ಏರ್ಪಡಿಸಲಾಗಿದ್ದ ನೇತಾಜಿ ಸುಭಾಶ್ಚಂದ್ರ ಬೋಸ್ ಅವರ 126ನೇ ಜಯಂತಿ ನಿಮಿತ್ತದ ವಿದ್ಯಾರ್ಥಿಗಳ ಪ್ರಭಾತ್ ಪೇರಿ ಉದ್ಘಾಟಿಸಿ ಅವರು ಮಾತನಾಡಿದರು.

Contact Your\'s Advertisement; 9902492681

ಬ್ರಿಟೀಷರ ಗುಲಾಮಿ ಆಡಳಿತದಿಂದ ಮುಕ್ತವಾದ ಬಳಿಕ ಭಾರತದಲ್ಲಿನ ಎಲ್ಲಾ ಅನಿಷ್ಟಗಳು ತೊಲಗಬೇಕು. ಪ್ರತಿಯೊಬ್ಬರಿಗೂ ಶಿಕ್ಷಣ ಮತ್ತು ಉದ್ಯೋಗ ಸಿಗಬೇಕು. ಜಾತಿ, ಧರ್ಮಗಳ ಅಸಮಾನತೆ ನಾಶವಾಗಬೇಕು. ಮಾನವೀಯ ಮೌಲ್ಯಗಳಿಂದ ಕೂಡಿದ ವೈಚಾರಿಕ ಸಮಾಜ ನಿರ್ಮಾಣವಾಗಬೇಕು ಎಂಬುದು ಕ್ರಾಂತಿಕಾರಿ ನೇತಾರ ನೇತಾಜಿಯವರ ಅದಮ್ಯ ಕನಸ್ಸಾಗಿತ್ತು. ದುರಂತವೆಂದರೆ ರಾಜಕೀಯ ಪಕ್ಷಗಳು ಕ್ರಾಂತಿಕಾರಿಗಳ ಚಿಂತನೆಗಳನ್ನು ಸಂಪೂರ್ಣ ಕಡೆಗಣಿಸಿ ಕೋಮುವಾದಿ ರಾಜಕಾರಣ ಮಾಡುತ್ತ ಜನರ ಒಗ್ಗಟ್ಟನ್ನು ಒಡೆದು ಹಾಕುವಲ್ಲಿ ನಿರತವಾಗಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಎಐಡಿವೈಒ ಉಪಾಧ್ಯಕ್ಷ ರಾಜು ಒಡೆಯರಾಜ ಪ್ರಾಸ್ತಾವಿಕ ಮಾತನಾಡಿ, ದೇಶದಲ್ಲಿ ರಾಜಕೀಯ ವ್ಯವಸ್ಥೆ ಹದಗೆಟ್ಟಿದ್ದರಿಂದ ಜನವಿರೋಧಿ ಕಾನೂನುಗಳು ಜಾರಿಯಾಗುತ್ತಿವೆ. ಉದ್ಯೋಗವಿಲ್ಲದೆ ಯುವಜನರು ಕಂಗಾಲಾಗಿದ್ದಾರೆ. ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣಗಳು ಸಾಮಾನ್ಯವಾಗಿವೆ. ರೈತರು ಸಂಕಷ್ಟದಲ್ಲಿದ್ದಾರೆ, ವಿದ್ಯಾರ್ಥಿಗಳು ವೈಜ್ಞಾನಿಕ, ಧರ್ಮ ನಿರಪೇಕ್ಷ, ಪ್ರಜಾಸತ್ತಾತ್ಮಕ ಶಿಕ್ಷಣದಿಂದ ವಂಚಿತರಾಗಿದ್ದಾರೆ. ಕಾರ್ಮಿಕರ ಹಕ್ಕುಗಳ ಹರಣವಾಗಿದೆ. ಇಡೀ ವ್ಯವಸ್ಥೆ ಭ್ರಷ್ಟಾಚಾರದಿಂದ ನಲುಗುತ್ತಿದೆ. ಪರಿಣಾಮ ವಿದ್ಯಾರ್ಥಿ ಯುವಜನರು ನೇತಾಜಿ ಕನಸಿನ ಭಾರತ ನಿರ್ಮಾಣಕ್ಕಾಗಿ ಹೋರಾಟಕ್ಕಿಳಿಯಬೇಕು ಎಂದರು.

