ಅಲ್ಪಸಂಖ್ಯಾತರ ಅನುದಾನ ಕಡಿತಗೊಳಿಸದೇ ನ್ಯಾಯ ಕಲ್ಪಿಸಲು ಅಸಗರ ಚುಲಬುಲ್ ಆಗ್ರಹ
ಕಲಬುರಗಿ: ಈಚೆಗೆ ಮಂಡಿಸಲಾದ ಕೇಂದ್ರದ ಮುಂಗಡ ಪತ್ರದಲ್ಲಿ ಅಲ್ಪಸಂಖ್ಯಾತರ ಅನುದಾನದಲ್ಲಿ ಭಾರಿ ಕಡಿತ ಮಾಡಿರುವುದನ್ನು ಸರಪಡಿಸುವಂತೆ ಕುಡಾ ಮಾಜಿ ಅಧ್ಯಕ್ಷರು, ಅಲ್ಪಸಂಖ್ಯಾತರ ಮುಖಂಡರಾದ ಮೊಹಮ್ಮದ ಅಜಗರ ಚುಲ್ ಬುಲ್ ಆಗ್ರಹಿಸಿದರು.
ಮುಂಗಡ ಪತ್ರದಲ್ಲಿ ಅಲ್ಪಸಂಖ್ಯಾತರ ವರ್ಗಕ್ಕೆ ಆದ ಅನ್ಯಾಯ ಕುರಿತು ಪರಮಾರ್ಶಿಸಲು ಕರೆಯಲಾದ ಅಲ್ಪಸಂಖ್ಯಾತರ ಮುಖಂಡರ ಸಭೆಯಲ್ಲಿ ಮಾತನಾಡಿದರು.
ಅಲ್ಪಸಂಖ್ಯಾತರ ಸರ್ವಾಂಗೀಣ ಅಭಿವೃದ್ಧಿಗಾಗಿ ಕಳೆದ ಮುಂಗಡ ಪತ್ರದಲ್ಲಿ 5030 ಕೋ.ರೂ ಇಡಲಾಗಿತ್ತು. ಆದರೆ ಪ್ರಸಕ್ತವಾಗಿ ಕೇವಲ 3097 ಕೋ.ರೂ ಇಡುವ ಮೂಲಕ ಶೇ. 38 ರಷ್ಟು ಅನುದಾನ ಕಡಿತ ಮಾಡಲಾಗಿದೆ. ಇದು ಅಲ್ಪಸಂಖ್ಯಾತರರನ್ನು ತುಳಿಯುವ ಷಡ್ಯಂತ್ರ ಅಡಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅನುದಾನ ವರ್ಷ- ವರ್ಷ ಹೆಚ್ಚಳವಾಗಬೇಕು. ಆದರೆ ಕಡಿತ ಮಾಡಿರುವುದು ಶೋಭೆ ತರುವಂತದ್ದಲ್ಲ. ಆದ್ದರಿಂದ ಬಜೆಟ್ ಮೇಲಿನ ಚರ್ಚೆ ಸಂದರ್ಭದಲ್ಲಿ ಕಡಿತ ಮಾಡಲಾದ ಅನುದಾನ ಮತ್ತೆ ನೀಡುವ ಮುಖಾಂತರ ಅಲ್ಪಸಂಖ್ಯಾತರಿಗೆ ನ್ಯಾಯ ಕಲ್ಪಿಸಬೇಕು. ಪ್ರಮುಖ ವಾಗಿ ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ಯುಪಿಎಸ್ಸಿ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆ ಗಳ ಕುರಿತಾಗಿ ತರಬೇತಿ ನೀಡುವ ಅನುದಾನ ಬಂದ್ ಮಾಡಿರುವುದನ್ನು ಜತೆಗೆ ಪದವಿ ಪೂರ್ವ ನೀಡಲಾಗುತ್ತಿದ್ದ ಅಜಾದ್ ಶಿಷ್ಯವೇತನ ಸಹ ಸ್ಥಗಿತ ಗೊಳಿಸಿರುವುದನ್ನು ಸರಿಪಡಿಸಬೇಕೆಂದು ಅಜಗರ ಕೇಂದ್ರ ಸರ್ಕಾರವನ್ನು ಆಗ್ರಹಿಸಿದರು.
