ಕಲಬುರಗಿ: ತಮ್ಮ ಬದುಕಿನಲ್ಲಿ ಸುಖಕ್ಕಿಂತಲೂ ಕಷ್ಟ, ನೋವುಗಳನ್ನೇ ಹೆಚ್ಚಾಗಿ ಕಂಡುಂಡ ವರಕವಿ ಬೇಂದ್ರೆ ಅವರಿಗೆ ಬದುಕಿನ ಕುರಿತಾಗಿ ಆಳವಾದ ಜ್ಞಾನವಿತ್ತು. ತಮ್ಮ ಎಲ್ಲಾ ಭಾವಗಳಿಗೆ ಅಕ್ಷರ ರೂಪವನ್ನು ನೀಡಿ, ಆ ಮೂಲಕ ಬದುಕಿನ ವಿವಿಧ ಮಗ್ಗುಲುಗಳನ್ನು ಪರಿಚಯಿಸಿದ ಮಹಾ ಮೇಧಾವಿ ದ.ರಾ. ಬೇಂದ್ರೆ ಅವರಾಗಿದ್ದಾರೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನಗರದ ಕನ್ನಡ ಭವನದ ಸುವರ್ಣ ಸಭಾ ಭವನದಲ್ಲಿ ಮಂಗಳವಾರ ಆಯೋಜಿಸಿದ ಬೇಂದ್ರೆ ಬೆಳಗು ವಿಶೇಷ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ, ಗೌರವ ಸಲ್ಲಿಸಿ ಮಾತನಾಡಿದ ಅವರು, ನಮ್ಮ ಕನ್ನಡ ಕಾವ್ಯ ಕ್ಷೇತ್ರಕ್ಕೆ ಬಹಳ ವಿಶಿಷ್ಟ ಶೈಲಿ ಮತ್ತು ಲಯಗಳ ಮೂಲಕ ನಾದದ ಗುಮಗು ಹಿಡಿಸಿದ ಶಬ್ದ ಗಾರುಡಿಗ, ವರಕವಿ, ರಸಋಷಿ ಎಂದೇ ಪ್ರಖ್ಯಾತರಾಗಿರುವ ಶ್ರೇಷ್ಠ ಕವಿ ದ. ರಾ. ಬೇಂದ್ರೆ ಅವರು ತಮ್ಮ ಕಾವ್ಯ ಶಕ್ತಿಯಿಂದ ಉತ್ಸಾಹದ ಚಿಲುಮೆಯನ್ನುಕ್ಕಿಸಿ ನೊಂದ ಜೀವಕ್ಕೆ ಸಾಂತ್ವನ ನೀಡಿ, ಪ್ರೀತಿ-ಪ್ರೇಮಗಳನ್ನು ಮೂಡಿಸಿ, ಸಾಹಿತ್ಯ ಕ್ಷೇತ್ರವನ್ನು ಮತ್ತಷ್ಟು ಶ್ರೀಮಂತಗೊಳಿಸಿದರು ಎಂದು ಮಾರ್ಮಿಕವಾಗಿ ಹೇಳಿದರು.
ಜಿಲ್ಲಾ ಕಸಾಪ ಕಾರ್ಯದರ್ಶಿ ಶಿವರಾಜ ಎಸ್.ಅಂಡಗಿ ಮಾತನಾಡಿ, ನಮ್ಮ ವರಕವಿ ದ. ರಾ. ಬೇಂದ್ರೆ ಅವರು ಜೀವನದಲ್ಲಿ ನೊಂದು ಬೆಂದು ಬಳಲಿದವರಾದರೂ ಕಾವ್ಯದ ಮೂಲಕವಾಗಿ ಮಿಂಚಿದ ರತ್ನವೆನಿಸಿದ್ದಾರೆ. ಜೀವನದಲ್ಲಿ ಮಕ್ಕಳ ಸಾವು, ಪತ್ನಿಯ ಸಾವು ಬೇಂದ್ರೆಯವರಿಗೆ ಅತೀವ ದುಖವನ್ನುಂಟು ಮಾಡಿದವು. ಆದರೂ ಇದ್ಯಾವುದಕ್ಕೂ ದೃತಿಗೆಢದೇ ಕೊರತೆಯ ಬದುಕಿನಲ್ಲಿಯೇ ಅಪಾರವಾದ ಶ್ರೇಷ್ಠ ಸಾಹಿತ್ಯ ಸಂಪತ್ತನ್ನು ನಿರ್ಮಾಣ ಮಾಡಿದ ಹೆಗ್ಗಳಿಕೆ ಬೇಂದ್ರೆ ಅವರಿಗೆ ಸಲ್ಲುತ್ತದೆ ಎಂದರು.
