ಕಲಬುರಗಿ: ಈಗಾಗಲೇ 2012 ರಂದು ಯಾದಗಿರಿ ತಾಲ್ಲೂಕಿನಲ್ಲಿ ಸುವರ್ಣ ಕರ್ನಾಟಕ ಕಾರಿಡಾರ್ ಯೋಜನೆ ಅಡಿ ಕೈಗಾರಿಕೆ ಸ್ಥಾಪಿಸುವುದಕ್ಕಾಗಿ 3,232. 22 ಎಕರೆ ಜಮೀನನ್ನು ರೈತರಿಂದ ವಶಪಡಿಸಿಕೊಳ್ಳಗಿದೆ. ಸರ್ಕಾರ ಈಗ ಮತ್ತೊಮ್ಮೆ 3,269. 29 ಎಕರೆಯಷ್ಟು ರೈತರ ಭೂಮಿಯನ್ನು ವಶಪಡಿಸಿಕೊಳ್ಳುವ ಆದೇಶವನ್ನು ಹೊರಡಿಸಿದೆ. ಇದು ಅತ್ಯಂತ ಖೇದನೀಯ. ಇಂತಹ ಅರ್ಥರಹಿತ ಆದೇಶವನ್ನ ಸರ್ಕಾರ ಈ ಕೂಡಲೇ ರದ್ದುಪಡಿಸಬೇಕು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರಾದ ಮುರುಗೇಶ್ ನಿರಾಣಿ ಅವರಿಗೆ ಪತ್ರ ಬರೆಯುವ ಮೂಲಕ ಶಾಸಕ ಪ್ರಿಯಾಂಕ್ ಖರ್ಗೆ ಆಗ್ರಹಿಸಿದ್ದಾರೆ.
ಯಾದಗಿರಿ ಜಿಲ್ಲೆಯ ಯಾದಗಿರಿ ತಾಲ್ಲೂಕಿನ ಕಡೇಚೂರು ಗ್ರಾಮ ಮತ್ತು ಬಾಡಿಯಾಳ ಗ್ರಾಮಗಳಲ್ಲಿ, ಒಟ್ಟು 3,232. 22 ಎಕರೆ ಜಮೀನನ್ನು ಸುವರ್ಣ ಕರ್ನಾಟಕ ಕಾರಿಡಾರ್ ಯೋಜನೆ ಅಡಿ ಕೈಗಾರಿಕೆ ಅಭಿವೃದ್ಧಿಗಾಗಿ 2012 ರಂದು ಸಾವಿರಾರು ರೈತ ಕುಟುಂಬಗಳಿಂದ ಜಮೀನು ವಶಪಡಿಸಿಕೊಳ್ಳಲಾಗಿದೆ. ಈ ಜಮೀನಿನಲ್ಲಿ ಕೈಗಾರಿಕೋದ್ಯಮಗಳು ಪ್ರಾರಂಭವಾಗಿ ರಾಜ್ಯ ಮತ್ತು ದೇಶದ ಅಭಿವೃದ್ಧಿಗೆ ಸಹಾಯವಾಗುತ್ತದೆ ಎಂಬುವ ಉದ್ದೇಶದಿಂದ ತಾವು ಬೆಳೆ ಬೆಳೆಯುತ್ತಿದ್ದ ಜಮೀನನ್ನು ಎಕರೆಗೆ 06 ಲಕ್ಷ ಪರಿಹಾರ ಮತ್ತು ಜಮೀನು ಕಳೆದುಕೊಂಡ ರೈತರ ಕುಟುಂಬದ ಒಬ್ಬರಿಗೆ ಉದ್ಯೋಗ ನೀಡುತ್ತೇವೆ ಎಂಬ ಸರ್ಕಾರದ ಭರವಸೆಯೊಂದಿಗೆ ವಲ್ಲದ ಮನಸ್ಸಿನಿಂದ ರೈತರು ತಮ್ಮ ಜಮೀನನ್ನು ಸರ್ಕಾರಕ್ಕೆ ಹಸ್ತಾಂತರ ಮಾಡಿದರು. ಆದರೆ ಪುನಃ ದಿನಾಂಕ 08/09/2021 ರಂದು ಸರ್ಕಾರವು ಯಾದಗಿರಿ ತಾಲ್ಲೂಕಿನ, ಕಡೇಚೂರು, ಶೆಟ್ಟಹಳ್ಳಿ, ರಾಚನಹಳ್ಳಿ, ಹಾಗೂ ದದ್ದಲ ಗ್ರಾಮಗಳಲ್ಲಿ ಒಟ್ಟು 3,269. 29 ಎಕರೆ ಭೂಮಿಯನ್ನು ವಶಪಡಿಸಿಕೊಳ್ಳಲು ಅಧಿಸೂಚನೆ ಹೊರಡಿಸಿದೆ. ಇದರಿಂದ ಮತ್ತೆ ಸಾವಿರಾರು ರೈತ ಕುಟುಂಬಗಳು ಬೀದಿಗೆ ಬರುತ್ತವೆ.