ಮದರಸಾ ನವೀಕರಣಕ್ಕೂ ಅನುದಾನ ಕಡಿತ ಮಾಡಲಾಗಿದೆ. ಕಳೆದ ವರ್ಷ 150 ಕೋ.ರೂ ಇದ್ದುದ್ದನ್ನು ಈಗ ಬರೀ 10 ಕೋ.ರೂ ಇಟ್ಟಿರುವುದು ಶೋಷಣೆ ಹಾಗೂ ಅನ್ಯಾಯಕ್ಕೆ ಹಿಡಿದ ಕನ್ನಡಿ ಯಾಗಿದೆ ಎಂದು ಮೊಹಮ್ಮದ ಅಜಗರ ಆಕ್ರೋಶ ವ್ಯಕ್ತಪಡಿಸಿದರು.
ಮದರಸಾ ಅಲ್ಪಸಂಖ್ಯಾತರ ಶಿಕ್ಷಣಕ್ಕೆ 160 ಕೋ.ರೂ ಇದ್ದ ಅನುದಾನ 10 ಕೋ.ರೂ.ಗೆ ಸಿಮಿತಗೊಳಿಸಲಾಗಿದೆ. ಏಕಲವ್ಯ ಮಾದರಿಯ ವಸತಿ ಶಾಲೆಯ 3880 ಶಿಕ್ಷಕರು ಹಾಗೂ 740 ಸಿಬ್ಬಂದಿಗಳ ನೇಮಕಾತಿಗೆ ಅನುಮತಿ ನೀಡಿ 3.50 ಕೋ. ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಿದರೆ ಉರ್ದು ಮದರಸಾ ಶಿಕ್ಷಕರ ಹಾಗೂ ಸಿಬ್ಬಂದಿ ನೇಮಕಕ್ಕೆ ನಯಾಪೈಸೆ ಅನುದಾನ ನಿಗದಿ ಮಾಡಿಲ್ಲ. ಕೌಶಲ್ಯ ಅಭಿವೃದ್ಧಿ ಹೆಚ್ಚಳದ ತರಬೇತಿ ಸ್ಥಗಿತಗೊಳಿಸಿರುವುದು.
ಒಟ್ಟಾರೆ ಅಲ್ಪಸಂಖ್ಯಾತರ ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕವಾಗಿ ಬಲ ತುಂಬುವ ಕಾರ್ಯಗಳನ್ನು ಬಂದ್ ಮಾಡಿರುವುದು ಹಾಗೂ ಅನುದಾನ ಕಡಿತ ಮಾಡಿರುವುದನ್ನು ಸರಪಡಿಸದಿದ್ದರೆ ಅಲ್ಪಸಂಖ್ಯಾತರೆಲ್ಲರೂ ಬೀದಿಗಿಳಿದು ಹೋರಾಟ ರೂಪಿಸಬೇಕಾಗುತ್ತದೆ ಎಂದು ಮೊಹಮ್ಮದ ಅಜಗರ್ ಚುಲಬುಲ್ ಬಲವಾಗಿ ಆಗ್ರಹಿಸಿದರು.
ಸಭೆಯಲ್ಲಿ ಚಿಂತಕರು ಹಾಗೂ ಸಮಾಜದ ಮುಖಂಡರಾದ ಇಸ್ಮಾಯಿಲ್ ಮೊದಸೀರ್, ಅಮ್ಜದ ಜಾವೀದ್, ಸಾದೀಕ ಕಿರ್ಮಾನಿ ಸೇರಿದಂತೆ ಮುಂತಾದವರಿದ್ದರು.