ಜಿಲ್ಲಾ ಕಸಾಪ ಕೋಶಾಧ್ಯಕ್ಷ ಶರಣರಾಜ್ ಛಪ್ಪರಬಂದಿ, ಕಾರ್ಯದರ್ಶಿ ರವೀಂದ್ರಕುಮಾರ ಭಂಟನಳ್ಳಿ, ಜಗದೀಶ ದೇಶಪಾಂಡೆ, ಬಾಬುರಾವ ಪಾಟೀಲ, ಮಲ್ಲಿಕಾರ್ಜುನ ಇಬ್ರಾಹಿಂಪುರ, ರಾಜೇಂದ್ರ ಮಾಡಬೂಳ, ರಾಜಶೇಖರ ಚೌಧರಿ, ಸಂತೋಷ ಕುಡಳ್ಳಿ, ರೇವಣಸಿದ್ದಪ್ಪ ಪಾಳಾ, ರೇವಣಸಿದ್ದಪ್ಪ ಜೀವಣಗಿ, ಶ್ರೀಕಾಂತ ಪಾಟೀಲ ದಿಕ್ಸಂಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಬೇಂದ್ರೆ ಜನ್ಮದಿನ `ವರಕವಿ ದಿನ’ವನ್ನಾಗಿ ಆಚರಿಸಿ: ಜ್ಞಾನಪೀಠ ಪ್ರಶಸ್ತಿ ಪುರಸ್ಕøತ ದ. ರಾ. ಬೇಂದ್ರೆ ಅವರ ಜನ್ಮದಿನವನ್ನು `ವರಕವಿ ದಿನ’ ಎಂದು ರಾಜ್ಯ ಸರ್ಕಾರದಿಂದ ಆಚರಿಸಬೇಕು. ಅಂಬಿಕಾತನಯದತ್ತ ಎಂಬ ಕಾವ್ಯನಾಮದೊಂದಿಗೆ ಪ್ರಸಿದ್ಧಿಗೊಂಡ ಕವಿ ದ.ರಾ. ಬೇಂದ್ರೆ ಅವರು ಪಾಮರರಾದಿಯಾಗಿ ಪಂಡಿತರವರೆಗೂ, ಗ್ರಾಮೀಣರಾದಿಯಾಗಿ ನಾಗರಿಕ ವಲಯದವರೆಗೂ ತಮ್ಮ ಕವಿತೆಗಳ ಮೂಲಕ ಸರ್ವರಿಗೂ ಆಪ್ತವಾಗಿದ್ದಾರೆ. ಪ್ರಾದೇಶಿಕ ದೇಶಿ ಭಾಷೆಯ ಸೊಗಡಿನಿಂದ ಕನ್ನಡ ಕಟ್ಟುವಲ್ಲಿ ವರಕವಿ ದ. ರಾ. ಬೇಂದ್ರೆ ಯವರ ಸಾಹಿತ್ಯ ಪ್ರಮುಖವಾಗಿದೆ. ಮಾತೃಭಾಷೆ ಮರಾಠಿಯಾದರೂ ಕನ್ನಡ ಸಾಹಿತ್ಯದಲ್ಲಿ ಅಪಾರ ಕೃಷಿ ಮಾಡಿ `ಕನ್ನಡದ ವರಕವಿ’ ಎಂಬ ಕೀರ್ತಿಗೆ ಪಾತ್ರರಾದ ಭಾವ ಗಾರುಡಿಗ ಬೇಂದ್ರೆಯವರ ಜನ್ಮದಿನವನ್ನು ಸರ್ಕಾರದಿಂದ `ವರಕವಿ ದಿನ’ ಎಂದು ಆಚರಿಸಿದರೆ, ನಾಡಿನ ಕನ್ನಡದ ಕವಿಗಳ ಚರಿತ್ರೆ ಮತ್ತು ಸಾಹಿತ್ಯ-ಸಂಸ್ಕøತಿ ಉಳಿಸಿ ಬೆಳೆಸಿದಂತಾಗುತ್ತದೆ.