ಆದರೆ ಈ ಹಿಂದೆ 2012ರಲ್ಲಿ ಕೈಗಾರಿಕ ಉದ್ದೇಶಕ್ಕೆ ವಶಪಡಿಸಿಕೊಂಡು ಜಮೀನಿನಲ್ಲಿ ಕೇವಲ 25% ರಷ್ಟು ಮಾತ್ರ ಕೈಗಾರಿಕೋದ್ಯಮಗಳು ಪ್ರಾರಂಭವಾಗಿದ್ದು, 10 ವರ್ಷ ಕಳೆದರು ಕೂಡ 75% ಜಾಗದಲ್ಲಿ ಯಾವುದೇ ಕೈಗಾರಿಕೋದ್ಯಮಗಳು ಪ್ರಾರಂಭವಾಗಿರುವುದಿಲ್ಲ. ಅಲ್ಲದೇ ವಶಪಡಿಸಿಕೊಂಡ ಜಮೀನಿನ ಹಲವಾರು ರೈತರಿಗೆ ಇಲ್ಲಿಯವರೆಗೂ ಪರಿಹಾರ ಕೂಡ ನೀಡಿರುವುದಿಲ್ಲ ಹಾಗೂ ಜಮೀನು ಕಳೆದುಕೊಂಡ ರೈತರ ಕುಟುಂಬದಲ್ಲಿ ಒಬ್ಬರಿಗೆ ಉದ್ಯೋಗ ನೀಡುತ್ತೇವೆ ಎಂಬ ಸರ್ಕಾರದ ಭರವಸೆ ಭರವಸೆಯಾಗೆ ಉಳಿದಿದೆ. ಇದುವರೆಗೂ ಒಬ್ಬರಿಗೂ ಉದ್ಯೋಗ ನೀಡಿರುವುದಿಲ್ಲಾ.
ಮುಂದುವರೆದು 2012ರಲ್ಲಿ ವಶಪಡಿಸಿಕೊಂಡ ಜಮೀನಿನಲ್ಲಿ ಪ್ರಾರಂಭವಾಗಿರುವ ಕೈಗಾರಿಕೋದ್ಯಮಗಳು ಹೆಚ್ಚಿನವು ಮೆಡಿಸನ್ ಕಂಪನಿಗಳಾಗಿದ್ದು, ಈ ಕಂಪನಿಗಳು ಬೇರೆ ಬೇರೆ ಕಡೆಯಿಂದ ಘನ ತ್ಯಾಜ್ಯ ವಸ್ತುಗಳನ್ನು ತಂದು – ಕಡೇಚೂರು ಕೈಗಾರಿಕಾ ಪ್ರದೇಶದಲ್ಲಿ ಹಾಕುತ್ತಿವೆ. ಇದರಿಂದ ಕಡೇಚೂರು, ಬಾಡಿಯಾಳ, ಶೆಟ್ಟಹಳ್ಳಿ, ರಾಚೇನಹಳ್ಳಿ, ದದ್ದಲ್ , ಸೌರಾಷ್ಟ್ರ ಹಳ್ಳಿ, ಬಾಲಚೇಡ, ಚಂದಾಪುರ, ಮಾವಿನಹಳ್ಳಿ, ಬೊಮ್ಮರಾವದೊಡ್ಡಿ, ಸೇರಿದಂತೆ ಸುಮಾರು 07 ರಿಂದ 6.ಕೀ.ಮೀ ವ್ಯಾಪ್ತಿಯ ಆರೋಗ್ಯಕ್ಕೆ ಹಾನಿಕರವಾದ ಕೆಟ್ಟ ವಾಸನೆಯು ಬರುತ್ತಿದ್ದು, ಜನರು, ಪ್ರಾಣಿ-ಪಕ್ಷಿಗಳು ಕುಡಿಯಲು ಶುದ್ಧವಾದ ನೀರು ಸಿಗುತ್ತಿಲ್ಲ, ಇದರಿಂದ ಅವರು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಆದ್ದರಿಂದ ಈ ಮೇಲ್ದಂಡ ಎಲ್ಲಾ ಅಂಶಗಳನ್ನು ಸರ್ಕಾರವು ಗಂಭೀರವಾಗಿ ಪರಿಗಣಿಸಿ 2012 ರಲ್ಲಿ ವಶಪಡಿಸಿಕೊಂಡ ಜಾಗದಲ್ಲಿ, ಮೆಡಿಸನ್ ಕಂಪನಿಗಳು ಘನತ್ಯಾಜ್ಯವನ್ನು ಸುರಿಯುತ್ತಿರುವುದನ್ನು ತಕ್ಷಣವೇ ನಿಲ್ಲಿಸಿ, 2021ರಲ್ಲಿ ರೈತರ ಜಮೀನನ್ನು ವಶಪಡಿಸಿಕೊಳ್ಳಲು ಹೊರಡಿಸಿರುವ ಆದೇಶವನ್ನು ತಕ್ಷಣವೇ ರದ್ದುಪಡಿಸಬೇಕೆಂದು ಈ ಪತ್ರದ ಮೂಲಕ ಅವರು ಒತ್ತಾಯಿಸಿದ್ದಾರೆ.
ಬಿಜೆಪಿ ಸರ್ಕಾರ ನೂತನವಾಗಿ ಜಾಗವನ್ನು ವಶಪಡಿಸಿಕೊಳ್ಳಲು ಮುಂದಾಗುವ ಬದಲು ಈಗಾಗಲೇ ಸರ್ಕಾರದ ಅಧೀನದಲ್ಲಿ ಇರುವ ಜಾಗವನ್ನ ಸಕ್ರಿಯವಾಗಿ ಬಳಸಿಕೊಳ್ಳಲು ಮುಂದಾಗಬೇಕು ಎಂದು ಅವರು ಪತ್ರದಲ್ಲಿ ಆಗ್ರಹಿಸಿದ್ದಾರೆ.