ನಿಜಾಮ ಸರ್ಕಾರದಲ್ಲಿ ಶಿಕ್ಷಕ ಸೇವೆ ಸಲ್ಲಿಸಿದ್ದ, ನಿವೃತ್ತ ಹಿರಿಯ ಶಿಕ್ಷಕ ಭೀಮಸೇನರಾವ ಕುಲಕರ್ಣಿ ನೇತಾಜಿ ಭಾವಚಿತ್ರಕ್ಕೆ ಪುಷ್ಪಮಾಲೆ ಅರ್ಪಿಸಿದರು. ಸಿಆರ್‍ಪಿ ಸೂರ್ಯಕಾಂತ ದಿಗ್ಗಾಂವ, ಎಂಪಿಎಚ್‍ಎಸ್ ಶಾಲೆಯ ಮುಖ್ಯಶಿಕ್ಷಕ ಭಗವಾನ ದಂಡಗುಲಕರ, ಎಐಡಿಎಸ್‍ಒ ಅಧ್ಯಕ್ಷ ವೆಂಕಟೇಶ ದೇವದುರ್ಗ, ಎಐಡಿವೈಒ ಅಧ್ಯಕ್ಷ ಗೌತಮ ಪರತೂರಕರ, ಮುಖಂಡರಾದ ಶಿವುಕುಮಾರ ಆಂದೋಲಾ, ಗೋದಾವರಿ ಕಾಂಬಳೆ, ಶರಣಮ್ಮ ಕುಂಬಾರ, ಸುರೇಖಾ, ಜಯಶ್ರೀ ರಾಠೋಡ, ಅರ್ಪಿತಾ ಆರ್.ಕೆ, ಗುಂಡಣ್ಣ ಕುಂಬಾರ, ಮಲ್ಲಣ್ಣ ದಂಡಬಾ, ವಿಠ್ಠಲ್ ರಾಠೋಡ, ಶರಣು ಹೇರೂರ, ದತ್ತು ಹುಡೇಕರ, ಮಲ್ಲಿಕಾರ್ಜುನ ಗಂದಿ, ಶರಣುಕುಮಾರ ದೋಶೆಟ್ಟಿ, ಸಿದ್ದು ಮದ್ರಿ, ದೈಹಿಕ ಶಿಕ್ಷಕರಾದ ವೀರಣ್ಣಗೌಡ, ಸುನೀಲ ಅಲ್ಲಿಪೇಟ, ಲಿಂಬಾ ರಾಠೋಡ, ಪ್ರಕಾಶ, ವಿಶ್ವರಾಧ್ಯ ಗುತ್ತೇದಾರ ಪಾಲ್ಗೊಂಡಿದ್ದರು. ಎಐಎಂಎಸ್‍ಎಸ್ ಸಂಚಾಲಕಿ ಜಯಶ್ರೀ ಎಸ್.ಕೆ ನಿರೂಪಿಸಿದರು. ಇದಕ್ಕೂ ಮೊದಲು ಅಂಬೇಡ್ಕರ್ ವೃತ್ತದಿಂದ ನೇತಾಜಿ ಭಾವಚಿತ್ರ ಮೆರವಣಿಗೆ ನಡೆಯಿತು. ವಿದ್ಯಾರ್ಥಿಗಳ ಪಥಸಂಚಲನ ಹಾಗೂ ಜಯಘೋಷಗಳು ಸಾರ್ವಜನಿಕರ ಗಮನ ಸೆಳೆಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here